ಭಾರತದಲ್ಲಿ ವಿವಿಧ ಗಾತ್ರದ ಗಣೇಶನ ಮಣ್ಣಿನ, ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಿ ಮನೆಗಳು, ದೇವಾಲಯಗಳು ಮತ್ತು ಪೆಂಡಾಲ್ಗಳಲ್ಲಿ (ತಾತ್ಕಾಲಿಕ ರಚನೆಗಳು) ಒಂದು, ಮೂರು, ಐದು, ಏಳು ಅಥವಾ ಹತ್ತು ದಿನಗಳ ಕಾಲ ದೈವಿಕ ಅತಿಥಿ ವಿಗ್ರಹಗಳನ್ನು ಸ್ಥಾಪಿಸುವುದರೊಂದಿಗೆ ಹಬ್ಬವು ಪ್ರಾರಂಭವಾಗುತ್ತದೆ. ಭಕ್ತರು ವಿಗ್ರಹವನ್ನು ಹೂವುಗಳು ಮತ್ತು ಆಭರಣಗಳಿಂದ ಇನ್ನೂ ಮುಂತಾದ ಷೋಡಷೊಪಚಾರಗಳಿಂದ ಅಲಂಕರಿಸುತ್ತಾರೆ.
ಪ್ರಾರ್ಥನೆಗಳು ಮತ್ತು ಪೂಜೆಗಳು: ಗಣೇಶ ಚತುರ್ಥಿಯ ಸಮಯದಲ್ಲಿ ವೇದಶಾಸ್ತçವು ಪ್ರಮುಖ ಪಾತ್ರ ವಹಿಸುತ್ತದೆ. ಋಗ್ವೇದದ ವೇದಗಳು ಮತ್ತು ಗಣೇಶ ಸ್ತೋತ್ರಗಳನ್ನು ಪಠಿಸಲಾಗುತ್ತದೆ. ಗಣೇಶನ ಎಲ್ಲಾ ೧೦೮ ಹೆಸರುಗಳನ್ನು ಪಠಿಸುವುದರಿಂದ ಅವರಿಗೆ ಸಮೃದ್ಧಿ ಮತ್ತು ಸಂಪತ್ತು ಬರುತ್ತದೆ ಎಂದು ಜನರು ನಂಬುತ್ತಾರೆ. ಏಕೆಂದರೆ ಪುರಾಣವು ಹೇಳುವಂತೆ ಶಿವನು ಗಣೇಶನಿಗೆ ಇತರ ದೇವರಿಗಿಂತ ಮೊದಲು ಪೂಜಿಸಲ್ಪಡುವ ವರವನ್ನು ನೀಡಿದ್ದನು. ಆದ್ದರಿಂದ ಗಣೇಶನನ್ನು ಎಲ್ಲರಿಗಿಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮಂತ್ರಗಳು ಮತ್ತು ಭಜನೆಗಳ (ಭಕ್ತಿಗೀತೆಗಳು) ಪಠಣದೊಂದಿಗೆ ಗಣೇಶನಿಗೆ ದೈನಂದಿನ ಪ್ರಾರ್ಥನೆಗಳು ಮತ್ತು ಪೂಜೆಗಳನ್ನು ಅರ್ಪಿಸಲಾಗುತ್ತದೆ. ಭಕ್ತರು ಸಮೃದ್ಧಿ, ಯಶಸ್ಸು ಮತ್ತು ಅಡೆತಡೆಗಳ ನಿವಾರಣೆಗಾಗಿ ಆಶೀರ್ವಾದವನ್ನು ಬಯಸುತ್ತಾರೆ.
ಮೋದಕ ನೈವೇದ್ಯ: ಗಣೇಶನಿಗೆ ಸಿಹಿತಿಂಡಿಗಳು ತುಂಬಾ ಇಷ್ಟ, ಆದ್ದರಿಂದ ಪಂಚಾಮೃತ, ಹಣ್ಣುಗಳು ಮತ್ತು ಸಿಹಿತಿಂಡಿಗಳು ಮತ್ತು ವಿಶೇಷವಾಗಿ ಮೋದಕಗಳನ್ನು ಅವನ ಮುಂದೆ ‘ನೈವೇದ್ಯ’ ಅಥವಾ ‘ಭೋಗ’ ಎಂದು ಇಡಲಾಗುತ್ತದೆ. ಧಾರ್ಮಿಕ ಪೂಜೆಯ ನಂತರ ಈ ಭೋಗವನ್ನು ‘ಪ್ರಸಾದ’ ಎಂದು ವಿತರಿಸಲಾಗುತ್ತದೆ.
ಆಚರಣೆಗಳು:ನೃತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಸೇರಿದಂತೆ ವಿಸ್ತಾರವಾದ ಮೆರವಣಿಗೆಗಳು ಅನೇಕ ಪ್ರದೇಶಗಳಲ್ಲಿ ನಡೆಯುತ್ತವೆ. ಈ ಮೆರವಣಿಗೆಗಳಲ್ಲಿ ಸಾಮಾನ್ಯವಾಗಿ ವಿಗ್ರಹವನ್ನು ಸುಂದರವಾಗಿ ಅಲಂಕರಿಸಿದ ರಥ ಅಥವಾ ಪಲ್ಲಕ್ಕಿಯ ಮೇಲೆ ಬೀದಿಗಳಲ್ಲಿ ಹೊತ್ತುಕೊಂಡು ಹೋಗಲಾಗುತ್ತದೆ.
ವಿಸರ್ಜನೆ: ಹಬ್ಬದ ಕೊನೆಯ ದಿನದಂದು, ವಿಗ್ರಹವನ್ನು ಹತ್ತಿರದ ನೀರಿನ ಮೂಲಕ್ಕೆ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಗುತ್ತದೆ. ಇದು ಗಣೇಶನು ಮರ್ತ್ಯ ಲೋಕದಿಂದ ತನ್ನ ಸ್ವರ್ಗೀಯ ವಾಸಸ್ಥಾನಕ್ಕೆ ಹಿಂದಿರುಗುವುದನ್ನು ಸಂಕೇತಿಸುತ್ತದೆ. ವಿಸರ್ಜನೆಯು ಪಠಣಗಳು, ಸಂಗೀತ ಮತ್ತು ಭವ್ಯವಾದ ವಿದಾಯದೊಂದಿಗೆ ಇರುತ್ತದೆ.
ಗಣೇಶನ ವಿಸರ್ಜನ ಮೆರವಣಿಗೆಯ ಸಮಯದಲ್ಲಿ, ಭಕ್ತರು ‘ಗಣಪತಿ ಬಪ್ಪಾ ಮೋರ್ಯಾ, ಮಂಗಳಮೂರ್ತಿ ಮೋರಿಯಾ’ ಎಂದು ಗಣೇಶನನ್ನು ಜಪಿಸುತ್ತಾರೆ. ಇಲ್ಲಿ ಮಂಗಳ ಎಂದರೆ ‘ಶುದ್ಧ’, ಮೂರ್ತಿ ಎಂದರೆ ‘ವಿಗ್ರಹ’ ಅಥವಾ ‘ರೂಪ’ ಎಂದರ್ಥ. ಹಾಗಾಗಿ ಗಣಪತಿಯು ಶುದ್ಧ ರೂಪದಲ್ಲಿರುವವ ಎಂದು ಹೇಳಬಹುದು. ಅದೇ ರೀತಿ ‘ಬಪ್ಪ ಮೋರ್ಯ’ದ ಬಗ್ಗೆಯೂ ಒಂದು ದಂತಕಥೆಯಿದೆ. 14ನೇ ಶತಮಾನದಲ್ಲಿ ‘ಮೋರ್ಯ ಗೋಸಾವಿ’ ಎಂಬ ಗಣೇಶನ ಮಹಾನ್ ಭಕ್ತನಿದ್ದನು. ಅವನು ಮೂಲತಃ ಕರ್ನಾಟಕದ ಸಾಲಿಗ್ರಾಮ ಎಂಬ ಹಳ್ಳಿಯವನಾಗಿದ್ದು, ಅವನ ಭಕ್ತಿಯನ್ನು ಹುಚ್ಚುತನವೆಂದು ಪರಿಗಣಿಸಲಾಗುತ್ತಿತ್ತು. ನಂತರ ಅವನು ಪುಣೆ ಬಳಿಯ ಚಿಂಚ್ವಾಡ್ಗೆ ಪ್ರಯಾಣ ಬೆಳೆಸಿ ಅಲ್ಲಿಯೇ ನೆಲೆಸಿದನು. ತನ್ನ ತೀವ್ರ ತಪಸ್ಸಿನಿಂದ ಭಗವಂತನನ್ನು ಪ್ರಾರ್ಥಿಸಿದನು. ಮೋರ್ಯನ ಭಕ್ತಿಯಿಂದ ಸಂತೋಷಗೊಂಡ ಗಣೇಶ ದೇವರು ಅವನ ಕನಸಿನಲ್ಲಿ ಕಾಣಿಸಿಕೊಂಡು ಅವನಿಗೆ ಒಂದು ವರವನ್ನು ದಯಪಾಲಿಸಿದರು. ಮೋರ್ಯ ಭೌತಿಕ ಸಂಪತ್ತನ್ನು ನಿರಾಕರಿಸಿ ತನ್ನ ಹೆಸರು ದೇವರೊಂದಿಗೆ ಶಾಶ್ವತವಾಗಿ ಸಂಪರ್ಕ ಹೊಂದಬೇಕೆಂದು ಕೇಳಿಕೊಂಡನು. ಆದ್ದರಿಂದ ಗಣೇಶನು ಇನ್ನೂ ಮುಂದೆ ಪ್ರತಿ ಬಾರಿ ತನ್ನ ಹೆಸರನ್ನು ಜಪಿಸುವಾಗ, ಅದರ ನಂತರ ಮೋರ್ಯ ಎಂದು ಜನರು ಹೇಳುತ್ತಾರೆಂದು ವರವಿತ್ತನು. ಹೀಗಾಗಿ ‘ಗಣಪತಿ ಬಪ್ಪಾ ಮೋರ್ಯ’ ಎಂದು ಕರೆಯಲಾಯಿತು. ಮೋರ್ಯನು ಶ್ರೀ ಚಿಂತಾಮಣಿಯಲ್ಲಿ ಸಿದ್ಧಿ (ವಿಶೇಷ ಶಕ್ತಿಗಳು) ಪಡೆದನು. ಅವನ ಮಗ ಈ ಘಟನೆಯ ಸ್ಮರಣಾರ್ಥವಾಗಿ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಮೋರ್ಯನು ಅಹಮದಾಬಾದ್ನ ಸಿದ್ಧಿವಿನಾಯಕ ಮತ್ತು ಮೋರ್ಗಾಂವ್ನ ಮೋರ್ಯೇಶ್ವರದಲ್ಲಿಯೂ ತಪಸ್ಸು ಮಾಡಿದನೆಂದು ಹೇಳಲಾಗುತ್ತದೆ, ಅಲ್ಲಿಯೂ ಅವನು ದೇವಾಲಯವನ್ನು ನಿರ್ಮಿಸಿದ್ದಾನೆಂದು ನಂಬಲಾಗಿದೆ.
ಇನ್ನೊAದು ಕಥೆಯ ಪ್ರಕಾರ, ಮೋರ್ಯ ಎಂಬುದು ‘ಮ್ಹೋರೆ’ ಮತ್ತು ‘ಯಾ’ ಎಂಬ ಎರಡು ಪದಗಳ ಸಂಯೋಜನೆಯಾಗಿದೆ ಎಂದು ಹೇಳಲಾಗುತ್ತದೆ. ಕೊಲ್ಹಾಪುರಿ ಉಪಭಾಷೆಯಲ್ಲಿ ‘ಮ್ಹೋರೆ’ ಮತ್ತು ‘ಯಾ’ ಎಂದರೆ ‘ದಯವಿಟ್ಟು ಮುಂದೆ ಬಂದು ಆಶೀರ್ವಾದಿಸಿ’ ಎಂಬರ್ಥವಿದೆ.
*ಓಂ*
ಗಣೇಶನ ವಿಗ್ರಹದ ಹಣೆಯ ಮೇಲೆ ಹೆಚ್ಚಾಗಿ ಓಂ ಅಕ್ಷರವನ್ನು ಚಿತ್ರಿಸಲಾಗುತ್ತದೆ. ಓಂ ಎಂಬುದು ಸರ್ವವ್ಯಾಪಿ, ಸರ್ವಶಕ್ತ ಮತ್ತು ಎಲ್ಲಾ ಅಸ್ತಿತ್ವದ ಮೂಲವಾದ ಪರಮಾತ್ಮನನ್ನು ಪ್ರತಿನಿಧಿಸುವ ಪವಿತ್ರ ಸಂಕೇತವಾಗಿದೆ. ಇದಕ್ಕೆ ನೂರಕ್ಕೂ ಹೆಚ್ಚು ಅರ್ಥಗಳಿವೆ, ಅದರ ಒಂದು ಪದದ ಅರ್ಥ ‘ದೇವರುಗಳನ್ನು ಸ್ವಾಗತಿಸುವುದು’. ‘ಗಣೇಶ ಪುರಾಣ’ದಲ್ಲಿ, ಗಣೇಶನನ್ನು ‘ಪ್ರಣವ’ ಮತ್ತು ‘ಓಂ’ ಎಂಬ ಹೆಸರುಗಳಿಂದ ಕೂಡ ಸಂಬೋಧಿಸಲಾಗುತ್ತದೆ. ಓಂ ಎಂಬುದು ಬ್ರಹ್ಮಾಂಡವು ಹುಟ್ಟಿಕೊಂಡ ಸ್ಥಳದಿಂದ ಉತ್ಪತ್ತಿಯಾದ ಮೊದಲ ಶಬ್ದ ಎಂದು ಹೇಳಲಾಗುತ್ತದೆ. ಈ ಒಂದು ಅಕ್ಷರವು ಸೃಷ್ಟಿಯಿಂದ ವಿನಾಶದವರೆಗೆ ಸಾಗುವ ಸಂಪೂರ್ಣ ಚಕ್ರವನ್ನು ಸಂಕೇತಿಸುತ್ತದೆ. ಆದ್ದರಿಂದ, ಯಾವುದೇ ಶುಭ ಸಂದರ್ಭವನ್ನು ಪ್ರಾರಂಭಿಸುವ ಮೊದಲು ‘ಓಂ’ ಅನ್ನು ಉಚ್ಚರಿಸಲಾಗುತ್ತದೆ ಮತ್ತು ಯಾವುದೇ ದೇವರು ಅಥವಾ ದೇವತೆಯನ್ನು ಪೂಜಿಸುವ ಮೊದಲು, ಗಣೇಶನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
*ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು*
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದರಿಂದ ದೋಷ/ಶಾಪಗಳಿಂದ ಬಳಲುತ್ತಾರೆ ಎಂದು ಜನರು ನಂಬುತ್ತಾರೆ. ಗಣೇಶನು ತನ್ನ ಹುಟ್ಟುಹಬ್ಬದಂದು ಒಂದೊಂದು ಮನೆಯಿಂದ ಸಿಹಿತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದನೆಂದು ಹೇಳಲಾಗುತ್ತದೆ. ಅವನು ಬಹಳಷ್ಟು ಲಡ್ಡುಗಳನ್ನು ತಿನ್ನುತ್ತಾ ತನ್ನ ಸವಾರ ಮೂಷಿಕನ ಮೇಲೆ ಕುಳಿತನು. ಹಾವನ್ನು ನೋಡಿದ ಭಯಭೀತನಾದ ಮೂಷಿಕನು ಎಡವಿ ಬಿದ್ದ, ಪರಿಣಾಮವಾಗಿ ಗಣೇಶ ಕೆಳಗೆ ಬಿದ್ದನು. ಇದರಿಂದ ಎಲ್ಲಾ ಲಡ್ಡುಗಳು ಅವನ ಬಾಯಿಂದ ಬಿದ್ದವು. ಆದಾಗ್ಯೂ, ಗಣೇಶನು ಎಲ್ಲಾ ಲಡ್ಡುಗಳನ್ನು ಮತ್ತೊಮ್ಮೆ ಬಾಯಿಗೆ ತುಂಬಿಸಿ ಹಾವಿನಿಂದ ತನ್ನ ಹೊಟ್ಟೆಯನ್ನು ಕಟ್ಟಿಕೊಂಡನು. ಇದನ್ನೆಲ್ಲಾ ನೋಡಿದ ಚಂದ್ರನು ಜೋರಾಗಿ ನಗಲು ಪ್ರಾರಂಭಿಸಿದನು. ಇದನ್ನು ಕಂಡು ಕೋಪಗೊಂಡ ಗಣೇಶನು ತನ್ನ ಒಂದು ದಂತವನ್ನು ಹೊರತೆಗೆದು ಚಂದ್ರನ ಮೇಲೆ ಎಸೆದನು. ಮಾತ್ರವಲ್ಲದೇ ನನ್ನ ಹುಟ್ಟಿದ ದಿನದಂದು ನೀನನ್ನು ನೋಡುವುದು ಅಶುಭವೆಂದು ಶಾಪವಿತ್ತನು. ಅದಕ್ಕಾಗಿಯೇ ಜನರು ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ನೋಡುವುದಿಲ್ಲ ಎಂದು ಹೇಳುತ್ತಾರೆ.
‘ಸ್ಕಂದ ಪುರಾಣ’ದ ಪ್ರಕಾರ, ಒಮ್ಮೆ ಗಣೇಶನನ್ನು ಚಂದ್ರಲೋಕಕ್ಕೆ ಔತಣಕೂಟಕ್ಕೆ ಆಹ್ವಾನಿಸಿದಾಗ, ಅವನು ಬಹಳಷ್ಟು ಲಡ್ಡುಗಳನ್ನು ತಿಂದನು. ಇದರಿಂದ ಅವನಿಗೆ ನಡೆಯಲು ಮತ್ತು ತನ್ನನ್ನು ಸಮತೋಲನಗೊಳಿಸಲು ಸಾಧ್ಯವಾಗದೇ ಹೊಟ್ಟೆ ಒಡೆದುಹೋಗಿ ಎಲ್ಲಾ ಲಡ್ಡುಗಳು ಹೊರಬಂದವು. ಇದನ್ನು ನೋಡಿ ಚಂದ್ರನು ನಗಲು ಪ್ರಾರಂಭಿಸಿದನು, ಇದರಿಂದ ಕುಪಿತನಾದ ಗಣೇಶನು ಚಂದ್ರನಿಗೆ ‘ನೀನು ನಾಶವಾಗಿ ಹೋಗು’ ಎಂದು ಶಪಿಸಿದನು. ಇದರಿಂದಾಗಿ ಈ ಶಾಪಗ್ರಸ್ತ ಚಂದ್ರನು ವಿಶ್ವದಿಂದ ಕಣ್ಮರೆಯಾಗಿ ಇಡೀ ಜಗತ್ತು ಕತ್ತಲೆಯಲ್ಲಿ ವಾಸಿಸಲು ಪ್ರಾರಂಭಿಸಿತು. ಚಂದ್ರನ ಬೆಳಕಿನ ಕೊರತೆಯಿಂದ ವಿಶ್ವವು ಕ್ರಮೇಣ ಕ್ಷೀಣಿಸುತ್ತ ಬಂದಾಗ ಎಲ್ಲಾ ದೇವತೆಗಳು ಗಣೇಶನ ಮನಸ್ಸನ್ನು ಬದಲಾಯಿಸಲು ಮತ್ತು ಅವನ ಶಾಪವನ್ನು ಹಿಂದಕ್ಕೆ ಪಡೆಯಲು ಶಿವನನ್ನು ಪ್ರಾರ್ಥಿಸಿದರು. ಚಂದ್ರನು ಗಣೇಶನ ಬಳಿ ತಾನು ಮಾಡಿದ್ದೆಲ್ಲಕ್ಕೂ ಕ್ಷಮೆಯಾಚಿಸಿದನು. ಇಷ್ಟೆಲ್ಲಾ ಆದ ಮೇಲೆ, ಗಣೇಶನು ತನ್ನ ಶಾಪವನ್ನು ಹಿಂದಕ್ಕೆ ಪಡೆಯಲು ಒಪ್ಪಿಕೊಂಡನು ಆದರೆ ಪ್ರತಿ ತಿಂಗಳ ಒಂದು ದಿನ ಚಂದ್ರನು ಅಗೋಚರವಾಗಿರುತ್ತಾನೆ ಮತ್ತು ಗಣೇಶ ಚತುರ್ಥಿಯ ದಿನದಂದು ಭಾಗಶಃ ಮಾತ್ರ ಗೋಚರಿಸುತ್ತಾನೆ ಹಾಗೂ ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ವೀಕ್ಷಿಸುವವರು ಶಾಪವನ್ನು ಎದುರಿಸಬೇಕಾಗುತ್ತದೆ ಎಂದು ಅವನು ಹೇಳಿದನು. ಹಾಗಾಗಿ ಗಣೇಶ ಚತುರ್ಥಿಯ ದಿನದಂದು ಜನರು ಚಂದ್ರನನ್ನು ನೋಡುವುದನ್ನು ತಪ್ಪಿಸಲು ಇದೇ ಕಾರಣ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ ಗಣೇಶ ಚತುರ್ಥಿಯು ಎಲ್ಲರಲ್ಲಿಯೂ ಸಮೃದ್ಧಿ, ಸಂಪತ್ತು, ಆರೋಗ್ಯ, ಜ್ಞಾನ ಮೊದಲಾದವುಗಳನ್ನು ಪ್ರವರ್ಧಮಾನ ತರುತ್ತದೆ ಎಂದು ಜನರು ನಂಬುತ್ತಾರೆ; ಅದಕ್ಕಾಗಿಯೇ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯ ಹಿಂದಿನ ಗಣನೀಯ ಇತಿಹಾಸ, ಅಗತ್ಯ ಸಂಗತಿಗಳು ಮತ್ತು ಮುಖ್ಯವಾಗಿ ಗಣೇಶನ ಆಶೀರ್ವಾದದಿಂದ ಪ್ರತಿಯೊಬ್ಬ ಮನುಷ್ಯನ ಜೀವನವು ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯುತ್ತದೆ ಎಂದು ನಂಬಲಾಗಿದೆ.
ಒಂದು ಪ್ರಮುಖ ಧಾರ್ಮಿಕ ಆಚರಣೆಯ ಬಗ್ಗೆ ಎಷ್ಟೇ ಮಾಹಿತಿ ಸಂಗ್ರಹಿಸಿದರೂ ಅದು ಪರಿಪೂರ್ಣವೆಂದಾಗುವುದಿಲ್ಲ. ಸಂಗ್ರಹಿಸಿದ ಮಾಹಿತಿಗಳಲ್ಲೂ ಅರೆಕೊರೆಗಳಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈ ಲೇಖನದಲ್ಲಿ ಏನಾದರೂ ತಪ್ಪಿದ್ದರೆ ಸಹೃದಯಿ ಬಂಧುಗಳ ಸಲಹೆಗಳಿಗೆ ಸದಾ ಸ್ವಾಗತ.
ಬರಹ: ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ