ಬೆಂಗಳೂರು:
ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಉದ್ಯಮಿಗಳ ಕೈಯಲ್ಲಿ ಸಿಲುಕಿಕೊಂಡಿದ್ದು, ಮಾಧ್ಯಮಗಳನ್ನ ತಮ್ಮ ಸ್ವಂತ ಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ವಿಸ್ತಾರ ಸುದ್ದಿ ವಾಹಿನಿಯ ಒಂದನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು “ಸಮಾಜಕ್ಕೆ ಕೃಷಿಕ, ಕಾರ್ಮಿಕ, ಶಿಕ್ಷಕ ಮತ್ತು ಸೈನಿಕ ಈ ನಾಲ್ಕುಮಂದಿ ಅತ್ಯಂತ ಅವಶ್ಯಕ. ಜತೆಗೆ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗ – ಇವು ಪ್ರಜಾಪ್ರಭುತ್ವದ ನಾಲ್ಕು ಸುಭದ್ರ ಕಂಬಗಳು ಗಟ್ಟಿಯಾಗಿ ಇರಬೇಕು ಎಂದು ಅಭಿಪ್ರಾಯಪಟ್ಟರು.
ಸಮಾಜವನ್ನು ತಿದ್ದುವಂತಹ ಶಕ್ತಿ ಮಾಧ್ಯಮರಂಗಕ್ಕೆ ಇದೆ. ಪ್ರಜಾಪ್ರಭುತ್ವದ ಮೂರು ಅಂಗಗಳು ತಪ್ಪು ಮಾಡಿದಾಗಲೂ ಎಚ್ಚರಿಸುವುದೇ ಮಾಧ್ಯಮ. ಆದರೆ ಇಂದು ಮಾಧ್ಯಮ ಕ್ಷೇತ್ರ ಉದ್ಯಮವಾಗಿ, ಖಾಸಗಿ ಆಸ್ತಿಯಾಗಿ ಪರಿವರ್ತನೆಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮ ಉದ್ಯಮವಾದ ತಕ್ಷಣ, ಅವರವರ ಹಿತಾಸಕ್ತಿಗೆ, ವಿಚಾರಗಳಿಗೆ, ರಕ್ಷಣೆಗೆ ಬಳಕೆಯಾಗುತ್ತಿದೆ. ನಾಯಿಕೊಡೆಗಳಂತೆ ಬೇಕಾದಷ್ಟು ಮಾಧ್ಯಮಗಳು ಬಂದು ಹೋಗಿವೆ. ನಾನು ಕೂಡ ಈ ಪ್ರಯೋಗ ಮಾಡಿ ಸುಮ್ಮನಾದೆ ಎಂದರು.
ಬಂಡವಾಳಶಾಹಿಗಳ ಕೈಗೆ ಸಿಲುಕಿ, ಕೆಲವು ಮಾಧ್ಯಮಗಳು ಒಂದು ಜಾತಿ, ಧರ್ಮ, ವರ್ಗ, ಸೀಮಿತ ವಿಚಾರ, ಆಚಾರ, ಅವರವರ ಹಿತಾಸಕ್ತಿಗೆ ಅನುಕೂಲವಾಗುವಂತೆ ವರ್ತಿಸುತ್ತಾ ಇವೆ. ಎಲ್ಲಾ ವರ್ಗ, ಸಮಾಜಕ್ಕೆ ತಲುಪುತ್ತದೆಯೋ ಅದು ನಿಜವಾದ ಮಾಧ್ಯಮ ಎಂದು ಹೇಳಿದರು.
ಕೆಲವು ಮಾಧ್ಯಮಗಳು, ಅದರಲ್ಲೂ ಒಂದಷ್ಟು ವರದಿಗಾರರು ಇಲ್ಲ, ಸಲ್ಲದ್ದನ್ನೇ ಕೇಳುತ್ತಾರೆ. ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೀಗಂದರು ಎಂದು ಅವರು ಹೇಳಿದ ಯಾವುದೋ ಒಂದು ಸಾಲನ್ನು ಹಿಡಿದುಕೊಂಡು ಬಂದು ಇನ್ನೊಬ್ಬರನ್ನು ಪ್ರಶ್ನೆ ಕೇಳುತ್ತಾರೆ. ಅವರು ಹೇಳಿದ್ದು ಇವರಿಗೆ, ಇವರು ಹೇಳಿದ್ದು ಅವರಿಗೆ ಕೇಳುವುದೇ ಪತ್ರಿಕೋದ್ಯಮ ಆಗಿದೆ. ಈ ರಾಜಕಾರಣಿಗಳೂ ಮಾಧ್ಯಮದಲ್ಲಿ ಬರಬೇಕು ಎನ್ನುವ ಚಟಕ್ಕೆ ಬಿದ್ದು ಮಾತನಾಡುತ್ತಾರೆ. ಅದೇ ಸುದ್ದಿ, ವಿವಾದವಾಗುತ್ತದೆ ಎಂದರು.
ಮಾಧ್ಯಮಗಳು ನನ್ನನ್ನು ಬಂಡೆ ಎಂದು ಕರೆಯಲು ಪ್ರಾರಂಭ ಮಾಡಿದವು. ಅದಕ್ಕೆ ನಾನು ‘ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ’ ಎಂದು ಹೇಳಿದೆ. ನಾವು 20- 30 ವರ್ಷಗಳ ಕಾಲ ಉಳಿ ಪೆಟ್ಟು ತಿಂದು ರಾಜಕೀಯದಲ್ಲಿ ಬೆಳೆದು ಬಂದಿರುತ್ತೇವೆ. ಅದೇ ರೀತಿ ಮಾಧ್ಯಮಗಳು ಸಹ ಕಷ್ಟಪಟ್ಟೇ ಒಂದು ಹಂತಕ್ಕೆ ಬೆಳೆದು ಬಂದಿರುತ್ತವೆ, ಮಾಧ್ಯಮಗಳ ಒಳಗೆ ಒಳ್ಳೆಯ ಮುಖಚರ್ಯೆ ಇದ್ದರೆ ಬೆಳೆಯಲು ಸಾಧ್ಯ ಅಲ್ಲವೇ? ಎಂದು ಪ್ರಶ್ನಿಸಿದರು.
*ರಾಜಕಾರಣಿಗಳನ್ನ ಕಳ್ಳರು ಎಂದು ಕರೆಯುವಂತಾಗಿದೆ*
ನಾನು ಶಾಲೆ ಓದುವಾಗ ನಮ್ಮ ಕನಕಪುರದ ಎಂಎಲ್ಎ ಕರಿಯಪ್ಪ ಅಂತ ಇದ್ದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರು ಎಂದು ನಮ್ಮ ತಾತ ಅವರ ಕಾಲಿಗೆ ಬೀಳಿಸುತ್ತಿದ್ದರು. ಈಗ ನಾವೆಲ್ಲಾ ಜೈಲಿಗೆ ಹೋಗಿ ಬಂದಿರುವುದು ನೋಡಿ, ಮಾಧ್ಯಮಗಳಲ್ಲಿ ಬಂದ ತಕ್ಷಣ ಕಳ್ಳ ಎಂದು ಕರೆಯುವಂತಾಗಿದೆ. ಸಣ್ಣದಾಗಿ ಮಾಡಿದ ತಪ್ಪನ್ನು ನೂರಾರು ಬಾರಿ ತೋರಿಸುವ ಮಾಧ್ಯಮಗಳು ರಾಜಕಾರಣಿಗಳನ್ನು ಸಮಾಜಕ್ಕೆ ಖಳನಾಯಕರಂತೆ ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಮೊದಲು ಟಿವಿಯ ಬಳಿ ಹೋಗಿ ಚಾನೆಲ್ ಬದಲಾಯಿಸಬೇಕಿತ್ತು, ಆದರೆ ಈಗ ನಮ್ಮಗಳ ಮುಖ ಬಂದ ತಕ್ಷಣ ಈ ಮುಖ ಸರಿಯಿಲ್ಲ ಎಂದು ಕುಳಿತಲ್ಲೇ ರಿಮೋಟ್ನಲ್ಲಿ ಚಾನೆಲ್ ಬದಲಾಯಿಸುತ್ತಾರೆ. ಅದೇ ರೀತಿಯಾಗಿ ಮಾಧ್ಯಮಗಳೂ ಪಕ್ಷಪಾತ ಮಾಡಿದರೆ ಜನ ಚಾನೆಲ್ ಅನ್ನೇ ಬದಲಾಯಿಸುತ್ತಾರೆ ಎಂದರು.
ಇದೇ ರೀತಿ ನಾವು ಸರ್ಕಾರ ಸರಿಯಾಗಿ ನಡೆಸಿದರೆ ನಮ್ಮನೇ ಆಯ್ಕೆ ಮಾಡುತ್ತಾರೆ. ಸರಿಯಾಗಿ ಕೆಲಸ ಮಾಡದಿದ್ದರೆ ಚಾನೆಲ್ ಬದಲಾಯಿಸಿದಂತೆ ಬದಲಾಯಿಸುತ್ತಾರೆ. ಆದ ಕಾರಣ ಮಾಧ್ಯಮಗಳು ಸರ್ಕಾರದ ಹಾಗೂ ನಮ್ಮ ತಪ್ಪುಗಳನ್ನು ತಿದ್ದಬೇಕು, ಸರಿಯಾದ ಮಾರ್ಗದಲ್ಲಿ ಹೋಗುವಂತೆ ಹೇಳಬೇಕು. ಎಂದಿಗೂ ಬಂಡವಾಳಶಾಹಿಗಳ, ಒಂದು ವರ್ಗದ, ಒಂದು ಜಾತಿಯ ಕೈಗೆ ಈ ಕ್ಷೇತ್ರ ಸಿಕ್ಕಿಹಾಕಿಕೊಳ್ಳದಿರಲಿ ಎಂದು ಪುನರುಚ್ಚರಿಸಿದರು.
ನಮಗೆ ಎರಡೇ ಕಣ್ಣು. ಮಾಧ್ಯಮಕ್ಕೆ ಲಕ್ಷಾಂತರ ಕಣ್ಣು. ಆದ ಕಾರಣ ಸರಿಯಾದ ರೀತಿಯಲ್ಲಿ ನಮ್ಮನ್ನು ತಿದ್ದಿ, ತೀಡಿದರೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬಹುದು ಎಂದರು.
ವಿಸ್ತಾರ ವಾಹಿನಿ ಪ್ರಾರಂಭವಾದಾಗ ಇದರ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಹಾಗೂ ಚಾನೆಲ್ ಹಿಂದೆ ಇದ್ದವರಿಗೆ ‘ನೂರು ಜೋಡಿನ ಏಟು ತಿನ್ನಬಹುದು, ದುಡ್ಡಿನೇಟು ತಿನ್ನಲು ಆಗುವುದಿಲ್ಲ’ ಎಂದು ಗಾದೆ ಮಾತು ಹೇಳಿದ್ದೇ. ನಡೆಸುವಾಗ ಕಷ್ಟವಾಗಬಹುದು ಎಂದು ಕಿವಿಮಾತು ಹೇಳಿದ್ದೆ, ಆದರೆ ಒಂದೇ ವರ್ಷದಲ್ಲಿ ದೊಡ್ಡದಾಗಿ ಬೆಳೆದು, ಸಾಕಷ್ಟು ಹೆಸರು ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಸ್ತಾರ ವಾಹಿನಿ ಕೆಲಸ ಮಾಡುತ್ತಿದೆ ಎಂದು ತಿಳಿದು ಸಂತಸವಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು, ಸಿಎಸ್ಆರ್ ನಿಧಿ ಬಳಸಿ, ಶಾಲೆಗಳನ್ನು ದತ್ತು ತೆಗೆದುಕೊಂಡು, ಅಭಿವೃದ್ಧಿಗೊಳಿಸುವ ಹೊಸ ಪ್ರಯೋಗಕ್ಕೆ ಸರ್ಕಾರ ಕೈ ಹಾಕಿದೆ. ಇದಕ್ಕೆ ವಿಸ್ತಾರ ವಾಹಿನಿಯವರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ನಾನು ಸಹ ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಉಳ್ಳವನಾಗಿ, ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಕೆಲಸ ಮಾಡುವ ಅಭಿಲಾಷೆ ಹೊಂದಿದ್ದೇನೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ಬೆಂಗಳೂರು ಅಥವಾ ನಗರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬೇಕು ಎನ್ನುವ ಆಸೆಯಿದೆ. ಆದ ಕಾರಣ 2000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನ ಸಿಎಸ್ಆರ್ ಅಡಿಯಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಯೋಜನೆ ಹಾಕಿಕೊಂಡಿದ್ದೇವೆ. ಇದನ್ನ ಪಕ್ಷದ ಪ್ರಣಾಳಿಕೆಯಲ್ಲೂ ಹೇಳಿದ್ದೆವು. ಈ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೂ ಕೆಲಸ ಮಾಡುತ್ತಿದ್ದಾರೆ ಎಂದರು.