ಖಾನಾಪುರ: ಎಲ್ಲರಿಗೂ ನಮ್ಮ ಸನಾತನ ಧರ್ಮದ ತಿರುಳನ್ನು ತಿಳಿಸಲು, ಎಲ್ಲರಿಗೂ ವೇದದ ಮಹತ್ವ ತಿಳಿಸಲು ಭಗವದ್ಗೀತೆ ಪಠಣ ಮಹತ್ವವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಹೇಳಿದರು.
ಖಾನಾಪುರ ಪಟ್ಟಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಗಳಲ್ಲಿ ಧರ್ಮ ಜಾಗೃತಿ ಕಡಿಮೆ. ನಮ್ಮ ಧರ್ಮ ಮತ್ತು ಸಂಸ್ಕೃತಿಯ ಮಹತ್ವದ ಬಗ್ಗೆ ತಿಳುವಳಿಕೆ ಕಡಿಮೆ. ಆದರೂ ನಿಧಾನವಾಗಿ ಧರ್ಮಜಾಗೃತಿ ನಡೆದಿದ್ದು, ಭಗವದ್ಗೀತೆಯ ಮಹತ್ವ ಈಗ ಎಲ್ಲರಿಗೂ ಗೊತ್ತಾಗತೊಡಗಿದೆ. ಸಾಧು ಸಂತರು ಇಡೀ ದೇಶ ಓಡಾಡಿ ಭಗವದ್ಗೀತೆ ಮಹತ್ವವನ್ನು ತಿಳಿಸಿದ್ದಾರೆ. ಮಹತ್ವ ಗೊತ್ತಾದರೂ ಓದಿದವರ ಸಂಖ್ಯೆ ಕಡಿಮೆ ಇದೆ ಎಂದು ಶ್ರೀಗಳು ಹೇಳಿದರು.
ಭಗವದ್ಗೀತೆ ಮಹತ್ವ ತಿಳಿಸುವ ಕೆಲಸವನ್ನು ಭಗವದ್ಗೀತೆ ಅಭಿಯಾನದ ಮೂಲಕ ಮಾಡಲಾಗುತ್ತಿದೆ. ಇದರ ಅಂಗವಾಗಿ ನ.21ರಿಂದ ಒಂದು ತಿಂಗಳ ಕಾಲ ರಾಜ್ಯದಲ್ಲಿ ಭಗವದ್ಗೀತೆ ಅಭಿಯಾನ ನಡೆಯಲಿದೆ. ಈ ವರ್ಷ ಬೆಳಗಾವಿಯನ್ನು ಕೇಂದ್ರವಾಗಿಸಿಕೊಂಡು ರಾಜ್ಯಮಟ್ಟದ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಮ್ಮಲ್ಲಿ ಇತ್ತೀಚೆಗೆ ಹಲವಾರು ಹೊಸ ಸಮಸ್ಯೆಗಳು ಉದ್ಭವಿಸುತ್ತಿವೆ. ಇಂದು ನಮ್ಮಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿದೆ. ಮಾನಸಿಕ ಒತ್ತಡ ಜಾಸ್ತಿಯಾಗಿದೆ. ಮನಸ್ಸು ಖಾಲಿ ಇರುವುದಿಲ್ಲ. ಇಂದಿನ ಸಮಸ್ಯೆಗಳಿಗೆ ಪರಿಹಾರ ಭಗವದ್ಗೀತೆ ಪಠಣ. ಧರ್ಮದ ಮೂಲವಸ್ತು ಒಂದೇ ಆದರೂ ಆಚರಣೆ ಬೇರೆ ಬೇರೆ ಇದೆ. ಭಗವದ್ಗೀತೆಯಿಂದ ಧಾರ್ಮಿಕ ಸಂಘರ್ಷ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ನಮ್ಮ ಮನಸ್ಸಿನ ಸ್ಥಿತಿಗೂ, ಆಹಾರಕ್ಕೂ ಪರಸ್ಪರ ಸಂಬಂಧವಿದೆ. ಆದಷ್ಟು ಸಾತ್ವಿಕ ಆಹಾರ ಸೇವನೆ ಮಾಡಬೇಕು ಎಂದೂ ಶ್ರೀಗಳು ಹೇಳಿದರು.
ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್, ಸದಸ್ಯರಾದ ಅರುಣ ನಾಯಕ, ಶ್ರೀಧರ ಗುಮ್ಮಾನಿ, ತಾಲೂಕು ಸಮಿತಿ ಮುಖಂಡರಾದ ಸುಭಾಷ ದೇಶಪಾಂಡೆ, ಸದಾನಂದ ಕಪಿಲೇಶ್ವರಿ, ಚೇತನ ಮನೇರಿಕರ್, ರೇಖಾ ಕುಲಕರ್ಣಿ, ಹೃಷಿಕೇಶ ಜೋಶಿ, ಶಾರ್ದೂಲ ಜೋಶಿ, ಪ್ರಭಾಕರ ಭಟ್, ಪ್ರಸನ್ನ ಕುಲಕರ್ಣಿ ಮೊದಲಾದವರು ಇದ್ದರು.