ಬೆಳಗಾವಿ: ಬೆಳಗಾವಿ ಜಿಲ್ಲೆಯಿಂದ ಪ್ರಯಾಗರಾಜಗೆ ಕುಂಭಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಗೋಕಾಕನ 6 ಪ್ರಯಾಣಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
KA 49M 5054 ಸಂಖ್ಯೆಯ ತೂಫಾನ್ ವಾಹನದಲ್ಲಿ ಒಟ್ಟು 8 ಜನ ಪ್ರಯಾಣ ಬೆಳೆಸಿದ್ದರು. ಅವರಲ್ಲಿ ಆರು ಜನ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾಗಿ ಅವಘಡ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಅಲ್ಲಿನ ಅಧಿಕಾರಿಗಳು ಮಾಹಿತಿ ರವಾನೆ ಮಾಡಿದ್ದಾರೆ.
ಗೋಕಾಕ ನಗರದ ಲಕ್ಷ್ಮೀ ಬಡಾವಣೆಯ ನಿವಾಸಿ ಬಾಲಚಂದ್ರ ನಾರಾಯಣ ಗೌಡರ (50), ಹುಕ್ಕೇರಿ ತಾಲೂಕಿನ ಹತ್ತರಗಿ ಪೋಸ್ಟ್ ವ್ಯಾಪ್ತಿಯ ಆನಂದಪುರದ ಸುನೀಲ್ ಬಾಲಕೃಷ್ಣ ಶೇಡಶ್ಯಾಳೆ (45), ಗೋಕಾಕದ ಗೊಂಬಿಗುಡಿ ಬಡಾವಣೆ ನಿವಾಸಿ ಬಸವರಾಜ್ ನಿರಪಾದಪ್ಪ ಕುರ್ತಿ (63), ಗೋಕಾಕ ಗುರುವಾರ ಪೇಟೆಯ ಬಸವರಾಜ ಶಿವಪ್ಪ ದೊಡಮನಿ (49), ಗುರುವಾರ ಪೇಟೆಯ ನಿವಾಸಿ ವಿರೂಪಾಕ್ಷ ಚನ್ನಪ್ಪ ಗುಮತಿ (61), ಗೋಕಾಕ ಮೂಲದ, ಸದ್ಯ ಗುಳೇದಗುಡ್ಡ ತಾಲೂಕಿನ ಕಮತಗಿಯ ಈರಣ್ಣ ಶಂಕರಪ್ಪ ಶೇಬಿನಕಟ್ಟಿ (27) ಮೃತಪಟ್ಟಿದ್ದಾರೆ.
ಮುಸ್ತಾಕ ಶಿಂಧಿಕುರಬೇಟ್, ಸದಾಶಿವ ಉಪಲಾಳಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಜಬಲ್ಪುರನ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನ 5 ಗಂಟೆಗೆ ಅಪಘಾತ ಸಂಭವಿಸಿದೆ.

 
             
         
         
        
 
  
        
 
    