ಬೆಂಗಳೂರು :
ರೈತರಿಗೆ ಅವಮಾನವಾಗುವಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ರೈತ ವಿರೋಧಿಯಲ್ಲ. ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂರು ವರ್ಷಕ್ಕೊಮ್ಮೆ ರೈತರು ಬೆಳೆಯುವಂತಹ ಬೆಳೆಗಳಿಗೆ ಬೆಲೆ ಸಿಗುತ್ತದೆ. ಉಳಿದ ಎರಡು ವರ್ಷ ಅವರ ಬೆಳೆಗಳಿಗೆ ನಿರ್ದಿಷ್ಟ ಪ್ರಮಾಣದ ಬೆಲೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ತಮ್ಮ ಸಾಲಮನ್ನಾ ಆಗಲಿ ಎಂದು ಬಯಸುತ್ತಾರೆ ಎಂದು ಹೇಳಿದ್ದೆ ಅಷ್ಟೇ. ಆದರೆ ಕಾರ್ಯಕ್ರಮದಲ್ಲಿ ನೀಡಿದ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ವಿವಾದ ಸೃಷ್ಟಿಸಿದ್ದ ಹೇಳಿಕೆ : ಸಚಿವರು ಹೇಳಿದ್ದಾದರೂ ಏನು ?
ಅಥಣಿ ತಾಲೂಕಿನಲ್ಲಿ ಗ್ರಾಮೀಣ ಕೃಷಿ ಸ್ವಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿದ್ದ ಸಚಿವ ಶಿವಾನಂದ ಪಾಟೀಲ ಹೇಳಿಕೆ ಸೋಮವಾರ ತೀವ್ರ ವಿವಾದ ಸೃಷ್ಟಿಸಿತ್ತು.
ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಸಚಿವರು ಹೇಳಿದ್ದರು.
ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟು ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬಿತ್ತನೆ ಬೀಜ, ಗೊಬ್ಬರವನ್ನೂ ಕೊಟ್ಟಿದ್ದಾರೆ. ಇನ್ನೂ ರೈತರಿಗೆ ಒಂದು ಆಸೆ ಇದೆ… ಪದೇ ಪದೇ ಬರಗಾಲ ಬರಲಿ ಎಂಬುದು. ಕಾರಣ ಸಾಲ ಮನ್ನಾ ಆಗುತ್ತೆ ಎಂದು. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜೆಡಿಎಸ್ –ಬಿಜೆಪಿ ನಾಯಕರು ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಚಿವರು ಈ ಕೂಡಲೇ ರಾಜೀನಾಮೆ ನೀಡುವಂತೆ ಬಿಜೆಪಿ-ಜೆಡಿಎಸ್ ನಾಯಕರು ಆಗ್ರಹಿಸಿದ್ದಾರೆ.