ಬೆಳಗಾವಿ : ಹೋಳಿ ಹುಣ್ಣಿಮೆ ದಿನದಂದೇ ಭರ್ಜರಿ ಗಾಂಜಾ ಮಾಲು ಸಿಕ್ಕಿದ್ದರೂ ಪೊಲೀಸರು ಅದನ್ನು ಬಿಟ್ಟು ಕೇಸ್ ಮುಚ್ಚಿ ಹಾಕಿದ್ರಾ? ಎನ್ನುವುದು ಇದೀಗ ಬೆಳಗಾವಿ ಜನತೆಯನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಭುವನ ಹಂಗರಗೇಕರ ಎಂಬವ ಇದರ ನೇರ ಸೂತ್ರಧಾರ.
ಬೆಳಗಾವಿಯ ಹೃದಯ ಭಾಗವಾಗಿರುವ ಕ್ಯಾಂಪ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಪೊಲೀಸರು ಎಂದಿನಂತೆ ಭರ್ಜರಿಯಾಗಿ ಮಾಮೂಲಿ ತೆಗೆದುಕೊಂಡು ಕೇಸ್ ದಾಖಲು ಮಾಡಿಕೊಳ್ಳದೆ ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಪೊಲೀಸರು ಹಾಗೂ ಗಾಂಜಾ ಪ್ರಕರಣದ ರೂವಾರಿ ನಡುವೆ ಕುದುರಿದ ಒಳ ಸಂಚಿನ ವ್ಯವಹಾರದಿಂದ ಇಡೀ ಪ್ರಕರಣವೇ ಇದೀಗ ಮುಚ್ಚಿ ಹೋಗುವಂತಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಬೆಳಗಾವಿ ಮಹಾನಗರಕ್ಕೆ ಇದೀಗ ನೇರ, ನಿರ್ಭೀತ ಹಾಗೂ ಇನ್ನೂ ಯುವಕರಾಗಿರುವ ಹೊಸ ಕಮಿಷನರ್ ನೇಮಕವಾಗಿದೆ. ಅವರು ಬೆಳಗಾವಿ ಮಹಾನಗರದ ಪೊಲೀಸ್ ಠಾಣೆಗಳಲ್ಲಿ ನಡೆಯುವ ಇಂತಹ ಹದ್ದು ಮೀರಿದ ದಂಧೆಗಳಿಗೆ ಕಡಿವಾಣ ಹಾಕುತ್ತಾರೋ ಎನ್ನುವುದು ಬೆಳಗಾವಿಯ ಮಹಾನಗರದ ಜನತೆಯನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಬೆಳಗಾವಿ ಅಕ್ರಮಕ್ಕೆ ರಹದಾರಿ ಇದ್ದಂತೆ :
ಬೆಳಗಾವಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಗಳ ಕೇಂದ್ರ ಬಿಂದು. ಮೂರು ರಾಜ್ಯಗಳ ರಹದಾರಿ ಆಗಿರುವ ಕಾರಣಕ್ಕೆ ಅಕ್ರಮ ಚಟುವಟಿಕೆಗಳು ಇಲ್ಲಿ ಹೆಚ್ಚು ನಡೆಯುತ್ತವೆ. ಜೊತೆಗೆ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ನೆಲೆಬೀಡು. ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಇಲ್ಲಿವೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳನ್ನು ಮಾದಕ ವಸ್ತುವಿನತ್ತ ಸೆಳೆಯಲು ಇಲ್ಲಿ ರಾಜಾರೋಷವಾಗಿ ಅಂತಹ ವಸ್ತುಗಳ ಮಾರಾಟ ಮಾಡುತ್ತಿರುವುದು ಹೊಸದೇನಲ್ಲ. ಆಗಾಗ ಇಂತಹ ಅಕ್ರಮ ಚಟುವಟಿಕೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ ಅದನ್ನು ಹದ್ದು ಬಸ್ತಿನಲ್ಲಿ ಇಡಬೇಕಾದ ಪೊಲೀಸ್ ಇಲಾಖೆ ಮಾತ್ರ ಬೇಲಿಯೇ ಎದ್ದು ಹೊಲವ ಮೇಯ್ದಂತೆ ವರ್ತಿಸುತ್ತಿರುವುದು ಮಾತ್ರ ಕಳವಳಕಾರಿ ಸಂಗತಿಯಾಗಿದೆ.