ಶಕ್ತಿ ಯೋಜನೆ ಮರು ಚಿಂತನೆ ಮಾಡುವಂತೆ ಮಹಿಳೆಯರಿಂದಲೇ ಒತ್ತಡ ಇದೆ. ಅನೇಕ ಮಂದಿ ಹೆಣ್ಣು ಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ಟ್ವೀಟ್ ಹಾಗೂ ಇ-ಮೇಲ್ ಮೂಲಕ ವಿಚಾರ ತಿಳಿಸುತ್ತಿದ್ದಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದ ಬೆನ್ನಿಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೆ ಶಕ್ತಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಇದೀಗ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು : ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ . ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ’ ಎಂದು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.
ವಕ್ಫ್ ಆಸ್ತಿ ನೋಟೀಸುಗಳಿಗೆ ಸಂಬಂಧಿಸಿದಂತೆ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆ ಮಾಡುವುದರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸುಮಾರು 200ಕ್ಕೂ ಹೆಚ್ಚು ನೋಟೀಸ್ ಗಳನ್ನು ನೀಡಿದ್ದಾರೆ. ಅವರದು ಇಬ್ಬದಿ ರಾಜಕೀಯ ನಡೆ. ಯಾವ ರೈತರನ್ನೂ ಒಕ್ಕಲೆಬ್ಬಿಸಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಕೊಟ್ಟಿರುವ ನೋಟೀಸ್ ಗಳನ್ನು ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ನವೆಂಬರ್ 4ರ ಅವರ ಪ್ರತಿಭಟನೆ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತವಾದದ್ದು, ಸಮಸ್ಯೆಗಳು ಇರದೆಡೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಈಗ ಮುಡಾ ಪ್ರಕರಣದಲ್ಲಿ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.
ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ವಾಪಸ್ ಪಡೆದಿದ್ದು, ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ.
ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರೂ ಕ್ಷೇತ್ರಗಳಲ್ಲಿಯೂ ಗೆಲುವು ನಮ್ಮದೇ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪಾವಳಿ ಶುಭಾಶಯಗಳನ್ನು ತಿಳಿಸಿದರು.
ಒಳಮೀಸಲಾತಿಗೆ ಆಯೋಗ ರಚನೆ: ವಿಳಂಬ ನೀತಿ ಅಲ್ಲ : ಸಿದ್ದರಾಮಯ್ಯ
ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು 3 ದಶಕಗಳ ನಿರಂತರ ಬೇಡಿಕೆ, ಒತ್ತಾಯಗಳ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಪರಿಶಿಷ್ಟ ಜಾತಿಗಳಲ್ಲಿ 101 ಒಳ ಪಂಗಡಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಮಿಷನ್ ಆಫ್ ಇನ್ಕ್ವೈರಿ ಅಕ್ಟ್ 1952 ಅನ್ವಯ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ. ಸದರಿ ಆಯೋಗವು ಎರಡು ತಿಂಗಳ ಒಳಗಾಗಿ ವರದಿ ಸಲ್ಲಿಸುವ ಷರತ್ತು ವಿಧಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಂದಿನ ತೀರ್ಮಾನದವರೆಗೆ ರಾಜ್ಯ ಸರ್ಕಾರದ ಅಧೀನದ ಸಿವಿಲ್ ಸೇವೆಗಳಲ್ಲಿನ ಹಾಗೂ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸದಿರುವ ನಿರ್ಧಾರವನ್ನು ಸಹ ಕೈಗೊಳ್ಳಲಾಗಿದೆ.
ತೆಲಂಗಾಣ ಸರ್ಕಾರ ಸಹ ಒಳ ಮೀಸಲಾತಿ ಜಾರಿ ಸಂಬಂಧ ಈಗಾಗಲೇ ಇದೇ ಮಾದರಿಯಲ್ಲಿ ಒಂದು ಆಯೋಗ ರಚನೆ ಮಾಡಿದೆ.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಒಳ ಮೀಸಲಾತಿಯನ್ನು ವೈಜ್ಞಾನಿಕವಾಗಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಕ್ತ ಅಂಕಿ ಅಂಶಗಳ ಅಗತ್ಯವಿರುತ್ತದೆ. ಈ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಲು ರಾಜ್ಯ ಸರ್ಕಾರವು ಆಯೋಗವನ್ನು ರಚನೆ ಮಾಡಲು ನಿರ್ಧರಿಸಿದೆ. ಆಯೋಗವು ನಿಗಧಿತ ಗಡುವಿನೊಳಗೆ ವರದಿಯನ್ನು ಸಲ್ಲಿಸಲು ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳಲಿದೆ. ಆಯೋಗದ ವರದಿ ಬಂದ ತಕ್ಷಣ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಕ್ರಮವಹಿಸಲಾಗುವುದು.
ಒಳ ಮೀಸಲಾತಿ ನೀಡುವುದು ಸಂವಿಧಾನ ಬದ್ಧವಾದ ಕ್ರಮ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ. ಸಮರ್ಪಕವಾಗಿ, ವೈಜ್ಞಾನಿಕವಾಗಿ ಹಾಗೂ ವಿವಾದಗಳಿಗೆ ಆಸ್ಪದ ನೀಡದಂತೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕೆಂಬ ಉದ್ದೇಶದಿಂದ ಸರ್ಕಾರ ಆಯೋಗ ಸರ್ಕಾರ ರಚಿಸಿದ್ದು, ಇದರಲ್ಲಿ ಯಾವುದೇ ವಿಳಂಬ ನೀತಿ ಅಥವಾ ಕಾಲಹರಣ ತಂತ್ರ ಇರುವುದಿಲ್ಲ. ಸಾಮಾಜಿಕ ನ್ಯಾಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಕಾರ್ಯ ನಿರ್ವಹಿಸಲಿದೆ.
ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ :
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರಾದ ರಾಮಲಿಂಗಾರೆಡ್ಡಿ, ಕೆ ಎಚ್ ಮುನಿಯಪ್ಪ, ಮಾಜಿ ಸಚಿವ ಎಚ್ ಎಂ ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಮಾತುಗಳು:
ನೆಹರು ಅವರ ಕುಟುಂಬವನ್ನು ಹೊರತು ಪಡಿಸಿ ಭಾರತವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಈ ದೇಶದ ಐಕ್ಯತೆ, ಸಮಗ್ರತೆಗೆ ಪ್ರಾಣ ಕೊಟ್ಟವರು ಇಂದಿರಾಗಾಂಧಿ. ಅವರು ಆಗಾಗ್ಗೆ ಹೇಳುತ್ತಿದ್ದ ಮಾತು “ನಾನು ಯಾರಿಂದಲೂ ಅಥವಾ ಯಾವುದೇ ರಾಷ್ಟ್ರದ ಒತ್ತಡಕ್ಕೆ ಒಳಗಾಗುವ ವ್ಯಕ್ತಿಯಲ್ಲ” ಎನ್ನುತ್ತಿದ್ದರು.
ಭಾರತ್ ಜೋಡೋ ಯಾತ್ರೆ ವೇಳೆ ಮೊಣಕಾಲ್ಮುರಿನ ಬಳಿ 70 ವರ್ಷದ ಅಜ್ಜಿಯೊಬ್ಬರು ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ನೀಡಲು ಬಂದರು. ಆಗ ನನ್ನ ಬಳಿ ಅವರ ಅಜ್ಜಿ ಇಂದಿರಮ್ಮ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು, ಎಂದು ಕಣ್ಣೀರು ಹಾಕಿದ್ದರು. ಇತ್ತೀಚಿಗೆ ಅವರು ತೀರಿ ಹೋಗಿದ್ದಾರೆ. ಅದೇ ಜಾಗದಲ್ಲಿ ಭಾರತ್ ಜೋಡೋ ಟ್ರೈನಿಂಗ್ ಸೆಂಟರ್ ಅನ್ನು ತೆರೆಯಬೇಕು ಎನ್ನುವ ಆಲೋಚನೆಯಿದೆ.
ಪಿಂಚಣಿ, ಮನೆ, ಭೂಮಿ, ಪಡಿತರ ಸೇರಿದಂತೆ ಇಡೀ ದೇಶದ ಬಡ ಜನರ ಅಭಿವೃದ್ಧಿಗೆ ಯಾವ, ಯಾವ ಕಲ್ಯಾಣ ಕಾರ್ಯಕ್ರಮಗಳು ಇವೆಯೋ ಅದೆಲ್ಲವನ್ನು ಜಾರಿಗೆ ತಂದಿದ್ದು ಇಂದಿರಾಗಾಂಧಿ ಅವರು. ಬಡತನ ನಿರ್ಮೂಲನೆಗೆ ಕಾರ್ಯಕ್ರಮ ರೂಪಿಸಿದರು. ನೆಹರು ಅವರು ಹಾಕಿಕೊಟ್ಟ ಅಭಿವೃದ್ಧಿಯ ಮಾರ್ಗದಲ್ಲಿ ನಡೆದರು.
ಇಂದಿರಾಗಾಂಧಿ ಅವರ ನುಡಿಮುತ್ತುಗಳನ್ನು ಸೋನಿಯಾಗಾಂಧಿ ಅವರು ಪುಸ್ತಕ ರೂಪದಲ್ಲಿ ಸಂಗ್ರಹ ಮಾಡಿದ್ದಾರೆ. ಈ ಪುಸ್ತಕವನ್ನು ಶೀಘ್ರದಲ್ಲಿಯೇ ಹೊರಗೆ ತರಲಾಗುವುದು. ಇದರಲ್ಲಿನ ಒಂದು ವಾಕ್ಯ ಹೀಗಿದೆ. “ಸಮಸ್ಯೆಗಳು ನಮ್ಮ ಮನೆ ಬಾಗಿಲಿಗೆ ಬಂದು ಕುಳಿತಿವೆ. ಈ ಸಮಸ್ಯೆಗಳ ನಿವಾರಣೆಗೆ ಪರ್ವತವನ್ನು ಹತ್ತಬೇಕಾಗಿಲ್ಲ. ಸಾಗರಗಳನ್ನು ದಾಟ ಬೇಕಾಗಿಲ್ಲ. ನಮ್ಮ ಪ್ರತಿ ಹಳ್ಳಿಗಳಲ್ಲಿ ಬಡತನವಿದೆ. ಮನೆಗಳಲ್ಲಿ ಜಾತಿಯಿದೆ. ಇವೆರಡನ್ನು ನಾವು ಪರ್ವತ ಹಾಗೂ ಸಾಗರದ ಆಚೆಗೆ ದಾಟಿಸಬೇಕು” ಎಂದು ಅದ್ಬುತವಾದ ಸಂದೇಶ ನೀಡಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ದೇಶದ ಸಮಗ್ರತೆಗೆ ಕೊಡುಗೆ ನೀಡಿದವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು. ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿದರು. ಆದರೆ ಪಟೇಲರ ಹೆಸರನ್ನು ಈಗ ಬೇರೆಯವರು ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಎಂದಿಗೂ ಇತಿಹಾಸ ಬದಲಾವಣೆ ಸಾಧ್ಯವಿಲ್ಲ.
ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಹಿಂಭಾಗದ ನೂತನ ಕಟ್ಟಡವನ್ನು ರಾಹುಲ್ ಗಾಂಧಿ ಅವರು ಉದ್ಘಾಟನೆ ಮಾಡಿದರು. ಆಗ ಯಾವ ಹೆಸರು ಇಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದೆ. ಆಗ ಅವರು ಇಂದಿರಾಗಾಂಧಿ ಭವನ ಎಂದು ಹೆಸರಿಡಲು ಸೂಚನೆ ನೀಡಿದರು.
*ಶಕ್ತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟೋಕ್ತಿ*
*ಬೆಂಗಳೂರು, ಅ.31*
“ಶಕ್ತಿ ಯೋಜನೆ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ತಿರುಚಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
ಶಕ್ತಿ ಯೋಜನೆ ಮರುಪರಿಶೀಲನೆ ಸಂಬಂಧಿಸಿದಂತೆ ಕೇಳಿದಾಗ, “ಈ ವಿಚಾರದಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಆರ್ಥಿಕವಾಗಿ ಸದೃಢವಾಗಿರುವವರು, ಐಟಿಬಿಟಿ ಸಂಸ್ಥೆಗಳವರು , ಎಂಎನ್ ಸಿ ಕಂಪನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ತಾವು ಕೆಲಸ ಮಾಡುವ ಕಂಪನಿಗಳಲ್ಲಿ ಸಂಚಾರಕ್ಕಾಗಿ ಪ್ರತ್ಯೇಕ ಭತ್ಯೆ ನೀಡಲಾಗುತ್ತಿದೆ. ಹೀಗಾಗಿ ನಮಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಾನು ಸಚಿವರ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದೇನೆ ಅಷ್ಟೇ. ಯೋಜನೆ ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ” ಎಂದು ತಿಳಿಸಿದರು.
“ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದೇ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ಯೋಜನೆ ಸೌಲಭ್ಯ ಬೇಡ ಎಂದು ಹೇಳುವವರಿಗೆ ಬಲವಂತ ಮಾಡಲು ಸಾಧ್ಯವೇ? ಅವರ ಸಂಖ್ಯೆ ಶೇಕಡಾ 7-8 ರಷ್ಟು ಇರಬಹುದು. ಹಿಂದೆ ಅಡುಗೆ ಅನಿಲಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸ್ವಇಚ್ಛೆಯಿಂದ ಸಬ್ಸಿಡಿ ತ್ಯಜಿಸುವವರಿಗೆ ಅವಕಾಶ ನೀಡಿದರು. ಆ ರೀತಿ ಆಲೋಚನೆ ಮಾಡುವುದಾಗಿ ಹೇಳಿದ್ದೇನೆ. ಕಾಂಗ್ರೆಸ್ ಅಧ್ಯಕ್ಷನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇನೆ. ಐದೂ ಗ್ಯಾರಂಟಿ ಯೋಜನೆ ಮುಂದುವರಿಯುತ್ತವೆ. ಜನರಿಗೆ ಈ ಸೌಲಭ್ಯ ಮುಂದುವರಿಯಲಿದೆ. ಬೆಲೆ ಏರಿಕೆ ಸಮಸ್ಯೆ ನಿವಾರಿಸಿ ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಜನ ನಮಗೆ ಆಶೀರ್ವಾದ ಮಾಡುತ್ತಾರೆ. ಈಗಿನ ಅವಧಿ ಜತೆಗೆ ಮುಂದಿನ ಐದು ವರ್ಷದ ಅವಧಿಯೂ ಸೇರಿ ಒಟ್ಟು ಎಂಟೂವರೆ ವರ್ಷ ಈ ಯೋಜನೆ ಮುಂದುವರಿಯಲಿದೆ” ಎಂದು ತಿಳಿಸಿದರು.
ಯಾರಿಗೆ ಬೇಕೋ ಅವರು ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡಬಹುದಲ್ಲವೇ? ಪರಿಷ್ಕರಣೆ ಯಾಕೆ ಎಂದು ಕೇಳಿದಾಗ, “ಆ ರೀತಿ ಮಾಡಲು ಸಾರಿಗೆ ಸಿಬ್ಬಂದಿಗಳಿಗೆ ಸರ್ಕಾರ ಅನುಮತಿ ನೀಡಬೇಕಲ್ಲವೇ? ಇಲ್ಲದಿದ್ದರೆ ಕಂಡಕ್ಟರ್ ಗಳು ಮಹಿಳೆಯರಿಂದ ಹಣ ಪಡೆಯಲು ಹಿಂಜರಿಯುತ್ತಾರೆ. ನಾಳೆ ನೀವೇ ಹೇಳಬಹುದು, ಮಹಿಳೆಯರಿಂದ ಬಲವಂತವಾಗಿ ಹಣ ಕೀಳುತ್ತಿದ್ದಾರೆ ಎಂದು. ಹೀಗಾಗಿ ಕೆಲವು ಮಹಿಳಾ ಪ್ರಯಾಣಿಕರು ನೀಡಿರುವ ಸಲಹೆ ಬಗ್ಗೆ ನಾವು ಚರ್ಚೆ ಮಾಡಬೇಕಿದೆ. ಈ ವಿಚಾರದಲ್ಲಿ ಯಾವುದೇ ಆತುರವಿಲ್ಲ” ಎಂದು ಸ್ಪಷ್ಟನೆ ನೀಡಿದರು.
*ಅಸೂಯೆಯಿಂದ ಕುಮಾರಸ್ವಾಮಿ ಟೀಕೆ:*
ರಾಜ್ಯ ಸರ್ಕಾರ ದಿವಾಳಿಯಾಗುತ್ತಿದ್ದು, ಗ್ಯಾರಂಟಿ ಯೋಜನೆಗಳಿಂದಲೇ ಸರ್ಕಾರ ಪತನವಾಗಲಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಈ ಗ್ಯಾರಂಟಿ ಯೋಜನೆಗಳನ್ನು ಕಂಡು ಕುಮಾರಸ್ವಾಮಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. “ಕಾಂಗ್ರೆಸ್ ನವರು 5 ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದಾರೆ. ನಿಮ್ಮ ಅಧಿಕಾರ ಅವಧಿಯಲ್ಲಿ ಇಂತಹ ಒಂದು ಯೋಜನೆ ಕೊಟ್ಟಿಲ್ಲ, ಬಡವರಿಗೆ ನಿವೇಶನ ಕೊಟ್ಟಿಲ್ಲ, ಊರು ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಯಾಕೆ ಮತ ಕೇಳುತ್ತೀರಿ ಎಂದು ಜನ ಅವರನ್ನು ಧಿಕ್ಕರಿಸುತ್ತಿದ್ದಾರೆ. ಅದನ್ನು ಸಹಿಸಲಾಗದೆ ನನಗೆ ಈ ಅವಕಾಶ ಸಿಗಲಿಲ್ಲವಲ್ಲ ಎಂದು ಕುಮಾರಸ್ವಾಮಿ ಅಸೂಯೆಯಿಂದ ತಮ್ಮ ಕೈ ಹಿಸುಕಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.
*ಇನ್ನೂ ಎಂಟೂವರೆ ವರ್ಷ ಕಾಂಗ್ರೆಸ್ ಸರ್ಕಾರ ಆಡಳಿತ:*
ಆರು ತಿಂಗಳ ಒಳಗಾಗಿ ರಾಜ್ಯಪಾಲರ ಆಡಳಿತ ಬರಲಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರ ಬೀಳಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಆದರೆ ಅದು ಅವರ ಹಣೆಯಲ್ಲಿ ಬರೆದಿಲ್ಲ. ಈ ವಿಶೇಷವಾದ ದಿನ ನೀವು ಬರೆದಿಟ್ಟುಕೊಳ್ಳಿ, ಮುಂದಿನ ಎಂಟೂವರೆ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ” ಎಂದು ಸ್ಪಷ್ಟಪಡಿಸಿದರು.
*ಅತ್ಯುತ್ತಮ ಸಲಹೆ ನೀಡಿದ್ದಾರೆ:*
ಬೆಂಗಳೂರು ಅಭಿವೃದ್ಧಿ ಹಾಗೂ ರಸ್ತೆ ವಿಚಾರವಾಗಿ ಉದ್ಯಮಿ ಕಿರಣ್ ಮಜೂಮ್ದಾರ್ ಶಾ ಅವರ ಜತೆಗಿನ ಚರ್ಚೆ ಬಗ್ಗೆ ಕೇಳಿದಾಗ, “ನಾನು ಚರ್ಚೆ ಮಾಡಿದ್ದೇನೆ, ಅಧಿಕಾರಿಗಳಿಗೂ ಅವರ ಜತೆ ಚರ್ಚೆ ಮಾಡುವಂತೆ ತಿಳಿಸಿದ್ದೆ. ಅವರು ಅನೇಕ ಸಲಹೆ ನೀಡಿದ್ದಾರೆ. ಕೆಲವು ಸಲಹೆ ಅತ್ಯುತ್ತಮವಾಗಿದ್ದು, ಅವುಗಳನ್ನು ನಾವು ಸ್ವೀಕರಿಸುತ್ತೇವೆ. ಅವರು ತಮ್ಮದೇ ಆದ ವರದಿ ಸಿದ್ಧಪಡಿಸಿಕೊಂಡು ನೀಡಿದ್ದಾರೆ” ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಯಾವಾಗ ಭಾಗವಹಿಸುತ್ತೀರಿ ಎಂದು ಕೇಳಿದಾಗ, “ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಈಗಾಗಲೇ 25 ಬಾರಿj ಹೋಗಿ ಬಂದಿದ್ದೇವೆ. ನಾವು ಒಂದೊಂದು ದಿನ ಮಾತ್ರ ಜಂಟಿ ಪ್ರಚಾರ ಮಾಡುತ್ತೇವೆ. ಇತರ ದಿನಗಳಲ್ಲಿ ನಮ್ಮ ನಾಯಕರು ಪ್ರಚಾರ ಮಾಡುತ್ತಾರೆ” ಎಂದು ತಿಳಿಸಿದರು.
*ಬಿಜೆಪಿಗೆ ರಾಜಕೀಯ ಮಾಡಲು ಬೇರೆ ವಿಚಾರ ಇಲ್ಲ:*
ಸರ್ಕಾರದ ಸ್ಪಷ್ಟನೆ ಹೊರತಾಗಿಯೂ ಬಿಜೆಪಿ ವಕ್ಫ್ ವಿಚಾರದಲ್ಲಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಲು ಬಿಜೆಪಿಯವರ ಬಳಿ ವಿಚಾರಗಳಿಲ್ಲ. ಹೀಗಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ಕಾಲದಲ್ಲೇ ಮೊದಲು ನೋಟೀಸ್ ನೀಡಲಾಗಿದೆ. ಕೋಮು ಗಲಭೆ ಸೃಷ್ಟಿಸಿ, ದೇಶ ಹಾಗೂ ರಾಜ್ಯ ಒಡೆಯಬೇಕು ಎಂಬುದು ಅವರ ಉದ್ದೇಶ” ಎಂದು ತಿಳಿಸಿದರು.
ಪ್ರಿಯಾಂಕಾ ಗಾಂಧಿ ಕೂಡ ವಯನಾಡಿಗೆ ವಲಸಿಗರು ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರಾಗಲಿ, ಅವರ ಗೌಡರ ಕುಟುಂಬದವರಾಗಲಿ ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ. ಗಾಂಧಿ ಕುಟುಂಬ ದೇಶವನ್ನು ಒಂದಾಗಿ ಇಟ್ಟಿದೆ. ಆ ಕುಟುಂಬದ ಕೊಡುಗೆಯನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ದಕ್ಷಿಣ ಭಾರತವನ್ನು ಪ್ರತಿನಿಧಿಸಿದ್ದರು” ಎಂದು ತಿಳಿಸಿದರು.