ಬೆಂಗಳೂರು :
ರಾಜ್ಯದ ದೊಡ್ಡ ದೊಡ್ಡ ಪಟ್ಟಣಗಳನ್ನು ಕೇಂದ್ರವಾಗಿರಿಸಿಕೊಂಡು ಹೊಸ ಜಿಲ್ಲೆ ರಚಿಸಬೇಕು ಎಂಬ ಬೇಡಿಕೆ ಇಂದು ನಿನ್ನೆಯದಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಅತ್ಯಾಸಕ್ತಿ ವಹಿಸಿರುವುದು
ಸಂಚಲನಕ್ಕೆ ಕಾರಣವಾಗಿದ್ದು ಕರ್ನಾಟಕ ರಾಜ್ಯೋತ್ಸವ ವೇಳೆಗೆ ನೂತನ ಜಿಲ್ಲೆಗಳ ರಚನೆ ಬಹುತೇಕ ಖಚಿತ ಎನಿಸಿದೆ.
ರಾಜ್ಯದ ಕೆಲವು ನಗರಗಳು ಜಿಲ್ಲಾ ಕೇಂದ್ರವನ್ನು ಮೀರಿ ಬೆಳೆಯುತ್ತಿವೆ. ಅಂತಹ ನಗರಗಳನ್ನು ಜಿಲ್ಲೆ ಮಾಡಬೇಕು ಎಂಬ ಬೇಡಿಕೆ ಇದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಜಿಲ್ಲೆಗಳ ಸಂಖ್ಯೆ ತೀರಾ ಕಡಿಮೆ ಇದೆ. ಹೊಸದಾಗಿ ಉದಯಿಸಿರುವ ಪಕ್ಕದ ತೆಲಂಗಾಣದಲ್ಲಿ 30ಕ್ಕೂ ಹೆಚ್ಚು ಜಿಲ್ಲೆಗಳಿವೆ. ರಾಜಸ್ಥಾನದಲ್ಲಿ 50ಕ್ಕೂ ಹೆಚ್ಚು ಜಿಲ್ಲೆಗಳಿವೆ.
ಅದರಲ್ಲೂ ಕರ್ನಾಟಕದಲ್ಲಿ ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕದಲ್ಲಿ ಜಿಲ್ಲೆಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿವೆ. ಅನುದಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕಕ್ಕೆ ತೀರಾ ಅನ್ಯಾಯವಾಗುತ್ತಿದೆ. ಈ ಅಸಮತೋಲನ ಹೋಗಲಾಡಿಸಲು ರಾಜ್ಯ ಸರಕಾರ ಹೊಸ ಜಿಲ್ಲೆಗಳ ರಚನೆಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಚಿಕ್ಕೋಡಿ, ಗೋಕಾಕ, ಅಥಣಿ, ಬೈಲಹೊಂಗಲ, ಸಿರಸಿ, ಕುಂದಾಪುರ, ಪುತ್ತೂರು, ಸಾಗರ/ ಶಿಕಾರಿಪುರ, ಇಂಡಿ, ಹುಣಸೂರು, ಜಮಖಂಡಿ, ಸಿಂಧನೂರು, ಸೇಡಂ, ತಿಪಟೂರು, ಗಂಗಾವತಿ (ಕಿಷ್ಕಿಂದಾ) ಸೇರಿದಂತೆ ಹಲವು ಹೊಸ ಜಿಲ್ಲೆಗಳ ಬೇಡಿಕೆ ಆಗಾಗ ಮೊಳಗುತ್ತಿದೆ.
ಸಿದ್ದರಾಮಯ್ಯ ಒಲವು :
ಪಾವಗಡ, ಶಿರಾ, ಕೊರಟಗೆರೆ, ಮಧುಗಿರಿ ಸೇರಿ ಹೊಸ ಜಿಲ್ಲೆ ರಚಿಸಲು ಸರಕಾರ ಮುಂದಾಗಿದೆ ಎಂಬ ಮಾಹಿತಿ ಇದೆ.
ಈ ಮೊದಲು ಶಿರಾವನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಜಿಲ್ಲೆ ಮಾಡಬೇಕು ಎಂಬ ಬೇಡಿಕೆ ಇತ್ತು. ಆದರೆ ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಧುಗಿರಿ ಜಿಲ್ಲೆ ರಚನೆ ಬಗ್ಗೆ ಮಾತನಾಡಿರುವುದು ಹೊಸ ಜಿಲ್ಲೆಗಳ ಬಗ್ಗೆ ಸರಕಾರ ಮುತುವರ್ಜಿ ವಹಿಸಿರುವ ಸಂಕೇತವಾಗಿದೆ.
ಮಧುಗಿರಿ ಉಪವಿಭಾಗದ ನಾಲ್ಕು ತಾಲೂಕುಗಳನ್ನು ಒಳಗೊಂಡು ಮಧುಗಿರಿ ಜಿಲ್ಲೆ ರಚಿಸುವಂತೆ ಸಚಿವ ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.