ಬೆಂಗಳೂರು :
“ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಹೆಸರಿನಲ್ಲಿ 01 ನವೆಂಬರ್ 2023 ರಿಂದ 01 ನವೆಂಬರ್ 2024 ರವರೆಗೆ ಕರ್ನಾಟಕ ಸಂಭ್ರಮ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಕರ್ನಾಟಕ ಎಂದು ನಾಮಕರಣ ಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ *ಕರ್ನಾಟಕ ಸಂಭ್ರಮ* ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚಿಸಲು ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದೇಶೀ ಕ್ರೀಡೆಗಳನ್ನು ಹಮ್ಮಿಕೊಳ್ಳುವುದು, ಕರ್ನಾಟಕದ ದೇಶೀ ಸಂಸ್ಕೃತಿ ಹೆಚ್ವು ಬಿಂಬಿಸಬೇಕು, ಕನ್ನಡ ನಾಡು, ಸಂಸ್ಕೃತಿ ಮತ್ತು ಪ್ರಾದೇಶಿಕ ಭವ್ಯತೆಯನ್ನು ಈ ಸಂದರ್ಭದಲ್ಲಿ ಯುವ ಪೀಳಿಗೆಗೂ ದಾಟಿಸುವ ರೀತಿ ಅರ್ಥಪೂರ್ಣ ಮತ್ತು ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಮುಖ್ಯ ಮಂತ್ರಿಗಳು ಸೂಚಿಸಿದರು.
ನಾಡಿನ ಸಾಹಿತಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
*ಸ್ಮಾರಕ ಅಭಿವೃದ್ಧಿ , ಜೀರ್ಣೋದ್ಧಾರ*
ವಿಧಾನಸೌಧ ಹಾಗೂ ಶಾಸಕರ ಭವನದ ಮಧ್ಯೆ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸುವುದು, ಮೈಸೂರಿನಲ್ಲಿ ದೇವರಾಜ ಅರಸರ ಪ್ರತಿಮೆ ಸ್ಥಾಪನೆ, ಧಾರವಾಡದ ದಿ: ಅದರಗುಂಚಿ ಶಂಕರಗೌಡ , ಬಳ್ಳಾರಿಯ ಹುತಾತ್ಮ ರಂಜಾನ್ ಸಾಬ್ ಹಾಗೂ ಗದಗ ಜಿಲ್ಲೆಯ ದಿ: ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಅಭಿವೃದ್ಧಿ , ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳುವುದು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನಿಸಲಾಯಿತು.
*ಹಲ್ಮಿಡಿ ಶಾಸನದ ಪ್ರತಿಕೃತಿಗಳ ಸ್ಥಾಪನೆ*
ಹಲ್ಮಿಡಿ ಶಾಸನದ ಪ್ರತಿಕೃತಿಗಳ ಸ್ಥಾಪನೆ, ಲೇಸರ್ ಶೋ/ ಧ್ವನಿ, ಬೆಳಕು ಕಾರ್ಯಕ್ರಮ, ಕರ್ನಾಟಕಕ್ಕೆ ಕೊಡುಗೆ ನೀಡಿದ 50 ಮಹಿಳೆಯರಿಗೆ ಪ್ರಶಸ್ತಿ ನೀಡುವುದು ಹಾಗೂ ನವೆಂಬರ್ 2024 ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
*ಲಾಂಛನ*
ಕರ್ನಾಟಕ ಸಂಭ್ರಮ – 50 ಕಾರ್ಯಕ್ರಮದ ಲಾಂಛನವನ್ನು ಅಕ್ಟೋಬರ್ 17 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು.
*ಹಿಂದಿನ ಸರ್ಕಾರದ ನಿರ್ಲಕ್ಷ್ಯ ಸಲ್ಲ*
ಕರ್ನಾಟಕ ಎಂದು ನಾಮಕರಣ ಗೊಂಡು 50ನೇ ವರ್ಷವನ್ನು ಹಿಂದಿನ ಸರ್ಕಾರ ವೈಭವದಿಂದ ಆಚರಿಸಬೇಕಿತ್ತು. ಅಂದರೆ 1-11-2022 ರಿಂದ 1-11-2023ರ ವರೆಗೆ ಆಚರಿಸಬೇಕಿತ್ತು. ಹಿಂದಿನ ಸರ್ಕಾರ ಏಕೆ ಆಚರಿಸಲಿಲ್ಲ ? ಈ ನಿರ್ಲಕ್ಷ್ಯ ಸರಿನಾ ? ಎಂದು ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದರು. ಈಗ 50 ವರ್ಷ ತುಂಬಿ 51ನೇ ವರ್ಷಕ್ಕೆ ಕಾಲಿಡಲಿದ್ದು, 50 ನೇ ವರ್ಷ ನವೆಂಬರ್ 2022 ರಂದೇ ಆಚರಿಸಬೇಕಿತ್ತು. ಹಿಂದಿನ ಸರ್ಕಾರ ಈ ವಿಚಾರದಲ್ಲಿ ಎಡವಿದೆ. 50 ವರ್ಷ ತುಂಬಿದ ನಂತರ ಮಾಡಲು ಹೊರಟರೆ ಅದಕ್ಕೆ ಮಹತ್ವವಿರುತ್ತದೆಯೇ ಪ್ರಶ್ನಿಸಿದ ಮುಖ್ಯ ಮಂತ್ರಿಗಳು, ಕೊನೆಗೆ 1-11-2023 ರಿಂದ 1-11-2024 ರ ವರೆಗೆ ಅರ್ಥಪೂರ್ಣವಾಗಿ ಆಚರಿಸಿ ಎನ್ನುವ ತೀರ್ಮಾನ ತೆಗೆದುಕೊಂಡರು.