ನವದೆಹಲಿ: ಟಿ-ಸೀರೀಸ್ (T-series) ನ ಭಕ್ತಿಗೀತೆ, ‘ಶ್ರೀ ಹನುಮಾನ್ ಚಾಲೀಸಾ’ (Shree Hanuman Chalisa) ಇತಿಹಾಸ ನಿರ್ಮಿಸಿದೆ. ‘ಶ್ರೀ ಹನುಮಾನ್ ಚಾಲೀಸಾ’ವು ಯೂಟ್ಯೂಬ್ನಲ್ಲಿ 5 ಬಿಲಿಯನ್ (500 ಕೋಟಿ) ವೀಕ್ಷಣೆಗಳನ್ನು ಗಳಿಸಿದ ಭಾರತದ ಮೊದಲ ವೀಡಿಯೊಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗುಲ್ಶನ್ ಕುಮಾರ ಅವರ ಈ ಹನುಮಾನ್ ಚಾಲೀಸಾವು ಸಾರ್ವಕಾಲಿಕವಾಗಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.
ಟಿ-ಸೀರೀಸ್ನ ಈ ವೀಡಿಯೊ 500 ಕೋಟಿ ವೀಕ್ಷಣೆಗಳನ್ನು ಪಡೆದಿದ್ದು, ಇಂದಿಗೂ ಇದರ ವೀಕ್ಷಣೆಗಳ ಸಂಖ್ಯೆ ಏರುತ್ತಲೇ ಇದೆ. ಈ ಸಂಖ್ಯೆಯು ಯಾವುದೇ ಬಾಲಿವುಡ್, ಪಂಜಾಬಿ ಅಥವಾ ಇತರೆ ಪ್ರಮುಖ ಸೂಪರ್ಸ್ಟಾರ್ ಹಾಡುಗಳ ವೀಕ್ಷಣೆಗಿಂತಲೂ ಹೆಚ್ಚಾಗಿದೆ.
ಪ್ರಮುಖ ಮೈಲಿಗಲ್ಲು
ಈ ಸಾಧನೆ ಮಾಡಿದ ಭಾರತದ ಏಕೈಕ ವೀಡಿಯೊ ‘ಶ್ರೀ ಹನುಮಾನ್ ಚಾಲೀಸಾ’ ಆಗಿದೆ. ಇದು ಯೂಟ್ಯೂಬ್ನಲ್ಲಿ ಸಾರ್ವಕಾಲಿಕವಾಗಿ ಹೆಚ್ಚು ವೀಕ್ಷಿಸಲ್ಪಟ್ಟ ಟಾಪ್ 10 ವೀಡಿಯೊಗಳ ಪಟ್ಟಿಗೆ ಸೇರಿದೆ.
ಈ ವಿಡಿಯೋವನ್ನು ಮೇ 10, 2011 ರಂದು ಟಿ-ಸೀರೀಸ್ ಬಿಡುಗಡೆ ಮಾಡಿತ್ತು. 14 ವರ್ಷ ಹಳೆಯದಾದ ಈ ವೀಡಿಯೊ ಇನ್ನೂ ಜನಪ್ರಿಯವಾಗಿದೆ. ಹರಿಹರನ್ ಅವರು ಈ ‘ಶ್ರೀ ಹನುಮಾನ್ ಚಾಲೀಸಾ’ ವನ್ನು ಹಾಡಿದ್ದಾರೆ ಮತ್ತು ಲಲಿತ್ ಸೇನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಟಿ-ಸೀರೀಸ್ನ ಈ ವಿಡಿಯೋವನ್ನು ಶಂಭು ಗೋಪಾಲ ನಿರ್ದೇಶಿಸಿದ್ದಾರೆ.
ಜಾಗತಿಕವಾಗಿ, ‘ಬೇಬಿ ಶಾರ್ಕ್ ಡ್ಯಾನ್ಸ್’ (1638 ಕೋಟಿ ವೀಕ್ಷಣೆಗಳು), ‘ಡೆಸ್ಪಾಸಿಟೊ’ (885 ಕೋಟಿ ವೀಕ್ಷಣೆಗಳು), ‘ವೀಲ್ಸ್ ಆನ್ ದಿ ಬಸ್’ (816 ಕೋಟಿ ವೀಕ್ಷಣೆಗಳು ), ‘ಬಾತ್ ಸಾಂಗ್’ (728 ಕೋಟಿ ವೀಕ್ಷಣೆಗಳು) ಮತ್ತು ‘ಜಾನಿ ಜಾನಿ ಯೆಸ್ ಪಾಪಾ’ (712 ಕೋಟಿ ವೀಕ್ಷಣೆಗಳು) ನಂತಹ ವೀಡಿಯೊಗಳು ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಈಗ ಭಾರತದ ‘ಶ್ರೀ ಹನುಮಾನ್ ಚಾಲೀಸಾ’ ವೀಡಿಯೊ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊಗಳ ಅಪರೂಪದ ಜಾಗತಿಕ ಲೀಗ್ನಲ್ಲಿ ಸ್ಥಾನ ಪಡೆದಿದೆ.
ಭೂಷಣಕುಮಾರ ಅವರಿಂದ ಕೃತಜ್ಞತೆ
ಈ ಸಂದರ್ಭದಲ್ಲಿ ಟಿ-ಸೀರೀಸ್ನ ವ್ಯವಸ್ಥಾಪಕ ನಿರ್ದೇಶಕ ಭೂಷಣಕುಮಾರ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. “ಹನುಮಾನ್ ಚಾಲೀಸಾ ನನ್ನನ್ನೂ ಒಳಗೊಂಡಂತೆ ಲಕ್ಷಾಂತರ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನನ್ನ ತಂದೆ, ಗುಲ್ಶನ್ ಕುಮಾರ ಅವರು ಆಧ್ಯಾತ್ಮಿಕ ಸಂಗೀತವನ್ನು ಪ್ರತಿ ಮನೆಗೂ ತಲುಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಮತ್ತು ಈ ಸಾಧನೆಯು ಅವರ ದೃಷ್ಟಿಕೋನದ ಪ್ರತಿಬಿಂಬವಾಗಿದೆ. 500 ವೀಕ್ಷಣೆಗಳನ್ನು ಮೀರಿ ಮತ್ತು ಯೂಟ್ಯೂಬ್ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಟಾಪ್ 10 ವಿಡಿಯೋಗಳಲ್ಲಿ ಸೇರಿರುವುದು ಕೇವಲ ಡಿಜಿಟಲ್ ಸಾಧನೆಯಲ್ಲ; ಇದು ಜನರ ಅಚಲವಾದ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ. ತುಳಸೀದಾಸರು ರಚಿಸಿದ ಈ ಹನುಮಾನ್ ಚಾಲೀಸಾವು ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಹಿಂದೂಗಳ ದೈನಂದಿನ ಪ್ರಾರ್ಥನೆಯ ಭಾಗವಾಗಿದೆ.


