ಕೋಲಾರ: ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿ ಮಧ್ಯೆ ಜಗಳವಾಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡ ನಂತರ ತೀವ್ರವಾಗಿ ಗಾಯಗೊಂಡಿದ್ದ ವಧು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಚಂಬರಸನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ವಧು ಲಿಖಿತ ಶ್ರೀ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವರ ನವೀನ್ ಬುಧವಾರ (ಆಗಸ್ಟ್ 7) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮದುವೆ ಕಾರ್ಯಕ್ರಮ ಮುಗಿದ ಬಳಿಕ ಮುಗಿದ ಬಳಿಕ ರೂಮಿಗೆ ಹೋದ ವಧು ಲಿಖಿತ ಶ್ರೀ ಹಾಗೂ ವರ ನವೀನ್ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆಗಿದ್ದೇನು..?
ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಚಂಬರಸನಹಳ್ಳಿ ಗ್ರಾಮದ ನವೀನ್, ಆಂಧ್ರಪ್ರದೇಶದ ಬೈನಪಲ್ಲಿ ಗ್ರಾಮದ ಲಿಖಿತಶ್ರೀ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಇಬ್ಬರೂ ಮನೆಯವರನ್ನು ಒಪ್ಪಿಸಿ ಬುಧವಾರ ವಿವಾಹವಾಗಿದ್ದಾರೆ. ಬುಧವಾರ ಬೆಳಿಗ್ಗೆ ಮದುವೆಯ ಎಲ್ಲ ಕಾರ್ಯಕ್ರಮಗಳನ್ನೂ ಇಬ್ಬರೂ ಜೊತೆಯಾಗಿ ಸಂತೋಷದಿಂದ ನಿರ್ವಹಿಸಿದ್ದಾರೆ. ಜೊತೆಯಾಗಿ ಸಪ್ತಪದಿ ತುಳಿದಿದ್ದಾರೆ, ತಾಳಿ ಕಟ್ಟಿದ್ದಾರೆ. ಅರುಂಧತಿ ನಕ್ಷತ್ರ ನೋಡಿದ್ದಾರೆ. ವಧು ಲಿಖಿತ ಹಾಗೂ ವರ ನವೀನ್ ಅವರ ವಿವಾಹ ಅದ್ಧೂರಿಯಾಗಿ ನಡೆಯಿತು. ಆದರೆ ಇದಾದ ಬಳಿಕ ರೂಮಿಗೆ ಹೋದ ನವ ದಂಪತಿಗೆ ಏನಾಯ್ತೋ ಗೊತ್ತಿಲ್ಲ. ಇವರ ಜಗಳ ಆರಂಭವಾಗಿದೆ.
ಜಗಳ ವಿಕೋಪಕ್ಕೆ ಹೊಡೆದಾಟಕ್ಕೆ ತಿರುಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇಬ್ಬರೂ ಚಾಕುವಿನಿಂದ ಹೊಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಹೊಡೆದಾಟದಲ್ಲಿ ವಧು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಕೆಜಿಎಫ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಧು ಲಿಖಿತ ಮೃತಪಟ್ಟಿದ್ದಾರೆ, ವರನೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಡೆದಾಟದ ವೇಳೆ ಕೋಪದಲ್ಲಿ ವಧುವಿಗೆ ವರ ಚಾಕುವಿನಿಂದ ತಿವಿದಿದ್ದಾನೆ, ನಂತರ ಆಕೆ ಗಂಭೀರವಾಗಿ ಗಾಯಗೊಂಡ ನಂತರ ತನಗೆತಾನೇ ತಿವಿದುಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಪ್ರೀತಿಸಿ ವಿವಾಹವಾದ ನಂತರ ಸುಖವಾಗಿ ಸಂಸಾರ ನಡೆಸಬೇಕು ಎನ್ನುವಾಗಲೇ ಈ ದುರಂತ ಸಂಭವಿಸಿದೆ. ಇವರು ಯಾವ ಕಾರಣಕ್ಕೆ ಹೊಡೆದಾಡಿಕೊಂಡರು ಎಂಬುದು ಸ್ಪಷ್ಟವಾಗಬೇಕಿದೆ. ಈ ಕುರಿತು ಸ್ಥತನಿಖೆ ನಡೆಸಬೇಕಿದೆ.