ಬೆಳಗಾವಿ :
ಪ್ರತಿಯೊಬ್ಬ ಮನುಷ್ಯನಿಗೆ ಗುರುವಿನ ಮಾರ್ಗದರ್ಶನ ಅತ್ಯಾವಶ್ಯಕ. ಜೀವನದಲ್ಲಿ ಯಶಸ್ಸು ಸಾಧಿಸಲು ಗುರು ತೋರಿದ ಹಾದಿಯಲ್ಲಿ ಸಾಗುವುದು ಅತ್ಯಾವಶ್ಯಕವಾಗಿದೆ. ಆದ್ದರಿಂದ ಗುರುಗಳಿಂದ ಮಾರ್ಗದರ್ಶನ
ಪಡೆದು ಜ್ಞಾನ ಬೆಳೆಸಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಸಾಮರ್ಥ್ಯ ಬೆಳೆಸಿಕೊಂಡು ಸ್ವಾವಲಂಬಿಯಾಗಿ ಜೀವನ ಸಾಗಿಸಬೇಕು ಎಂದು ಶೋಭಾ ಲೋಕೂರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮಾ ಮಹರ್ಷಿ ವ್ಯಾಸ ಹಾಗೂ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದರು.
ಮಹರ್ಷಿ ವ್ಯಾಸರವರ ಜೀವನ ಚರಿತ್ರೆಯ ಕೆಲವು ಸನ್ನಿವೇಶಗಳನ್ನು ವಿದ್ಯಾರ್ಥಿನಿಯರಿಗೆ ಹೇಳಿ ಗುರು-ಶಿಷ್ಯರ ಸಂಬಂಧದ ಬಗ್ಗೆ ತಿಳಿಸಿದರು.
ತಂದೆ-ತಾಯಿ ಪ್ರತಿಯೊಬ್ಬರಿಗೂ ಮೊದಲ ಗುರು ಆಗಿರುತ್ತಾರೆ. ಆ ನಂತರ ಶಾಲಾ-ಕಾಲೇಜುಗಳಲ್ಲಿ
ಭೋದನೆ ಮಾಡುವ ಗುರುಗಳು ಹಾಗೂ ಜೀವನ ಸಾಧಿಸುವಾಗ ಸಮಯ ಸಮಯಕ್ಕೆ ಸನ್ಮಾರ್ಗ
ತೋರುವವರು ಗುರುಗಳು ಆಗಿರುತ್ತಾರೆ. ಎಲ್ಲಾ ಗುರುಗಳಿಗೆ ಗೌರವ ನೀಡುತ್ತಾ ಗುರುಗಳು ತೋರಿದ ಮಾರ್ಗದಲ್ಲಿ ನಡೆದರೆ ಪ್ರತಿಯೊಬ್ಬರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಚಿಂತಾಮಣಿ ಗ್ರಾಮೋಪಾಧ್ಯಾಯ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಿಂದಲೇ ಸಮಯ ಪ್ರಜ್ಞೆ ಇರಬೇಕು. ಗುರುಗಳು ನೀಡಿದ ಗೃಹ ಪಾಠ ಸರಿಯಾದ ಸಮಯಕ್ಕೆ ಮಾಡಿ ಶಿಕ್ಷಕರಿಂದ ಅಭಿನಂದನೆಗೆ
ಪಾತ್ರರಾಗಬೇಕು ಎಂದು ಹೇಳಿದರು.
ಗುರು ಪೂರ್ಣಿಮಾ ಅಂಗವಾಗಿ ಮರಾಠಿ ಮಾಧ್ಯಮ ವಿದ್ಯಾರ್ಥಿನಿಯರಿಗೆ ಅಭಂಗ ಸ್ಪರ್ಧೆ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯರಿಗೆ ದಾಸ ಸಾಹಿತ್ಯ ಆಧಾರಿತ ಕಾವ್ಯ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ಶ್ರೇಯಾ ಕುಲಕರ್ಣಿ, ದಿವ್ಯಾ ಕುರುಬರ,
ಸೋಹಾನಿ ಕುರಂಗಿ, ಸೃಷ್ಟಿ ಹುಕ್ಕೇರಿಕರ ಶೃತಿ ಜುವೇಕರ ಹಾಗೂ ಪ್ರಿಯಾಂಕಾ ಹವಳ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಶಾಲೆಯ
ಮುಖ್ಯೋಪಾಧ್ಯಾಯ ಎಂ.ಕೆ. ಮಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೃಷ್ಟಿ ತೇಲಿ ಸ್ವಾಗತಿಸಿದರು. ಶೃತಿ ಜುವೇಕರ ನಿರೂಪಿಸಿದರು. ಶಾರೋನ ಭಂಡಾರಿ ವಂದಿಸಿದರು.