ವಿಜಯಪುರ: ನಗರದ 770 ಲಿಂಗಗಳ ದೇವಸ್ಥಾನ ಪ್ರಮುಖ ಆಕರ್ಷಣೆಯಾಗಿದೆ.
1954 ರಲ್ಲಿ ಬಂಥನಾಳ ಶ್ರೀ ಸಂಗನಬಸವ ಮಹಾಶಿವಯೋಗಿಗಳ ದಿವ್ಯ ಸಂಕಲ್ಪದಂತೆ ವಿಜಯಪುರ ನಗರದಲ್ಲಿ 770 ಅಮರ ಗಣಾಧೀಶ್ವರರ (ಅಮರಗಣಂಗಳ) ಸ್ಮಾರಕ ಲಿಂಗಗಳ ದೇವಾಲಯದ ಪ್ರತಿಷ್ಠಾಪನೆ ನಡೆದಿತ್ತು. ನಂತರ 1960 ರಲ್ಲಿ 770 ಅಮರ ಗಣಾಧೀಶ್ವರರ ದೇವಾಲಯ ವಿಜೃಂಭಣೆಯಿಂದ ಲೋಕಾರ್ಪಣೆಯಾಗಿತ್ತು. ಅಂದಿನ ಮೈಸೂರು ಮಹಾರಾಜರು, ಬಬಲೇಶ್ವರ ಶಾಂತವೀರ ಮಹಾಸ್ವಾಮೀಜಿ, ಚಿತ್ರದುರ್ಗ, ಸಿದ್ದಗಂಗಾ ಮತ್ತು ಸುತ್ತೂರು ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
12 ನೇ ಶತಮಾನದಲ್ಲಿ 770 ಅಮರಗಣಂಗಳ ಅಂದರೆ ಶರಣರು ಬಸವೇಶ್ವರ ಜೊತೆಗೂಡಿ ಸಾಮಾಜಿಕ ಮೌಡ್ಯಗಳನ್ನು ಹೋಗಲಾಡಿಸಿ, ಸಮಾನತೆಗಾಗಿ ಶ್ರಮಿಸಿದ್ದರು. ಈ ಹಿನ್ನಲೆ ಸಮಾಜಕ್ಕೆ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ ಅವರ ಹೆಸರಿನಲ್ಲಿಯೇ 770 ದಂಪತಿ, ತಲಾ 151 ರೂಪಾಯಿ ಭಕ್ತಿ ಸಮರ್ಪಿಸಿ ಲಿಂಗ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿಈ 770 ಲಿಂಗಗಳ ದೇವಸ್ಥಾನ ದರ್ಶನಕ್ಕೆ ಆಗಮಿಸಿದ್ದ ಬಿಎಲ್ಇ ಸಂಸ್ಥೆ ಅಧ್ಯಕ್ಷ ಹಾಗೂ ಹಾಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್
ದೇವಸ್ಥಾನ ಪುನರುಜ್ಜೀವನ ಅಗತ್ಯವಿರುವುದನ್ನು ಮನಗಂಡು ದುರಸ್ಥಿಗೆ ಕ್ರಮ ಕೈಗೊಂಡಿದ್ದರು. ಬಿ ಎಲ್ ಡಿ ಇ ಡೀಮ್ಸ್ ವಿವಿಯಿಂದ 1.51 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಮೇಲ್ಪಾವಣಿ ಹಾಗೂ ಗೋಡೆಗಳನ್ನು ನವೀಕರಣ ಮಾಡಿಸಿದ್ದಾರೆ. ಒಳಾಂಗಣದಲ್ಲಿ ಪೂಜಾ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಎಲ್ಲ 770 ಲಿಂಗಗಳನ್ನು ಬದಲಾವಣೆ ಮಾಡಲಾಗಿದೆ. ನವೀಕೃತಗೊಂಡ 770 ಲಿಂಗಗಳ ದೇವಸ್ಥಾನ ಉದ್ಘಾಟನೆಯಾಗಲಿದೆ. ಎಂ.ಬಿ. ಪಾಟೀಲ್ ಉದ್ಘಾಟನೆ ನೆರವೇರಿಸಲಿದ್ದಾರೆ.