ಬೆಂಗಳೂರು :
ಪೋಕ್ಸೊ ಕಾಯಿದೆ ಅಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿ ಬುಧವಾರ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮೀಣ ಠಾಣೆಯ ಪೊಲೀಸರು ಎರಡು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಮೊದಲ ಆರೋಪ ಪಟ್ಟಿಗೆ ಸಂಬಂಧಿಸಿದಂತೆ ಜಾಮೀನು ಕೋರಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ದಾಖಲೆಗಳು ಸಲ್ಲಿಕೆಯಾಗಿವೆ. ತನಿಖೆ ಪೂರ್ಣಗೊಂಡಿದ್ದು, ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಹತ್ತು ತಿಂಗಳಿಗೂ ಹೆಚ್ಚು ಕಾಲ ಆರೋಪಿ ಸ್ವಾಮೀಜಿಯು ಜೈಲಿನಲ್ಲಿದ್ದಾರೆ.
ಚಿತ್ರದುರ್ಗ ವಿಶೇಷ ನ್ಯಾಯಾಲಯವು ಕ್ರಿಮಿನಲ್ ಪ್ರಕರಣಗಳ ಸಾಕ್ಷಿ ವಿಚಾರಣಾ ಪ್ರಕ್ರಿಯೆ ನಡೆಸುವುದಕ್ಕೆ 2023ರ ಜುಲೈ 1ರವರೆಗೆ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಲಾಗಿದೆ.
ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಮಠದಲ್ಲಿ ಬಂಧಿಸಿದ್ದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
2022ರ ಡಿಸೆಂಬರ್ 1ರಂದು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಆನಂತರ ಹೈಕೋರ್ಟ್ ಮೆಟ್ಟಿಲೇರಿದ್ದರೂ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದು ಅರ್ಜಿ ಹಿಂಪಡೆಯಲಾಗಿತ್ತು. ಈಗ ಹೊಸದಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ.