ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಸತತ 13 ದಿನಗಳ ಕಾರ್ಚಾರಣೆ ನಡೆದರೂ ಕೇರಳ ಲಾರಿ ಚಾಲಕ ಅರ್ಜುನ್ ಸೇರಿದಂತೆ ನಾಪತ್ತೆಯಾಗಿರುವ ಮೂವರು ಮತ್ತು ಲಾರಿ ಪತ್ತೆಯಾಗಿಲ್ಲ. ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ನದಿಯೊಳಗೆ ಹೋಗಲು ಸ್ಕೂಬಾ ಡೈ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಶೋಧ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಹಾಗೂ ಪರಿಸ್ಥಿತು ಸುಧಾರಿಸುವ ವರೆಗೂ ಕಾಯ್ದು ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.
ಭಾನುವಾರ ಸಂಜೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ತೀವ್ರ ಮಳೆ, ವಿಷಮ ಪರಿಸ್ಥಿತಿ, ನದಿಯಲ್ಲಿ ಸುಳಿ, ತೀವ್ರ ಸೆಳೆತ ಮತ್ತು ನದಿಯೊಳಗೆ ಕಲ್ಲು ಮಣ್ಣುಗಳು ರಾಶಿ ಬಿದ್ದು ರಾಡಿ ಮಿಶ್ರಿತ ನೀರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಅಸಾಧ್ಯವಾಗಿದೆ ಎಂದು ಆಡಳಿತ ಹೇಳಿದೆ. ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನದಿ ನೀರಿನ ಹರಿವು ಕಡಿಮೆಯಾದ ನಂತರ ಮತ್ತೆ ಶೋಧ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು, ವಿಷಮ ಪರಿಸ್ಥಿತಿಯಲ್ಲಿ ನದಿ ಆಳದಲ್ಲಿ ಶೋಧ ಕಾರ್ಯಕ್ಕೆ ಫಲ ಸಿಕ್ಕಿಲ್ಲ. ಆರ್ಮಿ, ನೇವಿ ಮತ್ತು ಈಗ ಬಂದ ಮುಳುಗು ತಜ್ಞ ಈಶ್ವರ ಮಲ್ಪೆಯವರ ತಂಡ ನದಿಯಲ್ಲಿ ಹುಡುಕಾಟ ನಡೆಸಿದರೂ ತೀವ್ರ ಮಳೆ, ನದಿಯ ತೀವ್ರ ಸೆಳೆತದ ಕಾರಣ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ನದಿಯಲ್ಲಿ ಕಳ್ಳು ಮಣ್ಣುಗಳಷ್ಟೇ ಅಲ್ಲ, ಗಿಡ ಮರಗಳು ಬಿದ್ದಿದ್ದರಿಂದ ಹಾಗೂ ನದಿ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಬಂಡೆಗಲ್ಲುಗಳ ಅಡಿಯಲ್ಲಿ ಆಳಕ್ಕೆ ಹೋಗಿ ಹುಡುಕಾಟ ನಡೆಸುವುದು ಕಷ್ಟಸಾಧ್ಯವಾಗಿದೆ. ಮುಳುಗು ತಜ್ಞರು ಈ ಪರಿಸ್ಥಿತಿಯಲ್ಲಿ ಹುಡುಕುವುದು ಕಷ್ಟ ಎಂದು ಹೇಳಿದ್ದಾರೆ. ಹೀಗಾಗಿ ಪ್ರಕೃತಿ ಸಹಕರಿಸುವವರೆಗೆ ಅನಿವಾರ್ಯವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಾವು ಎಲ್ಲ ಪ್ರಯತ್ನವನ್ನೂ ಮಾಡಿದ್ದೇವೆ. ಆದರೆ ಪ್ರಕೃತಿ ನಮಗೆ ಸಹಕರಿಸುತ್ತಿಲ್ಲ. ಶೋಧ ಕಾರ್ಯಾಚರಣೆ ನಡೆಸಲು ವಾತಾವರಣ ಪೂರಕವಾದ ನಂತರ ಮತ್ತು ಇನ್ನೂ ಉನ್ನತ ತಂತ್ರಜ್ಞಾನದ ಲಭ್ಯತೆ ನೋಡಿ ಮತ್ತೆ ಆರಂಭ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿ, ದೆಹಲಿಯ ಖಾಸಗಿ ಕಂಪನಿ ಡ್ರೋಣ್ ವರದಿ ಆಧಾರಿಸಿ ನೀಡಿದ್ದ ಎಲ್ಲ ನಾಲ್ಕು ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲಿ ಬರೀ ಕಲ್ಲು, ಮಣ್ಣು ಮತ್ತು ನಾಲ್ಕನೇ ಸ್ಥಳದಲ್ಲಿ ಮರ ಮತ್ತು ದಿಮ್ಮಿ ಕಂಡು ಬಂದಿದೆ. ನದಿಯ ನೀರು ಸಹಕರಿಸದ ಕಾರಣ ಈಶ್ವರ ಮಲ್ಪೆ ತಂಡಕ್ಕೆ ಇನ್ನೂ ಆಳಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ ಎಂದರು.
ಶಾಸಕ ಸತೀಶ ಸೈಲ್, ಎಸ್ಪಿ ನಾರಾಯಣ ಮತ್ತಿತರರು ಇದ್ದರು.
ನಿರಂತರ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ನದಿ ನೀರಿನ ವೇಗ ಹೆಚ್ಚಿದೆ, ಕೆಸರುಮಯವಾಗಿರುವುದರಿಂದ ಯಶಸ್ವಿಯಾಗಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿದರೆ ಹೇಗೆ ಕಾಣುತ್ತದೆ. ಅಂಥ ಪರಿಸ್ಥಿತಿ ನೀರಿನೊಳಗೆ ಇದೆ. ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ಯಶಸ್ಸು ಕಾಣಲಿಲ್ಲ ಎಂದು ಮುಳುಗು ತಜ್ಞ ಈಶ್ವರ ಮಲ್ಪೆ ಹೇಳಿದ್ದಾರೆ.
ನಾನು ನದಿಗೆ ಇಳಿದಾಗ ಬಂಡೆಗಲ್ಲು, ಮಣ್ಣು ಬಿಟ್ಟು ಬೇರೆ ಕಾಣಲಿಲ್ಲ. ಇಂದು (ಭಾನುವಾರ) ಶೋಧ ನಡೆಸಿದ ಪಾಯಿಂಟ್ನಲ್ಲಿ ಆಲದ ಮರದಂತಹ ಒಂದು ಮರ ಸಿಕ್ಕಿದೆ. ನೀರಿನ ವೇಗ ಹೆಚ್ಚಾಗಿರುವುದರಿಂದ ನದಿ ಒಳಗೆ ಬಹಳ ಹೊತ್ತು ಇರಲು ಆಗಲಿಲ್ಲ. ಕೆಸರು ನೀರು ಇರುವ ತನಕ ಕಾರ್ಯಾಚರಣೆ ಮಾಡುವುದು ಕಷ್ಟ. ನಾನು ನದಿ ಒಳಗೆ ಎಷ್ಟೇ ಇಳಿದರೂ ಸರಿಯಾಗಿ ಏನೂ ಕಾಣಲಿಲ್ಲ. ನದಿ ನೀರು ಸಂಪೂರ್ಣ ರಾರಿಯಾಗಿರುವುದರಿಂದ ಸರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.