ಬೆಳಗಾವಿ: ಸವದತ್ತಿ ಭಾಗದಲ್ಲಿ ರೈಲ್ವೆ ಸಂಪರ್ಕದ ಕುರಿತು ಯೋಜನೆ ಸಿದ್ಧಪಡಿಸಲಾಗಿದೆ. ಅಧಿಕಾರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ರೈಲು ಮಾರ್ಗ ನಿರ್ಮಿಸಲು ಶ್ರಮಿಸುವೆ. ಮೂಲ ಸೌಕರ್ಯ ಸೇರಿ ಉದ್ಯಮ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದ್ದಾರೆ. ಸವದತ್ತಿಯ ಕಲ್ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
ಮಹದಾಯಿ, ಕಳಸ ಬಂಡೂರಿ ಸೇರಿ 13 ಟಿಎಂಸಿ ಅಡಿ ನೀರು ಮಲಪ್ರಭೆಗೆ ಹರಿಸಬೇಕಾಗಿದೆ. ಗೋವಾ ಸರಕಾರದ ಉದ್ದಟತನದಿಂದ ವಿಳಂಬವಾಗುತ್ತಿದೆ. ಅರಣ್ಯ ಮತ್ತು ನೀರಾವರಿ ಇಲಾಖೆಗಳಿಂದ ಕ್ಲಿಯರೆನ್ಸ್ ಬಂದಿದ್ದು ಕೆಲವೇ ದಿನಗಳಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲಾಗುವುದು ಎಂದು ಅವರು ಹೇಳಿದರು.
ಕೆಲವರ ಹಿತಾಸಕ್ತಿ ಕಾರಣ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕ ದುರ್ಬಲವಾಗಿದ್ದರೂ ತಾಲೂಕು ಘಟಕಗಳ ಸಂಘಟನೆ ಪ್ರಬಲವಾಗಿದೆ. ಸಮಾಜ ಬಲಗೊಳ್ಳಲು ಎಲ್ಲರ ಸಹಕಾರ ಅಗತ್ಯ. ಕುಲಕಸುಬು ವ್ಯಾಪಾರವಾದರೂ ಇಂದಿನ ಯುವಕರು ಬೇರೆ ಬೇರೆ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂತಸ ತಂದಿದೆ ಎಂದರು.