ಮುಂಬೈ :
ಎನ್ಸಿಪಿ ಸಂಸ್ಥಾಪಕ ಶರದ್ ಪವಾರ್ ಮಂಗಳವಾರ ರಾಷ್ಟ್ರೀಯವಾದಿ ಕಾಂಗ್ರೆಸ್(ಎನ್ ಸಿಪಿ) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ನಾನು ಎನ್ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಪವಾರ್ ತಮ್ಮ ಆತ್ಮಚರಿತ್ರೆಯ ಲೋಕ್ ಮೇಜ್ ಸಂಗತಿಯ ಎರಡನೇ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.
ಮಹಾರಾಷ್ಟ್ರ ರಾಜಕೀಯದ ಧೀಮಂತ ನಾಯಕ ಶರದ್ ಪವಾರ್ ಅವರು ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ, ದಶಕಗಳ ಸುದೀರ್ಘ ವೃತ್ತಿಜೀವನದ ನಂತರ ಎಲ್ಲಾದರು ಒಂದು ಕಡೆ ನಿಲ್ಲುವ ಬಗ್ಗೆ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ.
ನನಗೆ ರಾಜ್ಯಸಭೆಯಲ್ಲಿ ಮೂರು ವರ್ಷಗಳ ಅಧಿಕಾರವಿದೆ. ನಾನು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಮೂರು ವರ್ಷಗಳಲ್ಲಿ, ನಾನು ರಾಜ್ಯ ಮತ್ತು ದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ನಾನು ಯಾವುದೇ ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಆದರೆ ರಾಜಕೀಯದಿಂದ ಹಿಂದೆ ಸರಿಯುತ್ತಿಲ್ಲ ಎಂದು ಪವಾರ್ ಸ್ಪಷ್ಟಪಡಿಸಿದ್ದಾರೆ. ನನ್ನ ಸಹೋದ್ಯೋಗಿಗಳೇ, ನಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದರೂ, ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ಮುಂದಿನ ಅಧ್ಯಕ್ಷರು ಯಾರೆಂಬುದನ್ನು ನಾಲ್ಕು ಸದಸ್ಯರ ಸಮಿತಿ ಈಗ ನಿರ್ಧರಿಸುತ್ತದೆ ಎಂದು ಪವಾರ್ ಪ್ರಕಟಿಸಿದರು.
ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವ ಪವಾರ್ ಅವರ ನಿರ್ಧಾರವನ್ನು ಎನ್ಸಿಪಿ ನಾಯಕರು ವಿರೋಧಿಸುತ್ತಿದ್ದಂತೆ ಸಭಾಂಗಣದಲ್ಲಿ “ನಿಮ್ಮ ನಿರ್ಧಾರವನ್ನು ಹಿಂಪಡೆಯಿರಿ” ಎಂಬ ಕೂಗು ಮೊಳಗಿತು. ಅವರು ತಮ್ಮ ಭಾಷಣವನ್ನು ಮುಗಿಸಿದ ನಂತರ, ನಿಷ್ಠಾವಂತರು ವೇದಿಕೆಗೆ ಧಾವಿಸಿದರು ಮತ್ತು ಅವರ ರಾಜೀನಾಮೆಯನ್ನು ಮರುಪರಿಶೀಲಿಸುವಂತೆ ಕೈ ಜೋಡಿಸಿ ಮನವಿ ಮಾಡಿದರು.
ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಶರದ್ ಪವಾರ್ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳದ ಹೊರತು ಸ್ಥಳ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಎನ್ಸಿಪಿ ನಾಯಕ ಮತ್ತು ರಾಜ್ಯಸಭೆಯ ಪ್ರಫುಲ್ ಪಟೇಲ್ ಅವರು ತಮ್ಮ ರಾಜೀನಾಮೆಯನ್ನು ಘೋಷಿಸುವ ಮೊದಲು ಶರದ್ ಪವಾರ್ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಪವಾರ್ ಅವರ ಅಣ್ಣನ ಮಗ ಮತ್ತು ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ಹೆಚ್ಚುತ್ತಿರುವ ಗದ್ದಲದ ಸಮಯದಲ್ಲಿ ಪವಾರ್ ಅವರ ನಿರ್ಧಾರ ಬಂದಿದೆ.
ಪವಾರ್ ಅವರು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರು ಮತ್ತು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಲು ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ನಡುವೆ ಅಸಂಭವ ಮೈತ್ರಿಯನ್ನು ಒಟ್ಟಿಗೆ ಸೇರಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು.