ಬೆಂಗಳೂರು: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್ )ಯಾರಾಗುತ್ತಾರೆ ಎಂಬ ಕುತೂಹಲ ಈಗ ಗರಿಗೆದರಿದೆ. ಈ ಹಿಂದೆ ಬೆಳಗಾವಿಯ ಜಿಲ್ಲಾಧಿಕಾರಿಯಾಗಿ ಅಪಾರ ಹೆಸರು ಮಾಡಿದ್ದ ರಾಜ್ಯದ ಹೆಸರಾಂತ ಐಎಎಸ್ ಅಧಿಕಾರಿಯಾಗಿರುವ ಶಾಲಿನಿ ರಜನೀಶ ಅವರಿಗೆ ಈ ಹುದ್ದೆ ಒಲಿದು ಬರಲಿದೆಯೇ ಕಾದು ನೋಡಬೇಕು.ಸೆಪ್ಟಂಬರ್ ನಲ್ಲಿ ಅವರ ಪತಿ ಹಾಲಿ ಸಿಎಸ್ ರಜನೀಶ ಗೋಯಲ್ ಅವರು ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ. ಅವರ ನಂತರ ರಾಜ್ಯ ಸರಕಾರ ಯಾರನ್ನು ನೇಮಕ ಮಾಡಲಿದೆ ಎಂಬ ಕುತೂಹಲ ಮೂಡಿದೆ ಹಿರಿತನದ ಆಧಾರದಲ್ಲಿ ಶಾಲಿನಿ ರಜನೀಶ ಅವರಿಗೆ ಸಿದ್ದರಾಮಯ್ಯ ಸರಕಾರ ಆದ್ಯತೆ ನೀಡಬೇಕು. ಜೊತೆಗೆ ಸಿದ್ದರಾಮಯ್ಯ ನೇತೃತ್ವದ ಸರಕಾರದೊಂದಿಗೆ ಉತ್ತಮ ಬಾಂಧವ್ಯ, ಸಮನ್ವಯತೆ ಹೊಂದಿರುವ ಶಾಲಿನಿ ಅವರು ಈ ಹುದ್ದೆಗೆ ಕೀರ್ತಿ ಕಳಶ.ರಾಜ್ಯ ಅಭಿವೃದ್ಧಿ ಆಯುಕ್ತೆಯಾಗಿರುವ ಶಾಲಿನಿ ರಜನೀಶ ಅವರು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅತ್ಯಂತ ಸಮರ್ಥರು. ಪತಿಯ ಸೇವಾ ನಿವೃತ್ತಿಯ ನಂತರ ಪತ್ನಿ ಅಲಂಕರಿಸುವ ವಿಶೇಷ ಸಂದರ್ಭ ಅಪರೂಪಕ್ಕೆ ಒದಗಿ ಬಂದಿದ್ದು ಸಿದ್ದರಾಮಯ್ಯ ಸರಕಾರ ಅವಕಾಶ ಕಲ್ಪಿಸಿದರೆ ಶಾಲಿನಿ ಅವರಿಗೆ ಈ ಒಂದು ಸುಯೋಗ ಕೂಡಿ ಬರಬಹುದು.ಶಾಲಿನಿ ರಜನೀಶ ಅವರ ಕರ್ತವ್ಯ ನಿರ್ವಹಣೆ ಹಾಗೂ ಚುರುಕು ಕೆಲಸದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೆಚ್ಚುಗೆ ಇದೆ. ಈ ಕಾರಣಕ್ಕೆ ಅವರಿಗೆ ಸುಲಭವಾಗಿ ಸಿಎಸ್ ಪಟ್ಟ ಒಲಿಯಬಹುದು ಎಂಬ ನಿರೀಕ್ಷೆ ಇದೆ.ಇದರ ನಡುವೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರ ಹೆಸರು ಸಹ ಹರಿದಾಡಿದೆ. ಸಾಮಾಜಿಕ ನ್ಯಾಯದಡಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಐಎಎಸ್ ಅಧಿಕಾರಿಗೆ ಆದ್ಯತೆ ನೀಡಬೇಕು ಎಂಬ ಚರ್ಚೆ ಇದ್ದು ಮುಖ್ಯಮಂತ್ರಿ ಅವರು ಕೊನೆ ಕ್ಷಣದಲ್ಲಿ ಯಾರಿಗೆ ಆದ್ಯತೆ ನೀಡುತ್ತಾರೆ ನೋಡಬೇಕಾಗಿದೆ.