ಪ್ರಾ.ಬಿ.ಎಸ್.ಗವಿಮಠ,ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರು, ಬೆಳಗಾವಿ
ವಿದ್ಯೆ ಕಲಿಸಿದ ಗುರುಗಳಿಗೆ ಶ್ರೀ ಗುರುವೇ ನಮಃ ಎನ್ನುವ ಕಾಲವನ್ನೂ ಕಂಡಿದ್ದೇವೆ. ಇಂದು ಗುರುವೇ ಏನು ಮಹಾ ಎನ್ನುವವರನ್ನೂ ಕಾಣುತ್ತಿದ್ದೇವೆ. ಶೈಕ್ಷಣಿಕ ತಂತ್ರಜ್ಞಾನದಿಂದ ಇಂದು ಗುರುವಿಲ್ಲದೆ ಎಲ್ಲವನ್ನೂ ಕಲಿಯುವ ಕಾಲ ಬಂದಿದೆ. ‘ಗೂಗಲ್’ ವೀಕ್ಷಿಸಿ ಗುರುಗಳಿಗೆ ಗೊತ್ತಿಲ್ಲದ್ದನ್ನು ವಿದ್ಯಾರ್ಥಿಗಳು ಅರಿತುಕೊಂಡಿದ್ದಾರೆ. ಆದರೆ “ಒನ್-ಟು-ಒನ್” ಕಲಿಕೆ ಪರಿಣಾಮಕಾರಿ ಹಾಗೂ ಹೃದಯವನ್ನು ತಟ್ಟಿ ಹೋಗುತ್ತದೆ. ಗ್ರಹಿಕೆ ಸುಲಭವೆನಿಸುತ್ತದೆ. ಆದ್ದರಿಂದ ಎಷ್ಟೇ ನವನವೀನ ತಂತ್ರಜ್ಞಾನ ಆವಿಷ್ಕಾರಗೊಂಡರೂ ವಿದ್ಯಾಗುರುಗಳ ಮಹತ್ವ ಕಡಿಮೆಯಾಗದು.
ಇಂದು ನಮ್ಮ ಕಾಲಘಟ್ಟದ ಶಿಕ್ಷಕರನ್ನು-ಪ್ರಾಧ್ಯಾಪಕರನ್ನು ನೋಡಿ, ಅವರ ಜ್ಞಾನದ ಮಟ್ಟ, ನಡವಳಿಕೆ, ಜೀವನ ಪದ್ಧತಿಗಳನ್ನು ಗಮನಿಸಿ.
ಹಿಂದಿನ ಕಾಲದ ವಿದ್ಯಾಗುರುಗಳ ಜತೆಗೆ ಹೋಲಿಸಿ ಟೀಕೆ ಟಿಪ್ಪಣಿ ಮಾಡುತ್ತೇವೆ. ಅದು ತಪ್ಪು. ಡಾ.ಎಸ್.ರಾಧಾಕೃಷ್ಣನ್ ಮೂಲತಃ ತತ್ವಶಾಸ್ತ್ರದ ಪ್ರಾಧ್ಯಾಪಕರು. ನಂತರ ಅವರು ಭಾರತದ ರಾಷ್ಟ್ರಪತಿಗಳಾಗಿ, ಚಿಂತಕರಾಗಿ ವಿಶ್ವದ ಗಮನ ಸೆಳೆದರು. ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಹೇಳಿ ಮಾದರಿಯಾದರು. ಸೆಪ್ಟೆಂಬರ್ 5 ರಾಧಾಕೃಷ್ಣನ್ ಅವರ ಜನ್ಮದಿನವೆಂದು ನಾವು ನಂಬಿಕೊಂಡು ಬಂದಿದ್ದೇವೆ. ಆದರೆ ಅದು ಕೂಡ ತಪ್ಪು. ಸೆಪ್ಟೆಂಬರ್ 5 ರಂದು ಡಾ.ರಾಧಾಕೃಷ್ಣನ್ನವರು ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಗೆ ಸೇರಿಕೊಂಡ ದಿನ. ಅವರ ಜನ್ಮ ತಾರೀಖು 20.9.1887 ಎಂದು ಅವರ ಮಗ ಡಾ.ಸರ್ವಪಲ್ಲಿ ಗೋಪಾಲ ಅವರೇ ಹೇಳಿಕೊಂಡಿದ್ದಾರೆ. ಸೆಪ್ಟೆಂಬರ್ 5 ಕೇವಲ ಶಿಕ್ಷಕ ದಿನಾಚರಣೆ. ಇದು ಇಂದು ಕೇವಲ ಭಾವಚಿತ್ರಕ್ಕೆ ಪೂಜೆ ಮಾಡುವ, ಮಿಠಾಯಿ ಹಂಚುವ ದಿನವೆನಿಸಿದೆ. ಬದಲಾಗಿ ಶಿಕ್ಷಕರ ಘನತೆ ಗೌರವಗಳನ್ನು ಹೆಚ್ಚಿಸುವ ವಿಧಾಯಕ ಕಾರ್ಯಕ್ರಮಗಳ ದಿನವಾಗಬೇಕು.
ಶಿಕ್ಷಕರು ಎಂದರೆ ಬಡತನ ಎಂದು ಹೇಳುವ ಕಾಲ ಇತ್ತು. ಆದರೆ ಇಂದು ಶಿಕ್ಷಕರ ಸ್ಥಾನಮಾನ ಬದಲಾಗಿದೆ. ಆಕರ್ಷಕ ವೇತನ ಪಡೆಯುತ್ತಿದ್ದಾರೆ. ಸಮಾಜ ನೋಡುವ ದೃಷ್ಟಿ ಬದಲಾಗಿದೆ. ಶಿಕ್ಷಕರೂ ಬದಲಾಗಿದ್ದಾರೆ. ಅವರೂ ಸಮಾಜದ ಒಂದು ಭಾಗ. ಸಮಾಜದ ಇತರ ಘಟಕಗಳಾದ ಶಾಸಕರು, ಮಂತ್ರಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳ ನಡವಳಿಕೆಗಳೂ ಶಿಕ್ಷಕನನ್ನು ಪ್ರಭಾವಿಸಿವೆ. ಆದ್ದರಿಂದ ಶಿಕ್ಷಕನನ್ನು ಪ್ರತ್ಯೇಕ ಮಾನದಂಡಗಳಿಂದ ಅಳೆಯದೆ, ಸಮಾಜವಿದ್ದಂತೆ ರೂಪುಗೊಳ್ಳುತ್ತಾನೆ ಎನ್ನುವದನ್ನು ಅರಿಯಬೇಕು.
ಆದರೆ ಒಂದು, ಶಿಕ್ಷಕರು ರಾಜಕಾರಣಿಗಳ ಬಾಲಂಗೋಚಿಗಳಂತೆ ವರ್ತಿಸಬಾರದು. ಅಧ್ಯಯನ-ಅಧ್ಯಾಪನಗಳೇ ಶಿಕ್ಷಕರ ಗುರಿಗಳಾಗಬೇಕು. ಬರೀ ರಾಜಕಾರಣ ಮಾಡುವ ನಾಯಕರೆನಿಸಬಾರದು. ಆದರೆ ಏನು ಮಾಡುವುದು, ನಮಗೆ ಮಾದರಿಯಾಗಿ ಇರಬೇಕಾದ ಕೆಲವು ಮಠಾಧೀಶರೂ ರಾಜಕಾರಣಿಗಳಾಗಿ ಬಿಟ್ಟಿದ್ದಾರೆ. ನಮ್ಮ ದುರ್ದೈವ!. ಬದಲಾಗಲಿ, ಆದರೆ ಬದಲಾವಣೆಯಿಂದ ಪ್ರಗತಿ ಸಾಧಿಸುವಂತಾಬೇಕು. ಆದರೆ ಸಮಾಜ ಅಪೇಕ್ಷಿಸುವ ಬದಲಾವಣೆ ಈಗ ಸಂಭವಿಸುತ್ತಿಲ್ಲ. ಶಿಕ್ಷಕನಾದವನು ಸದಾಕಾಲ ವಿದ್ಯಾರ್ಥಿಯಾಗಿ ಜ್ಞಾನ ಸಂಗ್ರಹ ಮಾಡುತ್ತ ‘ಅಪ್ಡೇಟ’ ಆಗುತ್ತಿರಬೇಕು. ಬರೀ ಪಠ್ಯಪುಸ್ತಕಗಳ ಓದು ಸಾಲದು. ಪೂರಕ ಸಾಹಿತ್ಯವನ್ನು ಓದಬೇಕು. ಸಾಂದರ್ಭಿಕ ಪಠ್ಯಗಳನ್ನು ಸಂಗ್ರಹಿಸಿಕೊಳ್ಳಬೇಕು. ವಿದ್ಯೆಯನ್ನು ಕೊಡುತ್ತ ಹೋದಂತೆ ಅದು ಕೊಡುವವನಲ್ಲಿ ಅಧಿಕವಾಗಿ ಬೆಳೆಯುತ್ತದೆ. ಜ್ಞಾನಿಯಾದವನಿಗೆ ಇಡೀ ಜಗತ್ತಿನ ತುಂಬ ಬೇಡಿಕೆ ಮತ್ತು ಮರ್ಯಾದೆ ಇರುತ್ತದೆ. ಶಿಕ್ಷಕನಲ್ಲಿ ಜ್ಞಾನವೆಂಬ ‘ಡಿಪಾಜಿಟ್’ ಸದಾಕಾಲ ಇರಬೇಕು. ಅದೇ ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಏನು ಕೊಡುವನು ? ನಾವು ಇಂದಿಗೂ “ಶಿಕ್ಷಕ ಕೇಂದ್ರಿತ” ಶಿಕ್ಷಣ ನೀಡುತ್ತಿದ್ದೇವೆ.
ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. “ನಹಿ ಜ್ಞಾನೇನ ಸದೃಶ್ಯಂ”. ವಿದ್ಯೆ ಕೊಡದ ತಾಯಿ, ತಂದೆ, ಗುರು ಎಲ್ಲರೂ ಶುದ್ಧವೈರಿಗಳು ಎಂದು ಸರ್ವಜ್ಞನೇ ಹೇಳಿಲ್ಲವೇ ?.
ಹಿಂದೆ ಗುರು ಇದ್ದ
ಮುಂದೆ ಗುರಿ ಇತ್ತು
ಸಾಗಿತ್ತು. ವೀರರ ದಂಡು. ಆದರೆ ಇಂದು ಹಿಂದೆ ಗುರು ಇಲ್ಲ. ಮುಂದೆ ಗುರಿ ಇಲ್ಲ. ಸಾಗಿದೆ ಹೇಡಿಗಳ ದಂಡು.
ಇಂದು ನಾವು ಮಾಸ್ ಎಜುಕೇಶನ್ ಕೊಡುತ್ತಿದ್ದೇವೆ ಸರಕಾರಿ ಶಾಲೆಗಳಲ್ಲಿ. ಕ್ಲಾಸ್ ಎಜುಕೇಶನ್ ಕೇವಲ ಕೆಲವೇ ಶಾಲೆಗಳಲ್ಲಿ ಮಾರಾಟವಾಗುತ್ತಿದೆ ಮಾರಾಟಕ್ಕೆ.
ಗುರು ಆದವನು ಪರಮಾತ್ಮನ ಪ್ರತಿನಿಧಿ. ಕಾರಣ ಗುರು ಶಿಷ್ಯರಲ್ಲಿ ಹಾಲು ಜೇನಿನ ಸಂಬಂಧವಿರಬೇಕು.
ಸ್ವಾಮಿ ವಿವೇಕಾನಂದರಿಗೆ ಶ್ರೀ ರಾಮಕೃಷ್ಣ ಪರಮಹಂಸರಿದ್ದಂತೆ, ಶಿಶುನಾಳ ಶರೀಫರಿಗೆ ಶ್ರೀ ಗೋವಿಂದಭಟ್ಟರಿದ್ದಂತೆ, ಶ್ರೀ ಗುರುನಾಥರೂಢರಿಗೆ ಶ್ರೀ ಸಿದ್ಧಾರೂಢರಿದ್ದಂತೆ,
ಶ್ರೀ ಷಡಕ್ಷರಿ ಶಿವಯೋಗಿಗಳಿಗೆ ಶ್ರೀ ಯಲ್ಲಾಲಿಂಗರಿದ್ದಂತೆ, ಶ್ರೀ ಸಿದ್ಧರಾಮ ಸ್ವಾಮಿಗಳಿಗೆ
ಶ್ರೀ ಶಿವಬಸವ ಸ್ವಾಮಿಗಳಿದ್ದಂತೆ ಗುರುಶಿಷ್ಯರಲ್ಲಿ ಸಂಬಂಧಗಳಿದ್ದರೆ ಮಾತ್ರ ನಮ್ಮ ಸಂಸ್ಕೃತಿಯ ಪ್ರತೀಕವಾದ ‘ಗುರುಪರಂಪರೆ’ ಉಳಿಯಲಿದೆ. ಇಲ್ಲವಾದರೆ ನಮ್ಮ ಶಿಕ್ಷಕ ದಿನಾಚರಣೆ ಕೇವಲ ಶುಷ್ಕ ಮತ್ತು ಯಾಂತ್ರಿಕವಾಗಿ ಬಿಡಲಿದೆ.