ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ರೂಪಕ ವಾಹನಗಳ ಆಯ್ಕೆ ಸಮಿತಿ ಸಭೆಯು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸೋಮವಾರ (ಅ.21) ಜರುಗಿತು.
ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ಅವರು ರೂಪಕ ವಿಷಯ ಒಳಗೊಂಡಂತೆ ರೂಪಕ ವಾಹನ ಪ್ರದರ್ಶಿಸಲು ಅನುಮತಿ ಕೋರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೆಳಗಾವಿ ಕಚೇರಿ ಇಲ್ಲಿಗೆ ಅಕ್ಟೋಬರ್ 25 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಪ್ರತಿ ವರ್ಷದಂತೆ ಸರ್ಕಾರದ ನಿರ್ದೇಶನದ ಅನ್ವಯ ನಾಡಿನ ಸಾಹಿತ್ಯ, ಇತಿಹಾಸ, ಕಲೆ, ಸಂಸ್ಕೃತಿ, ಅಭಿವೃದ್ಧಿ ಮತ್ತು ಸರ್ಕಾರದ ಜನಪರ ಯೋಜನೆಗಳನ್ನು ಬಿಂಬಿಸುವ ಚಿತ್ರಗಳನ್ನು ರೂಪಕ ವಾಹನಗಳು ಹೊಂದಿರಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಅಕ್ಟೋಬರ್ 27 ರಂದು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ರೂಪಕ ವಾಹನ ಪ್ರದರ್ಶನಕ್ಕೆ ಅರ್ಜಿ ಸಲ್ಲಿಸುವಾಗ ವಾಹನಗಳ ವಿಷಯ ಮತ್ತು ಸ್ಪಷ್ಟ ಚಿತ್ರಣವನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಅವಧಿ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದರು.
ಪ್ರತ್ಯೇಕವಾಗಿ ರೂಪಕ ವಾಹನಗಳಿಗೆ ಆಯಾ ಸಂಘಟನೆಯ ಮುಖಂಡರು ಮುಂದಾಳತ್ವವನ್ನು ವಹಿಸಿ ಮೆರವಣಿಗೆ ಸುಗಮವಾಗಿ ಸಾಗಲು ಸಹಕರಿಸುವಂತೆ ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಉತ್ತಮ ರೂಪಕ ವಾಹನಗಳಿಗೆ ಉಪ ಸಮಿತಿ ಶಿಫಾರಸು ಮೇರೆಗೆ ಖಾಸಗಿ ಹಾಗೂ ಸರಕಾರಿ ವಾಹನಗಳಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ಅವರು ಹೇಳಿದರು.
ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ದೀಪಕ ಗುಡುಗೇನಟ್ಟಿ, ಮೆಹಬೂಬ್ ಮಕಾಂದಾರ, ಅನಂತಕುಮಾರ ಬ್ಯಾಕೋಡ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.