ಬೆಳಗಾವಿ: ಇಲ್ಲಿಯ ಅಯೋಧ್ಯಾ ನಗರದಲ್ಲಿ ಬುಧವಾರ ರಾತ್ರಿ ಹೊತ್ತು ಮನೆಯ ಮುಂದೆ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿಯ ಮೇಲೆಯೇ ಕಲ್ಲು ತೂರಿದ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೋಜ್ ಕಾವಲೇಕರ ಎಂಬವರು ತಮ್ಮ ಮನೆಯ ಮುಂದೆ ಶ್ರೀಗಂಧ ಗಿಡ ನೆಟ್ಟು ಪೋಷಿಸಿದ್ದರು. ಸುಮಾರು 20 ವರ್ಷಗಳ ಹಿಂದೆ ಈ ಶ್ರೀಗಂಧ ಮರ ನೆಟ್ಟಿದ್ದರು.
ಈ ಬೆಲೆಬಾಳುವ ಶ್ರೀಗಂಧದ ಮರವನ್ನು ಗಮನಿಸಿದ ಕಳ್ಳರು ಯಂತ್ರದ ಸಹಾಯದಿಂದ ಕತ್ತರಿಸಿ ಹೊತ್ತೊಯ್ದ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶ್ರೀಗಂಧದ ಮರವನ್ನು ಕತ್ತರಿಸುವ ಶಬ್ದವನ್ನು ಗಮನಿಸಿದ ಮನೆಯ ಭದ್ರತಾ ಸಿಬ್ಬಂದಿ ತಡೆಯಲು ಮುಂದಾದರು. ಆಗ ಕಳ್ಳರು ಅವರಿಗೆ ಕಲ್ಲೆಸೆದು ಹೆದರಿಸಿ ಪರಾರಿಯಾಗಿದ್ದಾರೆ. ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.