ಬೆಂಗಳೂರು: 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಮೇ 21ರ ಮಧ್ಯಾಹ್ನ 3ಗಂಟೆಗೆ ಪ್ರಕಟಗೊಂಡಿದೆ.
ರಾಜ್ಯಾದ್ಯಂತ ಒಟ್ಟು 301 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 29 ರಿಂದ ಮೇ 16ರವರೆಗೆ 2ನೇ ಪರೀಕ್ಷೆ ನಡೆದಿತ್ತು. 7,875 ಮೌಲ್ಯಮಾಪಕರಿಂದ 28 ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದಿತ್ತು. ಪರೀಕ್ಷೆ 2ಕ್ಕೆ 1,49,824 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 1,48,942 ವಿದ್ಯಾರ್ಥಿಗಳು ಹಾಜರಾಗಿದ್ದು, 52,505 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 35.25ರಷ್ಟು ಶೇಕಡವಾರು ಫಲಿತಾಂಶ ಬಂದಿದೆ. 26,496 ಬಾಲಕರು, 26,009 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಲಾಖೆಯ ವೆಬ್ಸೈಟ್ karresults.nic.in ನಲ್ಲಿ ನೋಡಬಹುದಾಗಿದೆ.
ಪರೀಕ್ಷೆ 1 ಮತ್ತು ಪರೀಕ್ಷೆ 2ರಲ್ಲಿ ವಿಷಯವಾರು ಗಳಿಸಿದ ಅತಿಹೆಚ್ಚು ಅಂಕಗಳನ್ನು ಪರಿಗಣಿಸಿ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಪಿಯುಸಿ ಪರೀಕ್ಷೆಗಳನ್ನು ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ರೋಲ್ ನಂಬರ್ ಆಧರಿಸಿ ತಮ್ಮ ಫಲಿತಾಂಶಗಳನ್ನು ಈ ವೆಬ್ಸೈಟ್ನಲ್ಲಿ ವೀಕ್ಷಿಸಬಹುದು. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ಸ್ಟ್ರೀಮ್ ಅನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬಹುದು.