ನಿಪ್ಪಾಣಿ :
ಇಂದಿನ ಆಧುನಿಕ ಜಗತ್ತಿನಲ್ಲಿ ಕೆಲವೊಮ್ಮೆ ಆಲೋಚನೆಗಳು ತೀವ್ರಗೊಂಡು ಗಂಭೀರ ಸ್ವರೂಪಕ್ಕೆ ತಿರುಗಿ ಮಾನಸಿಕ ಖಿನ್ನತೆಗೆ ಕಾರಣವಾಗುತ್ತವೆ. ಅಂತಹ ಪರಿಸ್ಥಿತಿಯಿಂದ ಹೊರಬರಲು ಸರಿಯಾದ ಮನೋವಿಜ್ಞಾನಿಗಳ ಬಳಿ ಸೂಕ್ತ ಸಮಾಲೋಚನೆ ನಡೆಸಿ ಮತ್ತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯ, ಕಾರಣ ವಯೋಮಾನಕ್ಕೆ ತಕ್ಕ ಸಮಾಲೋಚನೆಯ ವಿಧಾನಗಳು ಭಿನ್ನವಾಗಿರುತ್ತವೆ. ಅವುಗಳ ವೈಜ್ಞಾನಿಕ ತಿಳುವಳಿಕೆ ಇಂದು ಎಂದಿಲ್ಲದ ಪ್ರಾಮುಖ್ಯತೆ ಪಡೆದಿದೆ. ಎಂದು ಧಾರವಾಡದ ವಿದ್ಯಾಪೋಷಕ ಸಂಸ್ಥೆಯ ನವ್ಯಶ್ರೀ ಅಭಿಪ್ರಾಯ ಪಟ್ಟರು.
ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ಸ್ಥಾನೀಕರಣ ಕೋಶ ಮತ್ತು ಧಾರವಾಡದ ವಿದ್ಯಾಪೋಷಕ ಸಂಸ್ಥೆ ಜಂಟಿಯಾಗಿ ಶನಿವಾರ ಹಮ್ಮಿಕೊಳ್ಳಲಾದ ಬೆಳವಣಿಗೆಯ ಹಂತಗಳು ಮತ್ತು ಮಾನಸಿಕ ಸಮಾಲೋಚನೆ ಎಂಬ ವಿಷಯದ ಕುರಿತು ಒಂದು ದಿನದ ಸಿಬ್ಬಂದಿ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಗಾರದ ಉದ್ಘಾಟನೆಯನ್ನು ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಪ್ರವೀಣ ಬಾಗೇವಾಡಿ ನೆರವೇರಿಸಿದರು. ಕಾರ್ಯಗಾರವು ಎರಡು ಹಂತಗಳಲ್ಲಿ ನಡೆದು ಸಂಪನ್ಮೂಲ ವ್ಯಕ್ತಿಗಳಾಗಿ ಧಾರವಾಡದ ಡಿಐಎಮ್ಎಚ್ಏನ್ಎಸ್ ಸಂಸ್ಥೆಯ ಮನೋವಿಜ್ಞಾನಿ ಶ್ರೀದೇವಿ ಬಿರಾದಾರ ಮತ್ತು ವಿದ್ಯಾಪೋಷಕ ಸಂಸ್ಥೆಯ ಮಾನಸಿಕ ಸಮಾಲೋಚನಗಾರರಾದ ನವ್ಯಶ್ರೀ ಅವರು ಆಗಮಿಸಿದ್ದರು.
ಮೊದಲ ಹಂತದಲ್ಲಿ ನವ್ಯಶ್ರೀ ಅವರು ಶೈಶವ ಮತ್ತು ತಾರುಣ್ಯದ ಅವಸ್ಥೆಯ ಸಮಾಲೋಚನ ವಿಧಾನಗಳಲ್ಲಿ ಅನುಸರಿಸಬೇಕಾದ ತತ್ವಗಳ ಕುರಿತು ವಿವರಿಸಿದರು. ದ್ವಿತೀಯ ಹಂತದಲ್ಲಿ ಶ್ರೀದೇವಿ ಬಿರಾದಾರ ಅವರು ಪ್ರೌಢ ಮತ್ತು ವಯಸ್ಕರ ಸಮಾಲೋಚನದ ವಿಧಾನಗಳ ಸಂಪೂರ್ಣ ಮಾಹಿತಿ ನೀಡಿದರು. ಪ್ರೇಕ್ಷಕರ ವರ್ಗದ ಸಿಬ್ಬಂದಿಗಳನ್ನೇ ಬಳಸಿ ಪ್ರಾಯೋಗಿಕ ಸಮಾಲೋಚನೆಯನ್ನು ಸಾಂಕೇತಿಕವಾಗಿ ಪ್ರದರ್ಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಎಂ.ಎ.ಹುರಳಿ ವಹಿಸಿದ್ದರು. ಉಪ ಪ್ರಾಚಾರ್ಯ ಡಾ. ಆರ್.ಜಿ.ಖರಾಬೆ, ಪ.ಪೂ. ಪ್ರಾಚಾರ್ಯೆ ಹೇಮಾ ಚಿಕ್ಕಮಠ ಹಾಗೂ ಪದವಿ ಮತ್ತು ಪದವಿ ಪೂರ್ವ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.
ಶಿವಲಿಂಗ ನಾಯಕ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಸ್ಥಾನೀಕರಣ ಕೋಶದ ಕಾರ್ಯಾಧ್ಯಕ್ಷ ಶಂಕರಮೂರ್ತಿ ಕೆ.ಎನ್. ಪ್ರಸ್ತಾವಿಕ ಮಾತುಗಳನ್ನಾಡಿದರು. ಶ್ರೀದೇವಿ ಮುಂಡೆ ಮತ್ತು ನಮಿತಾ ನಾಯಿಕ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಅತುಲಕುಮಾರ ಕಾಂಬಳೆ ವಂದಿಸಿದರು.