ಬೆಳಗಾವಿ : ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ )ಮಹಾವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದಿಂದ “ಇತ್ತೀಚಿನ ಬೆಳವಣಿಗೆಯಲ್ಲಿ ವಸ್ತು ವಿಜ್ಞಾನ ಮತ್ತು ತಂತ್ರಜ್ಞಾನಗಳು ” ಎಂಬ ವಿಷಯದ ಮೇಲೆ ಎರಡು ದಿನದ ರಾಷ್ಟ್ರೀಯ ಕಾರ್ಯಗಾರವನ್ನು ದಿನಾಂಕ 13/08/2025 ರಂದು ಬೆಳಿಗ್ಗೆ 9:30 ಕ್ಕೆ ಬೆಳಗಾವಿ ಜೆ ಎನ್ ಎಂ ಸಿ ಆವರಣದ ಡಾ. ಬಿ. ಎಸ್. ಕೊಡ್ಕಣಿ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.
ಉದ್ಘಾಟಕರಾಗಿ ಬೆಂಗಳೂರು ಸಿಎನ್ ಎಂ ಎಸ್ ಜೈನ್ ವಿಶ್ವವಿದ್ಯಾಲಯದ ಹಿರಿಯ ನಿರ್ದೇಶಕ ಪ್ರೊ ಎಸ್ .ಕೆ.ನಟರಾಜ್ ಮಾತನಾಡಿ, ಜಾಗತೀಕರಣ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯಬೇಕು ವಿಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಸಂಶೋಧಕರು ಹೊಸ ಹೊಸ ವಿಷಯಗಳಲ್ಲಿ ಆವಿಷ್ಕಾರ ಮಾಡಿ ಮುಂದಿನ ಯುವಕರಿಗೆ ಜ್ಞಾನವನ್ನ ನೀಡಬೇಕು. ಪ್ರಸ್ತುತ ದಿನಮಾನಗಳಲ್ಲಿ ವಿಜ್ಞಾನ ಕ್ಷೇತ್ರ ಬಹಳಷ್ಟು ಸಂಶೋಧನೆಗಳು ನಡೆದಿವೆ . ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿಕೊಂಡು ಬಹು ಶಿಸ್ತಿನ ಅಧ್ಯಯನವನ್ನು ಮಾಡಬೇಕು. ಮೂಲ ವಿಜ್ಞಾನವನ್ನು ಬೇರೆ ಬೇರೆ ಆಯಾಮಗಳಿಂದ ಮೂಲಾಗ್ರವಾಗಿ ಸಂಶೋಧನೆ ಮಾಡಬೇಕು. ಇತ್ತೀಚಿನ ಬೆಳವಣಿಗೆಯಲ್ಲಿ ನ್ಯಾನೋ ತಂತ್ರಜ್ಞಾನದಲ್ಲಿ ಬಹಳಷ್ಟು ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತಿದ್ದಾರೆ . ವಿವಿಧ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಇಂದು ಹೊಸ ಹೊಸ ಆವಿಷ್ಕಾರದೊಂದಿಗೆ ಸಾಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಬಹು ಕೌಶಲ್ಯಗಳನ್ನು ತರಬೇತಿ ನೀಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಜ್ಯೋತಿ ಎಸ್ ಕವಳೇಕರ ಮಾತನಾಡಿ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರಗಳು ಮೇಲಿಂದ ಮೇಲೆ ಜರುಗಬೇಕು. ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸಗೋಷ್ಠಿಗಳನ್ನು ಮತ್ತು ಮೌಲಿಕ ವಿಷಯದ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಸಿದರು. ಡಾ ಸತೀಶ ಎಂ ಪಿ ಸ್ವಾಗತಿಸಿದರು. ಡಾ. ಎಂ ಎಂ ತಾಂಬೋಳಿ ವಂದಿಸಿದರು. ಪ್ರೊ ಅಲ್ಪಜಾ ಬಾಗವಾನ್ ಹಾಗೂ ಪ್ರೊ ಸಂಪದಾ ನಾಯಿಕ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ 200ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.