ಬೆಳಗಾವಿ :
ಪ್ರಧಾನಿ ನರೇಂದ್ರ ಮೋದಿ ಅವರು ಅಗ್ಗದ ದರದಲ್ಲಿ ಸಿಲಿಂಡರ್ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದು ಇದರ ಲಾಭ ಪಡೆದುಕೊಳ್ಳುವಂತೆ ಕೆಲ ವಂಚಕರು ಇದೀಗ ಖಾನಾಪುರ ತಾಲೂಕಿನ ಅಬ್ನಾಳಿ ಗ್ರಾಮದಲ್ಲಿ ಜನರನ್ನು ವಂಚಿಸಿರುವ ಘಟನೆ ನಡೆದಿದೆ.
ಸೆಪ್ಟೆಂಬರ್ 11ರಂದು ಅಬ್ನಾಳಿ ಗ್ರಾಮಕ್ಕೆ ಜೀಪಿನಲ್ಲಿ ಆಗಮಿಸಿದ ಚಾಲಕ, ವಿಕಲಚೇತನ ವ್ಯಕ್ತಿ ಸೇರಿದಂತೆ ಮಹಿಳೆ ಜನರನ್ನು ವಂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಕಡಿಮೆ ದರದಲ್ಲಿ ಸಿಲಿಂಡರ್ ವಿತರಿಸುತ್ತಿದ್ದಾರೆ. ಒಂದು ಸಿಲಿಂಡರಿಗೆ 500, ಎರಡು ತೆಗೆದುಕೊಂಡರೆ 1000 ಎಂದು ಕೆಲ ಮುದ್ರಿತ ಕರಪತ್ರ ತೋರಿಸಿ ಜನರನ್ನು ನಂಬಿಸಿದ್ದಾರೆ. ಇದನ್ನು ನಂಬಿದ ಗ್ರಾಮದ ಜನತೆ ಸುಮಾರು 30 ರಿಂದ 40 ಸಾವಿರ ರೂಪಾಯಿಯನ್ನು ಈ ಗ್ಯಾಂಗಿಗೆ ನೀಡಿದ್ದಾರೆ. ಈ ಹಣವನ್ನು ಪಡೆದ ವ್ಯಕ್ತಿಗಳು ಇನ್ನು 15 ದಿನಗಳಲ್ಲಿ ನಿಮಗೆ ಗ್ಯಾಸ್ ಸಿಲಿಂಡರ್ ಬಂದು ತಲುಪಲಿದೆ ಎಂದು ಹೇಳಿ ಹೋಗಿದ್ದಾರೆ. ಆದರೆ ಹದಿನೈದು ದಿನ ಕಳೆದರೂ ಗ್ರಾಮದ ಜನತೆಗೆ ಗ್ಯಾಸ್ ಬಂದು ತಲುಪಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಕೊನೆಗೂ ಮಹಿಳೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಮಹಿಳೆ 15 ದಿನಗಳಲ್ಲಿ ಗ್ಯಾಸ್ ಬರುವುದಾಗಿ ನಂಬಿಸಿದ್ದಾಳೆ. ಆದರೂ ಜನ ಕಾದಿದ್ದಾರೆ. ಇಷ್ಟಾದರೂ ಗ್ಯಾಸ್ ಬಂದಿಲ್ಲ. ಕೊನೆಗೆ ಮತ್ತೊಮ್ಮೆ ಗ್ರಾಮದ ಜನ ಸಂಪರ್ಕಿಸಿದಾಗ ಮಹಿಳೆಯ ಫೋನ್ ಕರೆ ಸ್ವೀಕರಿಸಲಿಲ್ಲ. ಈ ಬಗ್ಗೆ ಗ್ರಾಮಸ್ಥರಿಗೆ ಆಗಿರುವ ಅನ್ಯಾಯವನ್ನು ಗಮನಿಸಿದ ಅಬ್ನಾಳಿ ಗ್ರಾಮದ ಅರ್ಜುನ ಗೌಡ ಮಹಿಳೆಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ನಾವು ಬೆಳಗಾವಿಯಲ್ಲಿ ಇದ್ದೇವೆ. ಎರಡು ದಿನಗಳ ನಂತರ ಸಿಲಿಂಡರ್ ತರುತ್ತೇವೆ ಎಂದು ಮತ್ತೆ ಮರು ಉತ್ತರ ನೀಡಿ, ನಮಗೆ ಆರೋಗ್ಯ ಸರಿ ಇಲ್ಲ ನಾಳೆ ವಿವರವಾಗಿ ಹೇಳುತ್ತೇನೆ ಎಂದು ಫೋನ್ ಕರೆ ಕಟ್ ಮಾಡಿದ್ದಾರೆ.
ಗ್ರಾಮಸ್ಥರು ಮೋಸ ಹೋಗಿರುವ ಬಗ್ಗೆ ಅರಿವಾಗಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಅದು ಮಹಾರಾಷ್ಟ್ರದ ಅಕೋಲದ ಮೊಬೈಲ್ ಸಂಖ್ಯೆ ಎನ್ನುವುದು ತಿಳಿದು ಬಂದಿದೆ. ಈ ಬಗ್ಗೆ ಖಾನಾಪುರ ಪೊಲೀಸರು ಇದೀಗ ಕಾರ್ಯಾಚರಣೆ ನಡೆಸುತ್ತಿದ್ದು ಬೆಳಗಾವಿ ಜಿಲ್ಲೆಯ ಜನತೆ ಇಂತಹ ಯಾವುದೇ ವದಂತಿ ನಂಬದಂತೆ ಆಡಳಿತ ಮನವಿ ಮಾಡಿದೆ.