ಸವದತ್ತಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿಯವರ ನಾಮಪತ್ರ ಇದೀಗ ತಿರಸ್ಕೃತವಾಗುವ ಭೀತಿ ಎದುರಾಗಿದೆ. ನಾಮಪತ್ರ ಸಲ್ಲಿಕೆ ವೇಳೆ 2018ರ ಅಫಿಡವಿಟ್ ನಮೂನೆ ಸಲ್ಲಿಕೆಯ ಆರೋಪ ಕೇಳಿ ಬಂದಿದೆ. ರತ್ನಾ ಮಾಮನಿ ಅವರ ದಾಖಲೆ ನಿಯಮಬದ್ಧವಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಾಪುಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಚುನಾವಣಾ ಅಧಿಕಾರಿ ಶನಿವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆ ನಿಗದಿಪಡಿಸಿದ್ದಾರೆ. ರತ್ನಾ ಮಾಮನಿಯವರಿಗೆ ವಿಚಾರಣೆ ನೋಟೀಸ್ ನೀಡಲಾಗಿದೆ. ಈ ಕುರಿತು ಸವದತ್ತಿ ಚುನಾವಣಾ ಅಧಿಕಾರಿ ಡಾ. ರಾಜೀವ ಕೂಲೇರ್ ಪ್ರತಿಕ್ರಿಯೆ ನೀಡಿದ್ದು ಪರಿಷ್ಕೃತ ಅಫಿಡವಿಟ್ ಅಪ್ಲೋಡ್ ಮಾಡಲು ಅವಕಾಶವಿದೆ. ನಾಮಪತ್ರ ಪರಿಶೀಲನೆ ಮುನ್ನ ಅಪ್ಲೋಡ್ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಅವರು ಆತಂಕ ಪಡುವ ಸ್ಥಿತಿ ಇಲ್ಲ. ನಾಮಪತ್ರ ರದ್ದಾಗುವ ಭಯ ಕಡಿಮೆ ಎನ್ನಲಾಗುತ್ತಿದೆ.
ಬೆಂಗಳೂರು :
ರಾಜ್ಯ ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾಗಿದ್ದ 4989 ನಾಮಪತ್ರಗಳ ಪೈಕಿ 3044 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದೆ. ಆದರೆ ಇನ್ನು ಐದು ಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಗೆ ಬಾಕಿ ಉಳಿದಿದೆ.
ಚುನಾವಣಾ ಆಯೋಗ ಶುಕ್ರವಾರ 3 ಗಂಟೆಯ ವರೆಗೆ ನಾಮಪತ್ರ ಪರಿಶೀಲನೆ ನಡೆಸಿತ್ತು. 4,989 ನಾಮಪತ್ರಗಳ ಪೈಕಿ 4,607 ಪುರುಷರು ಹಾಗೂ 381 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಒಟ್ಟು 224 ಕ್ಷೇತ್ರಗಳಲ್ಲಿ ಒಟ್ಟು 3044 ಅಭ್ಯರ್ಥಿಗಳ 4,989 ನಾಮಪತ್ರಗಳು ಕ್ರಮಬದ್ಧವಾಗಿದೆ. 1,945 ಮಂದಿ ನಾಮಪತ್ರಗಳು ಅಸಿಂಧುಗೊಂಡಿವೆ.
ಬೆಳಗಾವಿ ಜಿಲ್ಲೆಯ ಸವದತ್ತಿ, ಬೀದರ ಜಿಲ್ಲೆಯ ಔರಾದ್, ಹಾವೇರಿ(ಎಸ್ಸಿ), ರಾಯಚೂರು ಮತ್ತು ಬೆಂಗಳೂರಿನ ಶಿವಾಜಿನಗರ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಬಾಕಿ ಇದೆ.
ನಾಮಪತ್ರ ವಿವರ ಹೀಗಿದೆ
ಒಟ್ಟು 224 ಕ್ಷೇತ್ರಗಳಲ್ಲಿ ಕ್ರಮಬದ್ಧ ನಾಮಪತ್ರಗಳ ವಿವರ…
ಬಿಜೆಪಿ- 219
ಕಾಂಗ್ರೆಸ್ -218
ಜೆಡಿಎಸ್ -207
ಎಎಪಿ- 207
ಬಿಎಸ್ಪಿ – 135
ಸಿಪಿಎಂ -4
ಪಕ್ಷೇತರರು -1334
ನೋಂದಾಯಿತ, ಮಾನ್ಯತೆ ರಹಿತ ಪಕ್ಷಗಳು- 720
ಕಣದಲ್ಲಿ 3044 ಅಭ್ಯರ್ಥಿಗಳು
ನಾಮಪತ್ರವನ್ನು ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಮೇ 10 ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.