ಬೆಳಗಾವಿ: ಸಚಿವರಾಗಿ ಮೊದಲಬಾರಿಗೆ ಬೆಳಗಾವಿಗೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಭಾನುವಾರ ಸಂಜೆ ಬೆಳಗಾವಿಯಲ್ಲಿ ಅಭಿಮಾನಿಗಳು ಭರ್ಜರಿ ಮೆರವಣಿಗೆಯಲ್ಲಿ ಕರೆದೊಯ್ದರು. ತನ್ಮೂಲಕ ನಗರದ ವಿವಿಧ ಭಾಗಗಳಲ್ಲಿರುವ ಮಹಾನ್ ಐತಿಹಾಸಿಕ ವ್ಯಕ್ತಿಗಳ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.
ಕಾಂಗ್ರೆಸ್ ಭವನದಿಂದ ತೆರದ ವಾಹನದಲ್ಲಿ ನಗರಾದ್ಯಂತ ನೂತನ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಶಾಸಕರಾದ ರಾಜು ಸೇಠ್, ಬಾಬಾ ಸಾಹೇಬ್ ಪಾಟೀಲ, ವಿಶ್ವಾಸ ವೈದ್ಯ, ಮಹೇಂದ್ರ ತಮ್ಮಣ್ಣವರ್, ಮಾಜಿ ಶಾಸಕ ಶಾಮ್ ಘಾಟಗೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ನೂತನ ಸಚಿವರಿಗೆ ಸಾಥ್ ನೀಡಿದರು.
ಮುಗಿಲು ಮುಟ್ಟಿದ ಸಂಭ್ರಮ: ಕರ್ನಾಟಕ ಸರಕಾರದಲ್ಲಿ ನೂತನವಾಗಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು, ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲದೇ ನಗರದ ವಿವಿಧೆಡೆ ನಡೆದ ಮೆರವಣಿಗೆಯಲ್ಲಿ ನೂತನ ಸಚಿವರನ್ನು ನೋಡಿದ ಜನರು ಕೈ ಬೀಸಿ ಶುಭ ಹಾರೈಸಿದರು.
ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು: ನಗರದ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಹೂ ಮಾಲೆ ಅರ್ಪಿಸುವ ಸಮಯದಲ್ಲಿ ಅವರ ಅಪಾರ ಅಭಿಮಾನಿಗಳು ಪಟಾಕಿ ಸಿಡಿಸಿ ಜಯಘೋಷ ಹಾಕುವುದರ ಮೂಲಕ ಸಂಭ್ರಮಿಸಿದರು. ಜಿಲ್ಲೆಯ ನಾನಾ ಕಡೆಗಳಿಂದ ಕಾಂಗ್ರೆಸ್ ಪಕ್ಷ ದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಹೂ ಮಾಲೆಗಳನ್ನು ಸಮರ್ಪಿಸಿ ಶುಭ ಕೋರಿದರು.
ಗಮನ ಸೆಳೆದ ಸ್ವಾಗತ ಕೋರುವ ಕಟೌಟ್ ಗಳು: ನಗರದ ರಾಣಿ ಚನ್ನಮ್ಮ ವೃತ್ತ, ಗೋವಾವ್ಹೇಸ್ ನ ವಿಶ್ವಗುರು ಬಸವೇಶ್ವರ ವೃತ್ತ ಬಳಿ ಹಾಗೂ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ದೊಡ್ಡ ಗಾತ್ರದ ಕಟೌಟ್ ಗಳು ರಾರಾಜಿಸಿದವು. ಅಲ್ಲದೇ ಸಂಕಮ್ ಹೋಟೆಲ್ ರಸ್ತೆ, ಅಶೋಕ ವೃತ್ತ ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ರಸ್ತೆ, ಅಂಬೇಡ್ಕರ್ ರಸ್ತೆ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಶುಭಾಶಯ ಮತ್ತು ಸ್ವಾಗತ ಕೋರುವ ಕಟೌಟ್ ಗಳು ಎಲ್ಲರ ಗಮನ ಸೆಳೆದವು.
ಬೈಕ್ ರ್ಯಾಲಿ: ನಗರಕ್ಕೆ ಆಗಮಿಸಿದ ನೂತನ ಸಚಿವ ಸತೀಶ ಜಾರಕಿಹೊಳಿ ಸ್ವಾಗತಿಸಲು ಅವರ ಅಭಿಮಾನಿಗಳು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ತೆರೆದ ವಾಹನದಲ್ಲಿ ನೂತನ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಮೆರವಣಿಗೆ ನಡೆಸಿದ್ದು, ಕಾಂಗ್ರೆಸ್ ಭವನದಿಂದ ರಾಣಿ ಚನ್ನಮ್ಮ ವೃತ್ತ , ಡಾ. ಬಿ.ಆರ್.ಅಂಬೇಡ್ಕರ್, ಧರ್ಮವೀರ ಸಂಭಾಜಿ ಮಹಾರಾಜ, ವಿಶ್ವಗುರು ಬಸವೇಶ್ವರ, ಸಂಗೊಳ್ಳಿ ರಾಯಣ್ಣ ಸೇರಿ ಮುಂತಾದ ಮಹಾಪುರುಷರ ಪುತ್ಥಳಿಗಳಿಗೆ ನೂತನ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರು ಗೌರವ ಅರ್ಪಿಸಿದರು.