ಬೆಳಗಾವಿ :
ಸಂಗೊಳ್ಳಿ ರಾಯಣ್ಣನ ನಾಮಧೇಯ ಹೊಂದಿರುವ ಇದರ ಆವರಣದಲ್ಲಿ ಕ್ರಾಂತಿಕಾರಿ, ಪರಾಕ್ರಮಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವುದರ ಮೂಲಕ ವಿದ್ಯಾರ್ಥಿಗಳ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಸಂಗೊಳ್ಳಿ ರಾಯಣ್ಣನ ಸಾಹಸ, ದೇಶಪ್ರೇಮ, ಅವನ ತ್ಯಾಗ, ಹೋರಾಟ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ಸಂಗೊಳ್ಳಿ ರಾಯಣ್ಣನಂತಹ ಸ್ವಾತಂತ್ರ್ಯ ಸೇನಾನಿಯ ಮೂರ್ತಿ ಆವರಣದಲ್ಲಿದ್ದಾಗ ವಿದ್ಯಾರ್ಥಿಗಳು ಅವರ ಆದರ್ಶ ದೇಶಾಭಿಮಾನ ಮೈಗೂಡಿಸಿಕೊಳ್ಳುತ್ತಾರೆ. ಇತಿಹಾಸ ತಿರುಚುವ ಕೆಲಸ ನಿಲ್ಲಬೇಕು. ಬುದ್ಧ, ಬಸವಣ್ಣ, ರಾಯಣ್ಣ, ಅಂಬೇಡ್ಕರ್ ಮತ್ತು ಈ ನಾಡನ್ನು ಕಟ್ಟಿದ ಮಹನೀಯರು. ಇವರು ನಮಗೆ ಆರಾಧ್ಯರು. ಇವರ ಚರಿತ್ರೆ ಇದ್ದಂತೆ ಇರಬೇಕು. ಇತ್ತೀಚಿನ ಒಂದು ಸಂಗೊಳ್ಳಿ ರಾಯಣ್ಣನ ನಾಟಕದಲ್ಲಿ ಟಿಪ್ಪು ಸುಲ್ತಾನನ ಪಾತ್ರವಿದೆ. ಚರಿತ್ರೆಯಲ್ಲಿ ಇದು ಇಲ್ಲ ಎಂದರು.
ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಅವರು ವಿಶ್ವವಿದ್ಯಾಲಯಕ್ಕೆ ಬಂದಾಗ ಎದುರಾದ ಸವಾಲುಗಳನ್ನು ಮೆಟ್ಟಿ ನಿಂತರು. ವಿದ್ಯಾರ್ಥಿಗಳ ಕನಸನ್ನು ಈಡೇರಿಸಲು ಬದ್ಧರಾದರು ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಮಾತನಾಡಿ, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ ಭಾಗವಾಗಿದ್ದಾರೆ. ನಾವಿಂದು ನೆಮ್ಮದಿಯಿಂದ ಬಾಳುತ್ತಿದ್ದೇವೆ ಎಂದರೆ ಅದು ನಮ್ಮ ಪೂರ್ವಜರ ಕೊಡುಗೆ. ನಮ್ಮ ಶಿಕ್ಷಣ ಸಂಸ್ಥೆಗಳು ಇಂದು ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಹಿಂದಿನ ಸರಕಾರಗಳು ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಅನುದಿನವೂ ಸಮರ್ಪಕವಾಗಿ ನೀಡಲಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಜಾಗದಲ್ಲಿ ರಾಜ್ಯ ಶಿಕ್ಷಣ ನೀತಿ ತಂದು ವಿದ್ಯಾರ್ಥಿಗಳ ಹಿತದೃಷ್ಟಿಗನುಗುಣವಾಗಿ ಯಾವ ರೀತಿ ಬದಲಾಯಿಸಬಹುದೆಂಬುದನ್ನು ಚಿಂತನೆ ಮಾಡುತ್ತಿದ್ದೇವೆ. ಇಂದಿನ ಔದ್ಯೋಗಿಕದ ಬೇಡಿಕೆಗೆ ತಕ್ಕಂತೆ ನಮ್ಮ ಪಠ್ಯಕ್ರಮಗಳು ಬದಲಾಗಬೇಕಾಗುತ್ತದೆ. ಇದನ್ನು ಹಂತ, ಹಂತವಾಗಿ ಬದಲಾಯಿಸುತ್ತೇವೆ. ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ನಾವು ಹೆಜ್ಜೆ ಹಾಕಿದರೆ ನಮ್ಮ ಬದುಕನ್ನು ನಾವು ಸಲೀಸಾಗಿ ಕಟ್ಟಿಕೊಳ್ಳಬಹುದು. ಇತ್ತೀಚಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ವಿಷಯ ನ್ಯಾಯಾಲಯದಲ್ಲಿ ಇದೆ. ಅದನ್ನು ಶೀಘ್ರವಾಗಿ ಬಗೆಹರಿಸುತ್ತೇವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಮಾತನಾಡಿ, ಬೆಳಗಾವಿ ಅನೇಕ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಇದೊಂದು ವೀರಭೂಮಿ. ಸಂಗೊಳ್ಳಿ ರಾಯಣ್ಣ, ಚನ್ನಮ್ಮ ನಂತಹ ಎಷ್ಟೋ ಸೇನಾನಿಗಳು ಈ ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅವರ ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಿಡದೇ ಅದನ್ನು ರಾಜ್ಯ ಶಿಕ್ಷಣ ನೀತಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಿ. ಸುಧಾರಣೆಗೋಸ್ಕರ ಬದಲಾವಣೆಯಾದರೆ ಉತ್ತಮವಾದುದು ಎಂದರು. ಸಂಗೊಳ್ಳಿ ರಾಯಣ್ಣನ ಪುತ್ಥಳಿ ಮುಂದೆ ಇದ್ದಾಗ ಅವರ ಚರಿತ್ರೆ ನಮ್ಮ ಕಣ್ಣ ಮುಂದೆ ಬರುತ್ತದೆ ಎಂದರು.
ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರಾಯೋಜಿಸಿದ ಮಾಜಿ ಸಚಿವ ಎಚ್. ಎಂ. ರೇವಣ್ಣ ಅವರು ಗೆರಿಲ್ಲಾ ಯುದ್ಧದ ಮೂಲಕ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ. ಸಂಗೊಳ್ಳಿ ರಾಯಣ್ಣನ ಜೊತೆಗೆ ಏಳು ಜನರನ್ನು ಗಲ್ಲಿಗೇರಿಸಿದ್ದಾರೆ. ಅವರೆಲ್ಲರನ್ನು ನಾವು ಸ್ಮರಿಸಬೇಕಿದೆ ಎಂದರು.
ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿ ಡಾ. ಎಂ. ಜಯಪ್ಪ ಮಾತನಾಡಿ, ಕಾಲೇಜು ಅಭಿವೃದ್ಧಿ ಹೊಂದಿದ ಬಗೆಯನ್ನು ನೆನಪಿಸಿಕೊಂಡರು. ನಾನು ಪ್ರಾಚಾರ್ಯನಾಗಿದ್ದಾಗ ಕೇವಲ ಏಳು ಕೋಣೆಗಳಿದ್ದವು. ಖಾಸಗಿ ಕಟ್ಟಡಗಳಲ್ಲಿ ತರಗತಿ ನಡೆಯುತ್ತಿದ್ದವು. ಇಂದು ಸುಮಾರು ಐವತ್ತು ತರಗತಿ ಕೊಠಡಿಗಳಿವೆ. ಇಂದು ಕಾಲೇಜು ಭೌತಿಕ ಮತ್ತು ಬೌದ್ಧಿಕವಾಗಿ ಬೆಳೆದಿದೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ಗ್ರಾಮೀಣ ಭಾಗದವರು. ಅವರಿಗೆ ತಕ್ಕಂತಹ ಉತ್ತಮವಾದ ಕಲಿಕಾ ವಾತಾವರಣವನ್ನು ಮಹಾವಿದ್ಯಾಲಯ ಈಗ ಹೊಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ಜಾತಿ ಮತ್ತು ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳು ಇದರ ಕುರಿತು ಚಿಂತನೆ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಉತ್ತರ ಶಾಸಕ ಆಸೀಫ್ (ರಾಜು) ಸೇಠ್ ಮಾತನಾಡಿ, ಅಂದು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಶಸ್ತ್ರದ ಮೂಲಕ ಈ ದೇಶವನ್ನು ರಕ್ಷಿಸಲು ಹೋರಾಡಿದರು. ಇಂದು ವಿಜ್ಞಾನ ತಂತ್ರಜ್ಞಾನದ ಮೂಲಕ ದೇಶವನ್ನು ಕಟ್ಟುವಲ್ಲಿ ಹೋರಾಡಬೇಕು. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ತಕ್ಕಂತೆ ನಾವು ಸಿದ್ಧಗೊಳಿಸಬೇಕಿದೆ. ಅದು ಬೆಳಗಾವಿಯಿಂದ ಪ್ರಾರಂಭ ಮಾಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರ ಬದಲಾದರೆ ಎಲ್ಲಾ ಕ್ಷೇತ್ರಗಳು ಬದಲಾಗುತ್ತವೆ ಎಂದರು. ಮಹಾವಿದ್ಯಾಲಯಕ್ಕೆ ಹತ್ತಿಕೊಂಡಿರುವ ಸಮುದಾಯ ಭವನವನ್ನು ಮಹಾವಿದ್ಯಾಲಯಕ್ಕೆ ಹಸ್ತಾಂತರಿಸುವ ಕುರಿತು ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಅವರ ಕುರಿತು ರಚಿಸಿರುವ ಅಭಿನಂದನಾ ಗ್ರಂಥ ಕಾರ್ಯತತ್ಪರ ಬಿಡುಗಡೆ ಮಾಡಿದರು. ಡಾ. ಸರಜೂ ಕಾಟ್ಕರ್ ಗ್ರಂಥದ ಕುರಿತು ಮಾತನಾಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವೆ ರಾಜಶ್ರೀ ಜೈನಾಪುರ, ಮೌಲ್ಯಮಾಪನ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ, ಹಣಕಾಸು ಅಧಿಕಾರಿ ಪ್ರೊ ಎಸ್. ಬಿ. ಆಕಾಶ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಉಪಸ್ಥಿತರಿದ್ದರು.ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ವಂದಿಸಿದರು. ಡಾ. ಗಜಾನನ ನಾಯ್ಕ ನಿರೂಪಿಸಿದರು. ವಿದ್ಯಾರ್ಥಿ ಲಕ್ಷ್ಮಣ ನಾಯ್ಕ ಪ್ರಾರ್ಥಿಸಿದರು.
ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯದ ಅಧಿಕಾರಿಗಳು, ಬೋಧಕ-ಬೋಧಕೇತರ ವರ್ಗ , ವಿದ್ಯಾರ್ಥಿಗಳು ಹಾಗೂ ನಾಗರಿಕರು, ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಉಪಸ್ಥಿತರಿದ್ದರು.