*ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸಿಗೆ ಗತ ವೈಭವ ತಂದುಕೊಟ್ಟ ಸಾಹುಕಾರ್
*ಪ್ರೀತಿಯ ಶಿಷ್ಯನಿಗೆ ದೊಡ್ಡ ಉಡುಗೊರೆ ನೀಡಿದ ಗುರು
*ಈ ಸಲ ಬಹುದೊಡ್ಡ ಅಂತರದ ಗೆಲುವು ಕಂಡ ಜನನಾಯಕ
*ಯಮಕನಮರಡಿ ಕ್ಷೇತ್ರದಲ್ಲೀಗ ಅಭಿವೃದ್ಧಿಯ ನಾಗಾಲೋಟ
ಹುಟ್ಟುಹಬ್ಬ ವಿಶೇಷ ಲೇಖನ
ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಮನೆಮಾತು. ಅವರ ಅಭಿವೃದ್ಧಿ ಕಾರ್ಯಗಳು ಜನಜನಿತ. ಅತ್ಯಂತ ಸರಳ ಸಜ್ಜನ ರಾಜಕಾರಣಿಯಾಗಿ ಸತೀಶ ಜಾರಕಿಹೊಳಿ ಅವರು ದಿನೇ ದಿನೇ ರಾಜ್ಯ ರಾಜಕಾರಣದಲ್ಲಿ ಮೇಲಕ್ಕೆ ಏರುತ್ತಿರುವುದು ವಿಶೇಷವಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ತಾವೊಬ್ಬ ಮಾಸ್ಟರ್ ಮೈಂಡ್ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಕಳೆದ ಬಾರಿ ಅತ್ಯಂತ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಅದನ್ನೇ ಸವಾಲಾಗಿರಿಸಿಕೊಂಡ ಅವರು ಈ ಬಾರಿ 57211 ಮತಗಳ ಬಹುದೊಡ್ಡ ಅಂತರದಿಂದ ಗೆಲುವಿನ ಗೆರೆ ದಾಟುವ ಮೂಲಕ ಎದುರಾಳಿಗಳ ಎದೆ ನಡುಗಿಸಲು ಕಾರಣರಾಗಿದ್ದಾರೆ. ಅವರು ಈ ಬಾರಿ 10290 ಮತಗಳ ಮತ ಗಳಿಸಿದ್ದಾರೆ.
ಅವರ ಎದುರಾಳಿಗಳು ಈ ಬಾರಿ ಇನ್ನಿಲ್ಲದ ಪ್ರಚಾರ ನಡೆಸಿ ಸಾಹುಕಾರರನ್ನು ಕೆಡವಲು ಯತ್ನಸಿದ್ದರು. ಆದರೆ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅವರು ದೊಡ್ಡ ಅಂತರದಲ್ಲಿ ಗೆಲುವು ಕಂಡರು.
ಸತೀಶ ಜಾರಕಿಹೊಳಿ ಅವರೊಂದಿಗೆ ಅವರ ಮಕ್ಕಳಾದ ಪ್ರಿಯಾಂಕಾ ಹಾಗೂ ರಾಹುಲ್ ಇಡೀ ಕ್ಷೇತ್ರಾದ್ಯಂತ ಚುನಾವಣೆಗೆ ಸಾಕಷ್ಟು ಮೊದಲೇ ಸಂಚರಿಸಿ ಕ್ಷೇತ್ರದಲ್ಲಿ ಹವಾ ಸೃಷ್ಟಿಸಿದರು. ಇದು ಸತೀಶ ಜಾರಕಿಹೊಳಿ ಅವರ ಪಾಲಿಗೆ ನೆರವಾಯಿತು. ಜೊತೆಗೆ ಇವರಿಬ್ಬರು ಮಕ್ಕಳು ಸತೀಶ ಜಾರಕಿಹೊಳಿ ಅವರ ಕನಸಿನ ಯೋಜನೆಗಳನ್ನು ಮನೆ ಮನೆಗೆ ಮನವರಿಕೆ ಮಾಡಿ ಹೆಚ್ಚಿನ ಮತಗಳನ್ನು ತರುವಲ್ಲಿ ಯಶಸ್ವಿಯಾದರು. ಯಮಕನಮರಡಿ ಕ್ಷೇತ್ರ 2008ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿತು. ಕ್ಷೇತ್ರ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ಇದೊಂದು ಹಿಂದುಳಿದ ಕ್ಷೇತ್ರ ಎಂದೇ ಗುರುತಿಸಲ್ಪಟ್ಟಿತು. ಆದರೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಅವರು ಶ್ರಮಪಟ್ಟು ಇದೀಗ ಯಮಕನಮರಡಿಯಲ್ಲಿ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. ಹಿಂದುಳಿದ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದ ಯಮಕನಮರಡಿ ಇದೀಗ ಅಭಿವೃದ್ಧಿಯ ನಾಗಾಲೋಟ ಕಂಡು ಬಂದಿದೆ.
ಬಹುದೊಡ್ಡ ಖಾತೆ ನೀಡಿದ ಗುರು :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಚ್ಚುಮೆಚ್ಚಿನ ಶಿಷ್ಯರಾಗಿರುವ ಸತೀಶ ಜಾರಕಿಹೊಳಿ ಅವರಿಗೆ ಈ ಬಾರಿ ಬಹುದೊಡ್ಡ ಹುದ್ದೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಲೋಕೋಪಯೋಗಿ ಖಾತೆಯಂತಹ ಮಹತ್ವದ ಖಾತೆಯನ್ನೇ ಸತೀಶ ಜಾರಕಿಹೊಳಿ ಅವರಿಗೆ ನೀಡಿ ಶಿಷ್ಯನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಸತೀಶ ಜಾರಕಿಹೊಳಿ ಅವರು ಹೆಚ್ಚಿನ ಮುತುವರ್ಜಿ ತೋರಿ ಕೆಲಸ ಮಾಡುವುದರಲ್ಲಿ ಯಾವ ಸಂದೇಹವಿಲ್ಲ. ಮೂರು ದಶಕಗಳ ತಮ್ಮ ರಾಜಕಾರಣದಲ್ಲಿ ಹಲವು
ಮಹತ್ವದ ಖಾತೆಗಳನ್ನು ಹೊಂದಿ ಸಮರ್ಥ ಸಚಿವರೆನಿಸಿಕೊಂಡಿದ್ದ ಸತೀಶ ಅವರು ಈ ಖಾತೆಗೂ ಶೋಭೆ ತರುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಮೂಲಕ ತಮ್ಮ ಗುರುಗಳಾಗಿರುವ ಮುಖ್ಯಮಂತ್ರಿ ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದರಲ್ಲಿ ಅನುಮಾನವಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಗತವೈಭವ
ಮರುಕಳಿಸಿದ ನಾಯಕ :
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಲಿಗೆ ಸತೀಶ ಜಾರಕಿಹೊಳಿ ಬಹುದೊಡ್ಡ ನಾಯಕರಾಗಿ ಹೊರಹೊಮ್ಮಿರುವುದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸಾಬೀತಾಗಿದೆ. ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕ ಸ್ಥಾನ ಪಡೆಯುವಂತಾಗಿದೆ. ಇದರ ಹಿಂದಿನ ರೂವಾರಿಯೇ ಸತೀಶ ಜಾರಕಿಹೊಳಿಯವರಾಗಿದ್ದಾರೆ. ಅವರ ಅಮೋಘ ಕಾರ್ಯತಂತ್ರದ ಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ 11 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ ಏಳು ಸ್ಥಾನಗಳಿಗೆ ಮಾತ್ರ ತೃಪ್ತಿ ಕಂಡಿದೆ. ಸತೀಶ ಜಾರಕಿಹೊಳಿ ಅವರ ಪರಿಶ್ರಮದಿಂದ ಬೆಳಗಾವಿ ಉತ್ತರ, ಗ್ರಾಮೀಣ, ಸವದತ್ತಿ, ಚಿಕ್ಕೋಡಿ, ಅಥಣಿ, ಕುಡಚಿ, ಕಿತ್ತೂರು, ಬೈಲಹೊಂಗಲ,ರಾಮದುರ್ಗ,ಕಾಗವಾಡ, ಅಥಣಿ ಮುಂತಾದ ಕ್ಷೇತ್ರಗಳು ಈ ಬಾರಿ ಕಾಂಗ್ರೆಸ್ ಬಗಲಿಗೆ ಮತ್ತೆ ಸೇರ್ಪಡೆಗೊಂಡಿವೆ. ಈ ಮೂಲಕ ಸತೀಶ ಜಾರಕಿಹೊಳಿ ಅವರು ತಮ್ಮ ಮಾಸ್ಟರ್ ಮೈಂಡ್ ರಾಜಕಾರಣದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗತ ವೈಭವವನ್ನು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದಾರೆ.