ಬೆಳಗಾವಿ : ಹನ್ನೆರಡನೆಯ ಶತಮಾನದ ಶರಣರ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿವೆ. ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಸಮಾಜವು ದಾರಿತಪ್ಪುತ್ತಿರುವ ಸಮಯದಲ್ಲಿ ಶರಣರ ವಿಚಾರಗಳನ್ನು ಅವಲೋಕಿಸುವುದು ಸಮಂಜಸವೆನಿಸಿದೆ ಎಂದು ಆರ್ ಎಲ್ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ.ಶಶಿಕಾಂತ ತಾರದಾಳೆ ಹೇಳಿದರು.

ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ವಚನಗಳಲ್ಲಿ ನೀತಿ ಸಂಹಿತೆ’ ವಿಷಯದ ಕುರಿತು ಮಾತನಾಡಿದರು. ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ ವಚನ ಎಲ್ಲ ಕಾಲಕ್ಕೂ ಜೀವಂತ ಮೌಲ್ಯವನ್ನು ಪ್ರತಿಪಾದಿಸುತ್ತದೆ. ಶರಣರು ನುಡಿದಂತೆ ನಡೆದವರು. ನಮ್ಮ ಇಂದಿನ ಒತ್ತಡದ ಬದುಕಿಗೆ ಅವರ ವಿಚಾರಗಳು ದಿವ್ಯೌಷಧಿಗಳಾಗಿವೆ. ಇಂದು ಯುವ ಜನಾಂಗ ದಾರಿ ತಪ್ಪುತ್ತಿದೆ. ತಂದೆ ತಾಯಿಯರ ಮೇಲಿನ ನಿಯಂತ್ರಣವನ್ನು ಅವರು ಕಳೆದುಕೊಳ್ಳುತ್ತಿದ್ದಾರೆ. ಯೌವನಾವಸ್ಥೆಯಲ್ಲಿ ವ್ಯಸನಗಳಿಗೆ ಈಡಾಗುತ್ತಿದ್ದಾರೆ. ಯುವ ಜನಾಂಗ ಕೈತಪ್ಪಿದರೆ ಸಮಾಜ ಹಾಗೂ ಧರ್ಮವನ್ನು ಉಳಿಸುವುದು ದುರ್ಲಭ. ಅವರಿಗೆ ವಚನ ಸಂಸ್ಕಾರವನ್ನು ನೀಡುವುದು ಸರ್ವೋತ್ತಮ. ಶಾಲೆ-ಕಾಲೇಜುಗಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಗುರುತರ ಕಾರ್ಯಗಳು ಜರುಗಬೇಕು. ಆತ್ಮವಿಶ್ವಾಸವನ್ನು ಮೂಡಿಸುವ, ಮನೋಕ್ಲೇಶಗಳನ್ನು ತೊಡೆದುಹಾಕುವ ಶಕ್ತಿ ಶರಣರ ವಚನಗಳಲ್ಲಿ ಅಡಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡುತ್ತ, ಸಮಾಜವನ್ನು ಶುದ್ಧೀಕರಿಸುವ ಸಂಜೀವಿನಿ ಶರಣರ ಮಾತುಗಳಲ್ಲಿ ಅಡಗಿದೆ. ವಚನ ಸಂಹಿತೆ ಎಂಬುದು ಬದುಕಿನ ಆದರ್ಶ ಜೀವನಕ್ಕೆ ಸೋಪಾನವಾಗಿದೆ. ವಚನಗಳನ್ನು ಅರಿತು ನಡೆದರೆ ಜೀವನ ಪಾವನ. ಜಗತ್ತಿನ ಬಹುಸಂಖ್ಯೆಯ ದೇಶಗಳು ವಚನ ಸಾಹಿತ್ಯವನ್ನು ಅರಿತು ವಿಸ್ಮಯಗೊಳ್ಳುತ್ತಿವೆ, ಅನುಕರಣೆಗೆ ಹಾತೊರೆಯುತ್ತಿವೆ. ನಾವು ಹತ್ತಿರವಿದ್ದು ದೂರವಾಗಿದ್ದೇವೆ. ಮಹಾಸಭೆಯು ಪ್ರತಿ ಮಾಸವು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಸಮಾಜಮುಖಿಯಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಆಶೀರ್ವಚನ ನೀಡಿದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು, ನಡೆನುಡಿಯ ಸಿದ್ಧಾಂತಕ್ಕೆ ಹೆಚ್ಚು ಒತ್ತು ನೀಡಿದ್ದ ಶರಣರು ಕಾಯಕ ಸಂಸ್ಕೃತಿಯನ್ನು ಎತ್ತಿಹಿಡಿದರು. ಶರಣರು ಆತ್ಮನಿವೇದನೆಗೆ ಕರೆ ನೀಡಿದವರು. ಲಿಂಗಾಂಗ ಸಾಮರಸ್ಯದ ಮೂಲಕ ಜೀವನ ದರ್ಶನವನ್ನು ಮಾಡಿಕೊಟ್ಟರು. ಈಗ ಶ್ರಾವಣ ಮಾಸ ಪ್ರಾರಂಭವಾಗಿದೆ ಲಿಂಗಪೂಜೆಯನ್ನು ನಿತ್ಯಮಾಡಿಕೊಳ್ಳಿ. ಮಾಸಾನು ಪರಿಯಂತ ಶರಣ ಸತ್ಸಂಗವನ್ನು ಆಲಿಸಿ ಜೀವನವನ್ನು ಅದರಂತೆ ರೂಪಿಸಿಕೊಳ್ಳಿ ಎಂದು ನುಡಿದರು.
ಶೋಭಾ ಬನಶಂಕರಿ ವಚನ ಪ್ರಾರ್ಥನೆ ಸಲ್ಲಿಸಿದರು. ಶೈಲಜಾ ಸಂಸುದ್ದಿ ಸ್ವಾಗತಿಸಿದರು. ಮಂಗಲಾ ಕಾಕತಿಕರ ವಚನ ವಿಶ್ಲೇಷಣೆ ಮಾಡಿದರು. ಅನಿತಾ ಮಾಲಗತ್ತಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾ ಸವದಿ ವಂದಿಸಿದರು. ದಾನಮ್ಮ ಅಂಗಡಿ ನಿರೂಪಿಸಿದರು. ಡಾ.ಎಫ್.ವ್ಹಿ.ಮಾನ್ವಿ, ಸೋಮಲಿಂಗ ಮಾವಿನಕಟ್ಟಿ, ಆರ್.ಪಿ.ಪಾಟೀಲ, ಜ್ಯೋತಿ ಬದಾಮಿ, ನಿಖಿಲ್ ಅರಳಿಮಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶರಣರು ವಿಚಾರಗಳು ಸಮಾಜಕ್ಕೆ ಪ್ರಸ್ತುತವೆನಿಸಿವೆ : ಪ್ರೊ.ಶಶಿಕಾಂತ ತಾರದಾಳೆ ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿ
