ಬೆಳಗಾವಿ : ಹನ್ನೆರಡನೆಯ ಶತಮಾನದ ಶರಣರು ಸ್ತ್ರೀ ಸಮಾನತೆಯ ಹರಿಕಾರರು. ಸ್ತ್ರೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ ಮೊದಲಿಗರು. ಅದನ್ನು ತಾವು ಮೊದಲು ಅನುಕರಣೆಯಲ್ಲಿ ತರುವ ಮೂಲಕ ಸಮಾಜದ ಮನಸ್ಸಸ್ಥಿತಿಯನ್ನು ಬದಲಾಯಿಸಿದರೆಂದು ಕನ್ನಡ ಅಧ್ಯಾಪಕ ಡಾ.ಗಜಾನನ ಸೊಗಲನ್ನವರ ಹೇಳಿದರು.
ಅವರು ಯುಗಾದಿ ಅಮವಾಸ್ಯೆ ಹಾಗೂ ಮಹಿಳಾ ದಿನಾಚರಣೆ ನಿಮಿತ್ತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಬೆಳಗಾವಿಯ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅನುಭಾವ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಹೆಣ್ಣನ್ನು ಕುರಿತು ಸಮಾಜದಲ್ಲಿ ಇದ್ದ ಕೀಳು ಮನಸ್ಸಸ್ಥಿತಿಯನ್ನು ಮೊದಲ ಬಾರಿ ಪ್ರಶ್ನಿಸಿದವರು ಹನ್ನೆರಡನೆಯ ಶತಮಾನದ ಶರಣರು. ಸ್ತ್ರೀಯರಿಗೆ ಸಮಾಜದ ಎಲ್ಲ ರಂಗಗಳಲ್ಲಿ ಮುಕ್ತವಾದ ಸ್ವತಂತ್ರ್ಯವನ್ನು ಕಲ್ಪಿಸಿ ಅವರ ಬದುಕಿಗೆ ಆಶ್ರಯವಾದರು. ಇಂದಿಗೂ ಸಾಧ್ಯವಾಗದ ಸಮಾನತೆಯನ್ನು ಅಂದೇ ನಮ್ಮ ಶರಣರು ನೀಡಿದ್ದರೆಂದರೆ ಅವರ ಸ್ತ್ರೀ ಪರ ಕಾಳಜಿಗಳು ಅದ್ವಿತೀಯವಾಗಿತ್ತು. ಅಂತೆಯೆ ಅಕ್ಕಮಹಾದೇವಿ, ಗಂಗಾಬಿಕೆ, ನೀಲಾಂಬಿಕೆ, ಅಕ್ಕ ನಾಗಮ್ಮ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮರಂಥ ಶ್ರೇಷ್ಠ ವಚನಕಾರ್ತಿಯರು ಅಸಂಖ್ಯ ವಚನಗಳನ್ನು ಬರೆದರು. ಅವರ ಆಧ್ಯಾತ್ಮಶಕ್ತಿ ಈ ವಚನಗಳಿಂದ ಅರಿವಿಗೆ ಬರುತ್ತದೆ. ಇಂದು ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕದ ಒಂದು ಚಳುವಳಿಯು ಎಂಟುನೂರ ವರ್ಷಗಳ ಹಿಂದೆಯೇ ಅಂತಹ ಸ್ವಾತಂತ್ರ್ಯವನ್ನು ಮಹಿಳೆಯರಿಗೆ ಕಲ್ಪಿಸಿದ್ದ ಚಾರಿತ್ರಿಕ ಸತ್ಯವೆಂಬುದನ್ನು ಅರಿಯಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಮಹಿಳಾ ಸಾಹಿತಿ ಮಹಾಸಭೆ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ ಗಂಡು ಸಂತಾನ ಹುಟ್ಟಿದರೆ ಸಂಭ್ರಮಿಸುವ ಕಾಲವೊಂದಿತ್ತು. ಇಂದು ಬದಲಾಗಿದೆ. ನಮ್ಮ ಮಹಿಳೆ ಅಂತರಿಕ್ಷವನ್ನು ಪ್ರವೇಶಿಸಿ ಸಾಧನೆ ಮಾಡಿದ್ದಾಳೆ, ಸಮುದ್ರದ ಆಳವನ್ನು ಬಗೆದು ವಿಕ್ರಮ ಸಾಧಿಸಿದ್ದಾಳೆ. ಅವಳು ಸೇವೆಗೈದ ಕ್ಷೇತ್ರಗಳೇ ಇಲ್ಲ. ಇಂದು ಎಲ್ಲ ನೆಲೆಗಳಲ್ಲಿ ನಮ್ಮ ಮಹಿಳೆಯರೇ ಫಸ್ಟ್. ಪುರುಷರ ದಬ್ಬಾಳಿಕೆಯನ್ನು ಮೆಟ್ಟಿ ಅವರು ಮಾಡಿರುವ ಸಾಧನೆಗೆ ಬೆಲೆಕಟ್ಟಲಾಗದು. ಇದೆಲ್ಲವೂ ಸಾಧ್ಯವಾಗಿದ್ದು 12ನೇ ಶತಮಾನತ ನಮ್ಮ ಶರಣರು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೇ ಎನ್ನಬೇಕು. ಅದನ್ನು ಸ್ವತಃ ಬಸವಾದಿ ಪ್ರಮಥರು ಅನುಕರಣೆಯಲ್ಲಿ ತಂದರು. ಮುಕ್ತವಾದ ವಾತಾವರಣವನ್ನು ಕಲ್ಪಿಸಿಕೊಟ್ಟರು. ಇಂದಿನ ಮಹಿಳೆಯರು ಜಾಗತಿಕ ನೆಲೆಯಲ್ಲಿ ಮಾಡುತ್ತಿರುವ ಕಾರ್ಯಗಳನ್ನು ನೋಡಿದರೆ ವಿಸ್ಮಯವೆನಿಸುತ್ತಿದೆ. ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಪುರುಷ-ಸ್ತ್ರೀ ಎಂಬ ಭೇದವನ್ನು ಕಾಣದೆ ಸಮಾನವಾಗಿ ಕಾಣುವ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳುವುದು ಅಗತ್ಯವೆಂದು ಹೇಳಿದರು.
ಸಾನ್ನಿಧ್ಯವಹಿಸಿಕೊಂಡಿದ್ದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿಯವರು ಮಾತನಾಡಿ, ಸಮಾಜಕ್ಕೆ ಹೆಣ್ಣು ಮತ್ತು ಗಂಡು ಒಂದೇ ನಾಣ್ಯ ಎರಡು ಮುಖಗಳು. ಅವರಲ್ಲಿ ಭೇದವನ್ನು ಕಲ್ಪಿಸುವದರಲ್ಲಿ ಅರ್ಥವಿಲ್ಲದ ಮಾತು. ಸಮಸಮಾಜದ ತಕ್ಕಡಿಗೆ ಇರ್ವರ ಕೊಡುಗೆ ಅನನ್ಯವೆನಿಸಿದೆ. ಇಂದು ಕಾಲಬದಲಾಗಿದೆ. ಜನರ ಮನಸ್ಸುಗಳು ಬದಲಾಗುತ್ತಿವೆ. ಇದು ಇನ್ನೂ ಬದಲಾಗಬೇಕು. ಹಲವಾರು ಧರ್ಮಗಳಲ್ಲಿ ಅವಳಿಗೆ ಸಮಾನತೆಯನ್ನು ನೀಡಿಲ್ಲ ಅಂತಹ ಶೂದ್ರಭಾವಗಳಿಂದ ಹೊರಗೆ ಬರಲೇಬೇಕೆಂದು ನುಡಿದರು.
ಸುಜಾತಾ ಮಠಪತಿ ವಚನ ಪ್ರಾರ್ಥನೆ ಸಲ್ಲಿಸಿದರು. ಅಕ್ಕಮಹಾದೇವಿ ತೆಗ್ಗಿ ವಚನ ವಿಶ್ಲೇಷಣೆ ಮಾಡಿದರು. ವೀಣಾ ನಾಗಮೋತಿ ಅತಿಥಿಗಳನ್ನು ಪರಿಚಯಿಸಿದರು. ವೈಷ್ಣವಿ ಚೌಗಲೆ ನಿರೂಪಿಸಿದರು. ನ್ಯಾಯವಾದಿ ವಿ.ಕೆ.ಪಾಟೀಲ ವಂದಿಸಿದರು. ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಬಾಲಚಂದ್ರ ಬಾಗಿ, ಆರ್.ಪಿ.ಪಾಟೀಲ, ಸರೋಜನಿ ನಿಶಾನದಾರ, ಎಂ.ವಾಯ್.ಮೆಣಸಿನಕಾಯಿ, ಡಾ.ಕಟ್ಟಿ, ಶಂಕರ ಪಟ್ಟೇದ, ಶಿವಲೀಲಾ ಮೇಲಿಕಟ್ಟಿ, ಡಾ.ಮಹೇಶ ಗುರನಗೌಡರ ಮೊದಲಾದವರು ಉಪಸ್ಥಿತರಿದ್ದರು.
ಶರಣರು ಸ್ತ್ರೀ ಸಮಾನತೆಯ ಹರಿಕಾರರು: ಡಾ.ಗಜಾನನ ಸೊಗಲನ್ನವರ ಅಭಿಮತ
