ಬೆಳಗಾವಿ : ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ (47) ಅವರ ಸಾವಿನ ಪ್ರಕರಣವನ್ನು ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಬೆಳಗಾವಿ ಪೊಲೀಸರು ಮಂಗಳೂರು ಮೂಲದ ಶೋಬಿತ್ ಗೌಡ ಮತ್ತು ಇನ್ನೊಬ್ಬ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ಬೆಳಗಾವಿಗೆ ಕರೆತಂದಿದ್ದಾರೆ.
ಘಟನೆ ಹಿನ್ನೆಲೆ :
ಅಕ್ಟೋಂಬರ್ 9ರಂದು ಉದ್ಯಮಿ ಸಂತೋಷ ಪದ್ಮಣ್ಣವರ್ ಸಂಶಯಾಸ್ಪದವಾಗಿ ಮೃತಪಟ್ಟಿದ್ದರು. ಅವರ ಪತ್ನಿ ಉಮಾ ತನ್ನ ಪತಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಸ್ವತಃ ಪತ್ನಿ ಈ ರೀತಿ ಹೇಳಿದ್ದರಿಂದ ಎಲ್ಲರೂ ಸಂತೋಷ ಪದ್ನಣ್ಣವರ ಹೃದಯಘಾತದಿಂದ ಮೃತಪಟ್ಟಿರಬಹುದು ಎಂದು ನಂಬಿದ್ದರು. ಆದರೆ ಬೆಂಗಳೂರಿನಿಂದ ಬಂದ ಮಗಳು ಸಂಜನಾ ತನ್ನ ತಂದೆಯ ಕೊನೆಯ ಕ್ಷಣಗಳನ್ನು ನೋಡಬೇಕು ಎಂದು ಬಯಸಿ ಸಿಸಿ ಟಿವಿ ಕ್ಯಾಮರಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಅವರಿಗೆ ಗದರಿಸಿದ ತಾಯಿ ಉಮಾ, ಸ್ನಾನ ಮಾಡಿಕೊಂಡು ಬಾ. ನಂತರ ಸಿಸಿಟಿವಿ ತೋರಿಸುತ್ತೇನೆ ಎಂದು ಕಳಿಸಿದ್ದರು. ಸಂಜನಾ ಆ ಕಡೆ ಹೋಗುತ್ತಿದ್ದಂತೆ ತಮ್ಮ ಇಬ್ಬರು ಪುತ್ರರನ್ನು ಕರೆದ ಉಮಾ, ಕೊಲೆ ನಡೆದ ಸಮಯದ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದರು. ಆದರೆ ನಂತರ ಇಬ್ಬರೂ ಬಾಲಕರು ತಮ್ಮ ಅಕ್ಕ ಸಂಜನಾಗಿ ವಿಷಯ ತಿಳಿಸಿದರು. ಆ ಕ್ಷಣದಿಂದಲೇ ಮಗಳಿಗೆ ಅನುಮಾನ ಆರಂಭವಾಯಿತು. ಆರೋಗ್ಯವಾಗಿದ್ದ ತಂದೆಯ ಸಾವು ಸಹಜ ಸಾವಲ್ಲ. ಕೊಲೆ ಎಂದು ಅನುಮಾನ ಪಟ್ಟು ಅಕ್ಟೋಬರ್ 15ರಂದು ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬುಧವಾರ ಬೆಳಗಾವಿ ಪೊಲೀಸರು ಸಂತೋಷ ಪದ್ಮಣ್ಣವರ ಅವರ ಶವ ಹೊರತೆಗೆದು ಕೊನೆಗೂ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಮಾಳ ಫೇಸ್ ಬುಕ್ ಸ್ನೇಹಿತ ಶೋಬಿತ್ ಗೌಡಗೆ ಅಕ್ಟೋಬರ್ 9ರಂದು ಉಮಾಗೆ ಮೊಬೈಲ್ ಕರೆ ಮಾಡಿ ಎಲ್ಲಾ ಕೆಲಸ ಮಾಡಿ ಮುಗಿಸಿದ್ದೇನೆ ಬನ್ನಿ ಎಂದು ಕರೆದಿದ್ದಳು. ನಂತರ ಅವರ ಸಹಾಯದಿಂದ ಉಮಾ ಸಂತೋಷನನ್ನು ಕೊಲೆ ಮಾಡಿರುವುದಾಗಿ ಈಗ ಬಂಧಿತರಾಗಿರುವ ಆರೋಪಿಗಳು ಪೊಲೀಸರ ಮುಂದೆ ತಪೊಪಿಗೆ ನೀಡಿದ್ದಾರೆ.