ಬೆಳಗಾವಿ : ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಯಾವುದಾದರೂ ಒಂದು ಕಲೆಯನ್ನು ರೂಢಿಸಿಕೊಂಡು ಬೆಳೆಸಿಕೊಳ್ಳುವುದರ ಮೂಲಕ ಮಕ್ಕಳು ಸಮಾಜದಲ್ಲಿ ತಮ್ಮನ್ನು ತಾವೇ ಗುರುತಿಸಿಕೊಳ್ಳಬಹುದು ಎಂದು ಇಲ್ಲಿನ ಕ್ಲಬ್ ರೋಡ್ ನ ಠಾಕೂರ್ ರೆಸಿಡೆನ್ಸಿಯಲ್ಲಿ ನಾದಸುಧಾ ಸುಗಮ ಸಂಗೀತ ಶಾಲೆ ಆಯೋಜಿಸಿದ್ದ ಸಾನಿಕಾ ಠಾಕೂರ್ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಶಿಕ್ಷಕಿ ಪೂರ್ಣಿಮಾ ಪತ್ತಾರ ನುಡಿದರು.
ಮಕ್ಕಳಿಗೆ ಕಲಾ ತರಬೇತಿ ಹಾಗೂ ಕಲೆಯಲ್ಲಿನ ಅಭಿರುಚಿ ವೃದ್ಧಿಸಲು ಒಂದಿಲ್ಲೊಂದು ಕಲಾ ಕಾರ್ಯಕ್ರಮವನ್ನು ನಾದಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ. ಸತ್ಯನಾರಾಯಣ ಅವರು ಆಗಿಂದಾಗೆ ಹಮ್ಮಿಕೊಂಡಿರುತ್ತಾರೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನಮುಟ್ಟುವಂತೆ ಮಾತನಾಡಿದರು.
ಸಾನಿಕಾ ಠಾಕೂರ್ ಒಂಬತ್ತು ವರ್ಷಗಳ ಹಿಂದೆ ನಾದ ಸುಧಾ ಸುಗಮ ಸಂಗೀತ ಶಾಲೆಯಲ್ಲಿ ಸಂಗೀತ ತರಬೇತಿ ಪಡೆಯಲು ಬಂದಾಗ ಒಬ್ಬ ಸಾಧಾರಣ ವಿದ್ಯಾರ್ಥಿನಿ ಆಗಿದ್ದು ಗುರುಗಳ ಮಾರ್ಗದರ್ಶನದಿಂದ ಇಂದು ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯಾಗುವುದರೊಂದಿಗೆ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಶಾಲೆಯ ನೂರಾರು ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ಸಂಗೀತ ಸ್ಪರ್ಧೆಗಳಲ್ಲಿ ನೂರಾರು ಬಹುಮಾನಗಳನ್ನು ಪಡೆದು ತಮ್ಮನ್ನು ತಾವೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಲೋಕಮಾನ್ಯ ಸಂಸ್ಥೆಯವರು ಆಯೋಜಿಸಿದ್ದ
GOLDEN VOICE OF BELGAUM
ಸಂಗೀತ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಗೆ RUNNERS UP TROPHY
( ಎರಡನೇ ಬಹುಮಾನ, Rs.20,000 ನಗದು) ಪಡೆದು ಸಂಗೀತ ಲೋಕದಲ್ಲಿ ಒಂದು ದೊಡ್ಡ ತಿರುವು ಪಡೆದರು.
ಇವರು ಶಾಸ್ತ್ರೀಯ ಸಂಗೀತದಲ್ಲಿ ನಾಲ್ಕು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದು, ಈಗ ಶೈಕ್ಷಣಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ ಪುಣೆ ಇಲ್ಲಿಗೆ ತೆರಳಲಿದ್ದಾರೆ.
ಇದೇ ಸಂದರ್ಭದಲ್ಲಿ ಮಕ್ಕಳ ತಿಳುವಳಿಕೆಗಾಗಿ ಹಮ್ಮಿಕೊಂಡಿದ್ದ ಡಾ.ಸತ್ಯನಾರಾಯಣ ಅವರೊಡನೆ ಸಂದರ್ಶನ ಕಾರ್ಯಕ್ರಮದಲ್ಲಿ ಸಾನಿಕಾ ಮಾತನಾಡುತ್ತಾ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸಂಗೀತದಲ್ಲೂ ಹೇಗೆ ಪ್ರೌಢಿಮೆ ಸಾಧಿಸಬಹುದು ಎಂದು ಬಹಳ ಸೊಗಸಾಗಿ ಮಾತನಾಡಿದರು.
ಮಕ್ಕಳಿಂದ ಸಂಗೀತ ಹಾಗೂ ನೃತ್ಯದ ಜೊತೆಗೆ ಮನಸ್ಸಿನ ಏಕಾಗ್ರತೆಗಾಗಿ ಮಕ್ಕಳು ಹಾಗೂ ಪೋಷಕರಿಗೆ ಒಂದೆರಡು ಆಟಗಳನ್ನು ಆಡಿಸಿ ಬಹುಮಾನಗಳನ್ನು ನೀಡಲಾಯಿತು.
ಮಕ್ಕಳ ಕಾರ್ಯಕ್ರಮ ಆಗಿದ್ದರಿಂದ ಮಕ್ಕಳಿಂದಲೇ ದೀಪ ಬೆಳಗಿಸಿ ಒಂದು ಸಂಜೆ ಸಾನಿಕಾ ಜೊತೆ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ಡಾ. ಸತ್ಯನಾರಾಯಣ ಅವರು ಸ್ವಾಗತಿಸಿದರು ಶ್ರೇಯಾ ಮನವಾಡಿ ವಂದಿಸಿದರು.