ಬೆಳಗಾವಿಯಲ್ಲಿ ನಕಲಿ ಮದ್ಯ ಮಾರಾಟ; 4 ಲಕ್ಷದ ಮದ್ಯ ಜಪ್ತಿ, ಇಬ್ಬರ ಬಂಧನ..!
BP, 100 Piperದಂತಹ ಬ್ರ್ಯಾಂಡ್ ಗಳಲ್ಲಿ OT, Original choice ಹಾಕಿ ಮಾರುತ್ತಿದ್ದ ಖದೀಮರು..!
ಬೆಳಗಾವಿ: ನಗರದಲ್ಲಿ ವಿವಿಧ ಕಂಪನಿಗಳ ಸ್ಟಿಕರ್ ಅಂಟಿಸಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಡಿಸಿಪಿ ಪಿ ವಿ ಸ್ನೇಹಾ ನೇತೃತ್ವದಲ್ಲಿ ಸಿಸಿಬಿ ಪೊಲೀಸರ ತಂಡ ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ ಮದ್ಯ ಮತ್ತು ಕೃತ್ಯಕ್ಕೆ ಬಳಸಿದ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆ (ಗುರುವಾರ) ಖಚಿತ ಮಾಹಿತಿ ಮೇರೆಗೆ ಪಿಐ ಡಿಸಿಪಿ (ಅಪರಾಧ & ಸಂಚಾರ) ನೇತೃತ್ವದಲ್ಲಿ ಅಲ್ತಾಫ್ ಮುಲ್ಲಾ ತಂಡ ಸದಾಶಿವ ನಗರದ ವಿರೂಪಾಕ್ಷಿ ರೆಸಿಡೆನ್ಸಿ ಅಪಾರ್ಟಮೆಂಟ್ ಮೇಲೆ ದಾಳಿ ನಡೆಸಿ ಈ ಜಾಲವನ್ನು ಪತ್ತೆ ಮಾಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿವಿಧ ಬ್ರ್ಯಾಂಡೆಡ್ ಬ್ರಾಂಡ್ನ ಖಾಲಿ ಮದ್ಯ ಬಾಟಲಗಳನ್ನು ಸಂಗ್ರಹಿಸಿಕೊಂಡು ಅವುಗಳಲ್ಲಿ ಗೋವಾ ರಾಜ್ಯದ ಹಾಗೂ ಕರ್ನಾಟಕದಲ್ಲಿ ತಯಾರಾದ ಕಡಿಮೆ ಬೆಲೆಯ OT, original choice ಮದ್ಯದಲ್ಲಿ ರಾಸಾಯನಿಕ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದಾಗಿ ತಿಳಿಸಿದ್ದಾರೆ.
ವಿವಿಧ ಬ್ರ್ಯಾಂಡೆಡ್ ಕಂಪನಿಗಳ ಲೇಬಲ್ಗಳನ್ನು ಅಂಟಿಸಿ, ನಕಲಿ ಮುಚ್ಚಳಗಳನ್ನು ಹಾಕಿ ಪ್ಯಾಕ್ ಮಾಡಿ, ಅದೇ ಬ್ರ್ಯಾಂಡ್ ನ ಬಾಕ್ಸ್ ಗಳಲ್ಲಿ ಹಾಕಿ ಇವು ಮೂಲ ಕಂಪನಿಯವು ಎಂಬಂತೆ ಬಿಂಬಿಸುತ್ತಿದ್ದರು. ಸರ್ಕಾರದ ಅನುಮತಿ ಲೈಸನ್ಸ್ ಇಲ್ಲದೇ ತಮ್ಮ ಸ್ವಂತ ಲಾಭಕ್ಕೋಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಎಸ್. ಎನ್.ಸಿದ್ದರಾಮಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜು ಕೇಶವ ನಾಯಿಕ (42)ಹಾಗೂ ಹಸನ್ (22) ಬಂಧಿತರು. ಇವರಿಂದ ಒಟ್ಟು 4 ಲಕ್ಷ ಮೌಲ್ಯದ 750 ಎಮ್ಎಲ್ ನ ವಿಸ್ಕಿ, ರಮ್, ಓಡ್ಕಾ, ರಾಯಲ್ ಸ್ಟಾಗ್ ಮದ್ಯದ 439 ಬಾಟಲಿಗಳು. 375 ಎಂಎಲ್ ನ ಓರಿಜಿನಲ್ ಚಾಯ್ಸ್ ಮದ್ಯದ 20 ಬಾಟಲಿಗಳು. 180 ಎಂಎಲ್ ನ ಓಲ್ಡ್ ಟ್ಯಾವರ್ನ್ ಮದ್ಯದ 2 ಟೆಟ್ರಾ ಪ್ಯಾಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅದೇ ರೀತಿ ಕೃತ್ಯಕ್ಕೆ ಬಳಸಿದ ಒಂದು ಇಂಡಿಕಾ ಕಾರು, 4 ಮೊಬೈಲ್, 17,500 ರೂ. ನಗದು ಹಣವನ್ನು ಪೊಲೀಸರು ಜಪ್ತಿ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಪರಾರಿಯಾಗಿರುವ ಜಾವೇದ್ ಬೇಪಾರಿ, ನಾಗೇಶ ಎಂಬುವವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.
ಈ ಮದ್ಯದಲ್ಲಿ ಬೆರೆಸಿರುವ ರಾಸಾಯನಿಕ ಪದಾರ್ಥಗಳ ಪತ್ತೆಗೆ ವಿಧಿ ವಿಜ್ಞಾನ ಸಂಸ್ಥೆಗೆ ಮಾದರಿ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಎಸ್.ಎನ್. ಸಿದ್ದರಾಮಪ್ಪ ಅವರು,
ಆರೋಪಿಗಳು ನಗರದಲ್ಲಿ ಯಾವ ಅಂಗಡಿಗಳಿಗೆ ನಕಲಿ ಮದ್ಯ ಪೂರೈಸುತ್ತಿದ್ದರು ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದರು.
ಈ ಅಕ್ರಮ ನಕಲಿ ಮಾರಾಟ ಜಾಲ ಬೇಧಿಸಿದ ಪಿಐ ಅಲ್ತಾಫ್ ಮುಲ್ಲಾ ತಂಡಕ್ಕೆ ಇದೇ ವೇಳೆ ಅಭಿನಂದನೆ ಸಲ್ಲಿಸಿ 8 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಪಿ.ವ್ಹಿ. ಸ್ನೇಹಾ, ಶೇಖರ್ ಎಚ್.ಟಿ. ಇದ್ದರು.