ಸಿದ್ದಾಪುರ (ಕೊಪ್ಪಳ): ಲೋಕಕಲ್ಯಾಣಕ್ಕಾಗಿ ಹಲವಾರು ಋಷಿಮುನಿಗಳು ಹಾಗೂ ಸ್ವಾಮೀಜಿಗಳು ಗವಿ, ಬೆಟ್ಟ-ಗುಡ್ಡಗಳಲ್ಲಿ ಕಠಿಣ ತಪಸ್ಸುಗಳನ್ನು ಹಾಗೂ ವ್ರತಗಳನ್ನು ಕೈಗೊಂಡಿದ್ದನ್ನು ಕೇಳಿದ್ದೆವೆ. ಆದರೆ ಇಲ್ಲೊಬ್ಬ ಸ್ವಾಮೀಜಿಯೊಬ್ಬರು ಲೋಕ ಕಲ್ಯಾಣಕ್ಕಾಗಿಯೇ ಮಾವಿನ ಮರದಲ್ಲಿ ಕುಳಿತುಕೊಂಡು ಕಠಿಣ ಮೌನಾನುಷ್ಠಾನ ವ್ರತ ಕೈಗೊಂಡಿರುವುದು ಒಂದು ವಿಶೇಷ ಎಂದೇ ಹೇಳಬಹುದಾಗಿದೆ.
ಇದು ಅಚ್ಚರಿ ಆದರೂ ಸತ್ಯ. ಇದು ನಡೆಯುತ್ತಿರುವುದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕು ಸಿದ್ದಾಪುರ ಹೋಬಳಿ ವ್ಯಾಪ್ತಿಯ ಮೂಸ್ಟೂರು ಗ್ರಾಮದ ಬರಗಾಲ ಸಿದ್ಧನಾಥ ಮಂದಿರದ ಬ್ರಹ್ಮಗಡ್ಡಿಮಠ ಆವರಣದಲ್ಲಿ. ಮಠಕ್ಕೆ ಸಂಬಂಧಿಸಿದ ಸುಮಾರು 5 ಎಕರೆ ಮಾವಿನ ತೋಟವಿದ್ದು, ಈ ತೋಟದ ಮಾವಿನ ಮರವೊಂದರ ಮೇಲೆ ಸುರಪುರ ತಾಲೂಕಿನ ಬಾದ್ಯಪುರ ಮಠದ ಸಚ್ಚಿದಾನಂದ ಸ್ವಾಮೀಜಿ ಎಂಬುವವರೆ ಜುಲೈ 26 ರ ಶುಕ್ರವಾರ ಬೆಳಗಿನ ಜಾವ 5 ಗಂಟೆಯಿಂದ ಮೌನಾನುಷ್ಠಾನ ಕೈಗೊಂಡಿದ್ದಾರೆ.
ಸ್ವಾಮೀಜಿಯ ಮೂಲ ಸುರಪುರ. ಮೂಲತಃ ಸುರಪುರ ತಾಲೂಕಿನ ಬಾದ್ಯಪುರ ಮುಗಳಖೋಡ ಯಲ್ಲಾಲಿಂಗನ ತಾತನವರ ಶಾಖಾ ಮಠದ ಸ್ವಾಮೀಜಿಯಾಗಿರುವ ಸಚ್ಚಿದಾನಂದ ಸ್ವಾಮೀಜಿಯವರು 2012 ರಲ್ಲಿ ಆಲದ ಮರದಲ್ಲಿ ಮೌನಾನುಷ್ಠಾನ ಮಾಡಿದ್ದಾರೆ. ಈ ಸ್ವಾಮೀಜಿಯವರು ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿರುವ ಯಲ್ಲಾಲಿಂಗನ ಶಾಖಾ ಮಠವಾದ ಬರಗಾಲ ಸಿದ್ಧನಾಥ ಮಂದಿರ, ಬ್ರಹ್ಮಗಡ್ಡಿಮಠಕ್ಕೆ ಆಗಾಗ ಬೇಟಿ ನಿಡುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಬರಗಾಲ ಸಿದ್ಧನಾಥ ಮಂದಿರದ ಸ್ವಾಮೀಜಿಯಾಗಿದ್ದ ರಾಜಾ ಮಾಧವಾನಂದ ಶ್ರೀಗಳು ಲಿಂಗೈಕ್ಯರಾಗಿದ್ದರೆ. ಆದರೆ ಇನ್ನು ಈ ಮಠಕ್ಕೆ ಉತ್ತರಾಧಿಕಾರಿ ನೇಮಕವಾಗಿಲ್ಲ. ಆದರೂ ಸಹ ಮುಸ್ಟುಊರು ಗ್ರಾಮದ ಸರ್ವ ಸಮುದಾಯದ ಸದ್ಭಕ್ತರ ನೇತೃತ್ವದಲ್ಲಿ ನಿತ್ಯ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಹಾಗೂ ನಿತ್ಯ ದಾಸೋಹಗಳು ನಡೆಸಿಕೊಡುತ್ತಿದ್ದಾರೆ.
ಮಾವಿನ ಮರದಲ್ಲಿ ಮೌನಾನುಷ್ಠಾನಕ್ಕೆ ಕುಳಿತಿರುವ ಸಚ್ಚಿದಾನಂದ ಸ್ವಾಮೀಜಿಗಳು ನಿತ್ಯ ಒಂದು ಗಂಟೆಯವರೆಗೆ ಮಾತ್ರ ಅಂದರೆ ಪ್ರತಿ ನಿತ್ಯ ಮಧ್ಯಾಹ್ನ 1:30 ರಿಂದ 2:30 ರವರೆಗೆ ಮಾತ್ರ ಈ ಸ್ವಾಮೀಜಿಗಳು ಭಕ್ತರ ದರ್ಶನಕ್ಕೆ ಲಭಿಸುತ್ತಾರೆ. ಸ್ವಾಮೀಜಿಗಳು ಮೌನಾನುಷ್ಠಾನಕ್ಕೆ ಕುಳಿತಿರುವ ಸುದ್ದಿಕೇಳಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೊತ್ತುಕೊಂಡು ನಿತ್ಯ ವಿವಿಧೆಡೆಯ ಗ್ರಾಮಗಳಿಂದ ನೂರಾರು ಜನರು ಈ ಸ್ವಾಮೀಜಿಯ ದರ್ಶನಕ್ಕೆ ಕಾದು ಕುಳಿತಿರುತ್ತಾರೆ. ಈ ಸ್ವಾಮೀಜಿಗಳು ಭಕ್ತರಿಗೆ ಏನಾದ್ರೂ ಹೇಳುವುದಿದ್ದರೆ ಅದು ಒಂದು ಹಾಳೆಯಲ್ಲಿ ಬರೆದುಕೊಡುತ್ತಾರೆ.
ಪ್ರತಿನಿತ್ಯ ಮಧ್ಯಾಹ್ನ ಭಕ್ತರಿಗೆ ದರ್ಶನ ನಿಡುವ ವೇಳೆಯೇ ಮಾತ್ರ ಈ ಸ್ವಾಮೀಜಿಗಳು ಒಂದು ಗ್ಲಾಸ್ ಹಾಲು ಮಾತ್ರ ಸೇವನೆ ಮಾಡುತ್ತಾರೆ ವಿನಹಃ ಯಾವುದೆ ಹಣ್ಣು, ಹಂಪಲು ಪ್ರಸಾದ ಸೇವನೆ ಮಾಡುವುದಿಲ್ಲ.
ಈ ಸ್ವಾಮೀಜಿಗಳು ಆಗಾಗ ಮುಸ್ಟೂರು ಗ್ರಾಮದ ಬರಗಾಲ ಸಿದ್ಧನಾಥನ ಮಠಕ್ಕೆ ಬಂದು ಹೋಗುತ್ತಿದ್ದರು. ಮೊನ್ನೆ ಇಲ್ಲಿಗೆ ಬಂದಾಗ ಈ ಸುಂದರ ಪರಿಸರದಲ್ಲಿರುವ ಮಾವಿನಮರದಲ್ಲಿ ಲೋಕಕಲ್ಯಾಣಕ್ಕಾಗಿ ಮೌನಾನುಷ್ಠಾನ ಕುಳಿತುಕೊಳ್ಳುವುದಾಗಿ ಹೇಳಿದ್ದರು. ಆದರೆ ಎಷ್ಟು ದಿನ ಅನುಷ್ಠಾನಕ್ಕೆ ಕುಳಿತುಕೊಳ್ಳುತ್ತೇನೆ ಎಂದು ಈ ಸ್ವಾಮೀಜಿಯವರು ಹೇಳಿಲ್ಲ. ಆ ಶಿವನ ಇಚ್ಛೆ ಯಾವಾಗ ಅನುಷ್ಠಾನ ಮುಗಿಸು ಎಂದು ಹೇಳುತ್ತಾನೆ ಅಂದು ಮುಕ್ತಾಯ ಮಾಡುವುದಾಗಿ ಹೇಳಿದ್ದಾರೆ.
– ಮುದಿಯಪ್ಪ ಕುರಿ, ಮುಸ್ಟೂರು ಗ್ರಾಮಸ್ಥ
ಜಗತ್ತಿನ ಒಳಿತಿಗಾಗಿ ಲೋಕಕಲ್ಯಾಣಕ್ಕಾಗಿ ವ್ರತವು ಪ್ರಪಂಚದ ಎಲ್ಲಾ ಜೀವಿಗಳ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಕೈಗೊಳ್ಳುವ ಒಂದು ಸಂಕಲ್ಪವಾಗಿದ್ದು, ಅದರಲ್ಲೂ ನಮ್ಮ ಭಾಗದಲ್ಲಿ ಸಚ್ಚಿದಾನಂದ ಸ್ವಾಮೀಜಿ ಇಂತಹ ಸಂಕಲ್ಪಮಾಡಿ ಮೌನಾನುಷ್ಠಾನ ಕೈಗೊಂಡಿರುವುದು ನಮ್ಮ ಪುಣ್ಯ.
– ಲಿಂಗಪ್ಪ ಗೌರಿಪುರ