ಶಬರಿಮಲೆ: ಮಂಡಲ – ಮಕರ ಜ್ಯೋತಿ ಪೂಜೆಗೆ ಶಬರಿಮಲೆ ಅಯ್ಯಪ್ಪ ದೇಗುಲ ನವೆಂಬರ್ 15 ರಂದು ತೆರೆಯಲಿದೆ. ಹೊಸ ತೀರ್ಥಯಾತ್ರೆ ಪರ್ವದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಅಯ್ಯಪ್ಪ ಭಕ್ತರನ್ನು ಸ್ವಾಗತಿಸಲು ಕೇರಳ ಸಜ್ಜಾಗಿದೆ. ಎಲ್ಲ ಯಾತ್ರಾರ್ಥಿಗಳಿಗೆ ಸುಗಮ ದರ್ಶನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.ಸನ್ನಿಧಾನದಲ್ಲಿ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಈ ಬಾರಿ ಮಂಡಲ ತೀರ್ಥಯಾತ್ರೆಯ ಮೊದಲ ದಿನದಿಂದ 18 ಗಂಟೆಗಳ ದರ್ಶನ ಸೌಲಭ್ಯ ಒದಗಿಸಲಾಗುವುದು. ನವೆಂಬರ್ 16 ರ ವೃಶ್ಚಿಕ 1 ರಂದು ಬೆಳಗ್ಗೆ ಮೂರು ಗಂಟೆಗೆ ದೇಗುಲ ತೆರೆಯಲಾಗುವುದು. ಮಧ್ಯಾಹ್ನದ ಪೂಜೆ ಬಳಿಕ 1 ಗಂಟೆಗೆ ದೇಗುಲ ಮುಚ್ಚಲಾಗುವುದು. ಸಂಜೆ 3 ಗಂಟೆಗೆ ಮತ್ತೆ ತೆರೆದು ರಾತ್ರಿ 11 ಗಂಟೆಗೆ ಮುಚ್ಚಲಾಗುವುದು. ಆನ್ಲೈನ್ ನೋಂದಣಿ ಶಬರಿಮಲೆಯಲ್ಲಿ ಆನ್ಲೈನ್ ನೋಂದಣಿ ಮೂಲಕ ಪ್ರತಿ ದಿನ ದರ್ಶನ ಸೌಲಭ್ಯ ಪಡೆಯುವ ಭಕ್ತರ ಸಂಖ್ಯೆಯನ್ನು 70 ಸಾವಿರ ಮಂದಿಗೆ ಸೀಮಿತಗೊಳಿಸಲಾಗಿದೆ. ಬುಕ್ ಮಾಡದ 10 ಸಾವಿರ ಮಂದಿಗೆ ತತ್ಕಾಲ್ ಆನ್ಲೈನ್ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗುವುದು. ಇದಕ್ಕಾಗಿ ಆಧಾರ್ ಕಾರ್ಡ್ನ ಪ್ರತಿ ತರಬೇಕು. 18 ಮೆಟ್ಟಿಲ ಮೂಲಕ ಪ್ರತಿ ನಿಮಿಷ 75 ಯಾತ್ರಿಕರನ್ನು ದಾಟಿಸಲಾಗುವುದು. ಇಲ್ಲಿ ಅನುಭವಿ ಹಾಗೂ ಯುವ ಪೊಲೀಸರನ್ನು ನಿಯೋಜಿಸಲಾಗುವುದು. 22 ಮೊಬೈಲ್ ಟವರ್ ಅಳವಡಿಕೆಶಬರಿಮಲೆಯಲ್ಲಿ ಈ ಹಿಂದೆ ಕೆಲಸ ಮಾಡಿದ ಅಧಿಕಾರಿಗಳು ಸೇರಿದಂತೆ 13,600 ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಲೋಕೋಪಯೋಗಿ ರಸ್ತೆಗಳ ನಿರ್ವಹಣೆ ಸೇರಿದಂತೆ ಬಹುತೇಕ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಮೊಬೈಲ್ ನೆಟ್ವರ್ಕ್ ಕವರೇಜ್ ಹೆಚ್ಚಿಸಲು ಬಿಎಸ್ಸೆನ್ನೆಲ್ 22 ಮೊಬೈಲ್ ಟವರ್ಗಳನ್ನು ಅಳವಡಿಸಲಾಗಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.ಕಾನನ ಹಾದಿಯಲ್ಲಿ ಬರುವ ಯಾತ್ರಾರ್ಥಿಗಳಿಗೆ ಎಲ್ಲ ಸೌಲಭ್ಯ ಒದಗಿಸಲಾಗುವುದು. ಅರಣ್ಯ ಇಲಾಖೆ ಇಲ್ಲಿ 132 ಸೇವಾ ಕೇಂದ್ರಗಳನ್ನು ತೆರೆಯಲಿದೆ. ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು 1500 ಎಕೋ ಗಾರ್ಡ್ಗಳನ್ನು ನಿಯೋಜಿಸಲಾಗುವುದು. ಎಲಿಫೆಂಟ್ ಸ್ಕ್ವಾಡ್, ಹಾವು ಹಿಡಿಯುವವರ ಸೇವೆಯೂ ಲಭ್ಯವಿದೆ. ಯಾತ್ರಾರ್ಥಿಗಳು ಸಂಚರಿಸುವ ಎಲ್ಲ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರು ಒದಗಿಸಲು ಜಲ ಮಂಡಳಿ ಕ್ರಮ ಕೈಗೊಂಡಿದೆ. ಚೆಂಗನ್ನೂರು, ಎರುಮೇಲಿ, ಪಂಪಾ ಸೇರಿದಂತೆ ಎಲ್ಲಸ್ನಾನಘಟ್ಟಗಳಲ್ಲಿ ನೀರಾವರಿ ಇಲಾಖೆ ಸುರಕ್ಷತಾ ಬೇಲಿಗಳನ್ನು ನಿರ್ಮಿಸಿದೆ. ನಾನಾ ಭಾಷೆಗಳಲ್ಲಿಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಪಂಪಾಗೆ ಸರಬರಾಜಾಗುವ ನೀರಿನ ಗುಣಮಟ್ಟವನ್ನು ಜಲ ಪ್ರಾಧಿಕಾರದ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಮೂಲಕ ಪ್ರತಿ ಗಂಟೆಗೆ ಪರೀಕ್ಷಿಸಲಾಗುವುದು.ಆರೋಗ್ಯ ಇಲಾಖೆಯು ನಿಲಕ್ಕಲ್, ಸನ್ನಿಧಾನಂ, ಕೊಟ್ಟಾಯಂ ಮೆಡಿಕಲ್ ಕಾಲೇಜು, ಪತ್ತನಂತಿಟ್ಟ ಜನರಲ್ ಆಸ್ಪತ್ರೆ ಮತ್ತು ಕಾಂಞೀರಪಳ್ಳಿ ಜನರಲ್ ಆಸ್ಪತ್ರೆಯಲ್ಲಿ ಭಕ್ತರಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು.ಈ ಸ್ಥಳಗಳಲ್ಲಿ ಯಾತ್ರಾರ್ಥಿಗಳಿಗಾಗಿ ವಿಶೇಷ ವಾರ್ಡ್ಗಳು ಮತ್ತು ಮಾಹಿತಿ ಕೇಂದ್ರಗಳನ್ನು ತೆರೆಯಲಾಗುವುದು. ಹಾವಿನ ಕಡಿತಕ್ಕೊಳಗಾದವರಿಗೆ ಆ್ಯಂಟಿವೆನಮ್ ಸೇರಿದಂತೆ ಚಿಕಿತ್ಸೆ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ. ವಿಶ್ವ ವಿಖ್ಯಾತ ನರ ಶಸ್ತ್ರಚಿಕಿತ್ಸಕ ಡಾ.ರಾಮನಾರಾಯಣನ್ ನೇತೃತ್ವದಲ್ಲಿ100ಕ್ಕೂ ಹೆಚ್ಚು ತಜ್ಞ ವೈದ್ಯರು ‘ಡಿವೋಟೀಸ್ ಆಫ್ ಡಾಕ್ಟರ್ಸ್’ ಹೆಸರಿನಲ್ಲಿಉಚಿತ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಮೋಟಾರು ವಾಹನ ಇಲಾಖೆಯು ಸೇಫ್ ಝೋನ್ ಯೋಜನೆಯನ್ನು ವಿಸ್ತರಿಸಲಿದೆ. ಗಸ್ತು ತಿರುಗಲು 20 ಸ್ಕ್ವಾಡ್ಗಳನ್ನು ನಿಯೋಜಿಸಲಾಗುವುದು. ಉಚಿತ ವಿಮಾ ಸೌಲಭ್ಯತಿರುವಾಂಕೂರು ದೇವಸ್ವಂ ಮಂಡಳಿ ಈ ಬಾರಿ ಶಬರಿಮಲೆಗೆ ಬರುವ ಎಲ್ಲ ಯಾತ್ರಾರ್ಥಿಗಳಿಗೆ ಐದು ಲಕ್ಷ ರೂ. ಕವರೇಜ್ನ ಉಚಿತ ವಿಮಾ ಸೌಲಭ್ಯವನ್ನು ಪರಿಚಯಿಸಿದೆ. ಯಾತ್ರಾರ್ಥಿಗಳು ಮೃತಪಟ್ಟರೆ ಮೃತದೇಹವನ್ನು ಮನೆಗೆ ತಲುಪಿಸಲು ದೇವಸ್ವಂ ಮಂಡಳಿ ವ್ಯವಸ್ಥೆ ಮಾಡಲಿದೆ.
ಮಾದಕ ವಸ್ತು ಬಳಕೆ ತಡೆಯಲು ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ತಪಾಸಣೆ.
ಕಾನನ ಹಾದಿ ಸೇರಿದಂತೆ ಅಡೆತಡೆ ಇಲ್ಲದೆ ವಿದ್ಯುತ್ ಪೂರೈಕೆಗೆ ಕೆಎಸ್ಇಬಿ ಕ್ರಮ.
ವಿಪತ್ತು ನಿರ್ವಹಣಾ ಇಲಾಖೆಯಿಂದ ವಿಶೇಷ ವಿಪತ್ತು ನಿರ್ವಹಣಾ ಕ್ರಿಯಾ ಯೋಜನೆ ಸಿದ್ಧ.
ಸನ್ನಿಧಾನದಲ್ಲಿ 20 ಲಕ್ಷಕ್ಕೂ ಹೆಚ್ಚು ಅಯ್ಯಪ್ಪ ಭಕ್ತರಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ.
ನಿಲಕ್ಕಲ್ನಲ್ಲಿ ಫಾಸ್ಟ್ಯಾಗ್ ಮೂಲಕ 10 ಸಾವಿರ ವಾಹನ ನಿಲುಗಡೆಗೆ ವ್ಯವಸ್ಥೆ.
ಭಕ್ತರಿಗೆ ವಿಶ್ರಾಂತಿ ಪಡೆಯಲು ತಾತ್ಕಾಲಿಕ ಟೆಂಟ್ ನಿರ್ಮಾಣ.
ಭಕ್ತರಿಗೆ ಬಾಯಾರಿಕೆ ನೀಗಿಸಲು 60 ಶುಂಠಿ ಕಷಾಯ ಕೌಂಟರ್ಗಳ ಸ್ಥಾಪನೆ.