ಬೆಳಗಾವಿ :
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಲ್ಲಿ ಬಹುತೇಕವಾಗಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು, ಅದರಲ್ಲೂ ಕನ್ನಡ ಸರಕಾರಿ ಶಾಲೆಯ ಮಕ್ಕಳೆಂಬುದು ಗಮನಾರ್ಹವಾದುದು. ಸೂಕ್ಷ್ಮಾವಲೋಕನೆಯ ಮಕ್ಕಳ ಮನಸ್ಸು ಅರಳುವ ಮೊಗ್ಗು, ಸೂಕ್ತ ವಾತಾವರಣದಲ್ಲಿ ಅವರು ವಿಕಾಸಹೊಂದಬೇಕು. ನಾಳಿನ ನಾಗರಿಕರಾಗುವ ಮಕ್ಕಳ ಉಜ್ವಲ ಭವಿತವ್ಯಕ್ಕೆ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣವೆಂಬುದನ್ನು ಯಾರೂ ಅಲ್ಲಗಳೆಯಲಾಗದು ಎಂದು ಸಾಹಿತಿ ಶಿ.ಗು.ಕುಸುಗಲ್ಲ ಹೇಳಿದರು.
ಸೋಮವಾರ ಗೋಕಾಕ ತಾಲೂಕಿನ ಮಲಾಮರಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕಿ ಜಿ.ಬಿ.ನಾಯ್ಕರ (ಕುಸುಗಲ್ಲ) ಇವರು ಮಕ್ಕಳಿಗೆ ನೋಟ್ ಬುಕ್ಸ್, ಪೆನ್ನು, ಬಣ್ಣದ ಪೆನ್ಸಿಲ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕುಸುಗಲ್ಲ ಇವರು ಮಕ್ಕಳ ಪ್ರತಿಭೆಯ ಹಿನ್ನೆಲೆಯಲ್ಲಿ ಶಿಕ್ಷಕರ ಶ್ರದ್ಧೆಯನ್ನು ಮುಕ್ತ ಕಂಠದಿಂದ ಕೊಂಡಾಡಿದರು.
ಮಕ್ಕಳಲ್ಲಿ ಕಲಿಕಾ ಆಸಕ್ತಿ ಅಂಕುರಿಸಲು ಶಿಕ್ಷಕರ ಬೋಧನಾ ಶೈಲಿ ಉತ್ತಮವಾಗಿ, ಸಪರ್ಪಣಾ ಭಾವ ಅಲ್ಲಿರಬೇಕೆಂದು ಪ್ರಧಾನ ಗುರು ಈಶ್ವರ. ಈ. ಗುಡದೈಯಗೋಳ ಹೇಳಿದರು.
ಶಿಕ್ಷಕ ವಿ.ಎಫ್.ಅರಿಬೆಂಚಿ, ಮಹಾದೇವಿ ನಾಗರಾಳ ಮೊದಲಾದವರು ಉಪಸ್ಥಿತರಿದ್ದರು.