ಮಂಡ್ಯ: ಪ್ರಿಯಾಂಕ್ ಖರ್ಗೆ ಒಬ್ಬ ಬಚ್ಚ ನೆಹರು ಸೇರಿದಂತೆ ಯಾರಿಂದಲೂ ಆರ್ಎಸ್ಎಸ್ ನಿಷೇಧ ಮಾಡಲಾಗಿಲ್ಲ. ಇವನು ಮಾಡ್ತಾನಾ ಎಂದು ಏಕವಚನದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಪ್ರಶ್ನಿಸಿದರು.
ಆರ್ಎಸ್ಎಸ್ ಬ್ಯಾನ್ ಮಾಡಲು ಸಾಧ್ಯವಿಲ್ಲ. ಮುಸ್ಲಿಂ ಒಲೈಕೆಗಾಗಿ ಈ ರೀತಿ ಹೇಳ್ತಾರೆ. ಆರ್ಎಸ್ಎಸ್ ಕಬ್ಬ ಮಾಡಿಲ್ಲ. ಭರತ ಭೂಮಿಗೆ ನಮಸ್ಕಾರ ಮಾಡಿ ಹೋಗುತ್ತಾರೆ. ಹಿಂದುಗಳ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಿದ್ದಾರೆ. ಮಸೀದಿ ವಶ ಮಾಡಿಕೊಂಡಿದ್ದಾರಾ ಎಂದು ಏರುದನಿಯಲ್ಲಿ ಪ್ರಶ್ನಿಸಿದರು.
ಮುಂಬರುವ 2028 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಹಿಂದು ಸರ್ಕಾರ ಜಾರಿಯಾಗಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ ಎಂದು ವಿಜಯನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಮರ ತುಷ್ಠಿಕರಣ ಹೆಚ್ಚಾಗಿದೆ. ಕೆಲವರು ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದರೆ, ಮತ್ತೆ ಕೆಲವರು ಮುಸ್ಲಿಂ ಕಾರ್ಯಕ್ರಮದಲ್ಲಿ ಅವರ ಟೋಪಿ ಧರಿಸುತ್ತಾರೆ. ಇದು ರಾಜ್ಯ ಸರ್ಕಾರದಿಂದ ಹಿಂದುಗಳ ರಕ್ಷಣೆಯಾಗುತ್ತಿಲ್ಲವೆಂಬ ಸಂದೇಶ ರವಾನಿಸಿದೆ. ಕಾಂಗ್ರೆಸ್ ಕರ್ನಾಟಕವನ್ನು ಮುಸ್ಲಿಂ ಮಾಡಲು ಹೊರಟಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಇದುವರೆಗೂ ಕಾಂಗ್ರೆಸ್ ಸರ್ಕಾರ ಹಿಂದುಗಳ ಮೇಲಿನ ಒಂದೇ ಒಂದು ಪ್ರಕರಣವನ್ನು ವಾಪಸ್ ಪಡೆದಿಲ್ಲ. ಆದರೆ, ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣದ ಆರೋಪಿಗಳ ಪ್ರಕರಣವನ್ನು ವಾಪಸ್ ಪಡೆಯುತ್ತದೆ. ಕರ್ನಾಟಕದಲ್ಲಿ ಮುಸ್ಲಿಮರ ಬೆಂಬಲದ ಸರ್ಕಾರ ಅಧಿಕಾರ ನಡೆಸುತ್ತಿದೆ. ಈ ಕಾರಣಕ್ಕೆ ಹಿಂದುಗಳು ಜಾಗೃತರಾಗುತ್ತಿದ್ದಾರೆ ಎಂದು ಹೇಳಿದರು.
ಯುವಕರಿಗೆ ಡಿಜೆ ಹಾಕೋದು ಸಹಜ. ಸರ್ಕಾರ ನಿಷೇಧ ಮಾಡಿದೆ ಎಂದರೆ ವಿಚಿತ್ರ. ಒಂದು ಜಿಲ್ಲೆಗೆ ಅನುಮತಿ, ಮತ್ತೊಂದು ಜಿಲ್ಲೆಗೆ ತಾರತಮ್ಯ. ಮಸೀದಿಯ ಸೌಂಡ್ನಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ. ಇದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಯಾವುದೇ ಕ್ರಮವಿಲ್ಲ ಎಂದು ದೂಷಿಸಿದರು.