ಮೂಡಲಗಿ:
ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ ರಸ್ತೆ ಯೋಜನೆಗಳ ಕಾಮಗಾರಿಗಳು ಅನುಷ್ಠಾನದಲ್ಲಿವೆ. ಸೆಪ್ಟೆಂಬರ್ 2024 ರೊಳಗೆ ಹಂತ ಹಂತವಾಗಿ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ರಸ್ತೆಗಳ ನಿರ್ಮಾಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 2020-21 ರಲ್ಲಿ 434.99 ಕೋಟಿ. ರೂ, 2021-22 ರಲ್ಲಿ 442.90 ಕೋಟಿ ರೂ., 2022-23 ರಲ್ಲಿ 465.27 ಕೋಟಿ ರೂ. ಮತ್ತು ಪ್ರಸಕ್ತ ವರ್ಷದಲ್ಲಿ 492.44 ಕೋಟಿ ರೂ.ಗಳನ್ನು ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಬಿಡುಗಡೆ ಮಾಡಲಾಗಿದೆ ಎಂದರು.
ಯೋಜನಾ ಮೇಲ್ವಿಚಾರಣೆ, ಕಾಮಗಾರಿಗಳ ಗುಣಮಟ್ಟದ ಅಗತ್ಯತೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜವಾಬ್ದಾರಿ, ಸ್ವತಂತ್ರ ಪರೀಕ್ಷೆಗಳನ್ನು ನಡೆಸುವುದು, ಪಿ.ಡಬ್ಲ್ಯೂ.ಡಿ ಸಿಬ್ಬಂದಿಗೆ ತರಬೇತಿ ನೀಡುವ ಜವಾಬ್ದಾರಿ ಸೇರಿದಂತೆ ರಾಜ್ಯ ಸರ್ಕಾರದಿಂದ ನೇಮಕಗೊಂಡ ತಜ್ಞರು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿರುವ ಸಿವಿಲ್ ಇಂಜಿನಿಯರ್ನಲ್ಲಿ ಪದವಿ ಮತ್ತು 10 ವರ್ಷಗಳ ಅನುಭವ ಹೊಂದಿರುವ ಸಿವಿಲ್ ಇಂಜಿನಿಯರ್ ಗಳಿಂದ ಕಾಮಗಾರಿಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಮಾಹಿತಿ ನೀಡಿದರು.