ಜೈಪುರ:
ರಾಜಸ್ಥಾನದ ಸೆಕ್ರೆಟರಿಯೇಟ್ ಬಳಿ ಇರುವ ಯೋಜನಾ ಭವನದಲ್ಲಿ ಶುಕ್ರವಾರ ರಾತ್ರಿ ಕೋಟ್ಯಂತರ ರೂಪಾಯಿ ನಗದು ಮತ್ತು 1 ಕೆಜಿ ಚಿನ್ನಾಭರಣ ಸಿಕ್ಕಿದ ನಂತರ ದೊಡ್ಡ ಪ್ರಕರಣ ಬೆಳಕಿಗೆ ಬಂದಿದೆ.
ಯೋಜನಾ ಭವನದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಕಡತಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ನಡೆಯುತ್ತಿದೆ. ಈ ವೇಳೆ ಯೋಜನಾ ಭವನದ ನೆಲಮಾಳಿಗೆಯಲ್ಲಿ ಹಲವು ದಿನಗಳಿಂದ ಮುಚ್ಚಿದ್ದ ಕಬೋರ್ಡ್ ನಿಂದ 2.31 ಕೋಟಿ ರೂ.ಗಳು ಹಾಗೂ ಒಂದು ಕೆಜಿ ಚಿನ್ನದ ಬಿಸ್ಕತ್ ಸಿಕ್ಕಿದೆ.
ನಗದು ವಶಪಡಿಸಿಕೊಂಡ ನಂತರ, ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ದಿನೇಶ್ ಎಂಎನ್ ಮತ್ತು ಜೈಪುರ ಕಮಿಷನರ್ ಆನಂದ್ ಶ್ರೀವಾಸ್ತವ ಅವರು ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ವಿವರಿಸಿದರು.
ಜೈಪುರದಲ್ಲಿ ರಾತ್ರಿ 11 ಗಂಟೆಗೆ ಪೊಲೀಸ್ ಕಮಿಷನರ್ ಆನಂದ್ ಶ್ರೀವಾಸ್ತವ ಅವರು ಯೋಜನಾ ಭವನದಲ್ಲಿರುವ ಡಿಒಐಟಿ ವಿಭಾಗದ ನೆಲಮಾಳಿಗೆಯಿಂದ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಣ ಮತ್ತು ಚಿನ್ನವನ್ನು ಆಧಾರ್ ಕಾರ್ಡ್ಗಳ ಕೆಲಸವನ್ನು ನಿರ್ವಹಿಸುವ ಯುಐಡಿ ವಿಭಾಗದ ಕಬೋರ್ಡ್ನಲ್ಲಿ ಇರಿಸಲಾಗಿತ್ತು. ಲ್ಯಾಪ್ಟಾಪ್ ಬ್ಯಾಗ್ ಮತ್ತು ಟ್ರಾಲಿ ಸೂಟ್ಕೇಸ್ನಿಂದ ಈ ಹಣ ಮತ್ತು ಚಿನ್ನ ಹೊರಬಂದಿದೆ. ಇದರಲ್ಲಿ 500 ಮತ್ತು 2000 ರೂಪಾಯಿ ನೋಟುಗಳು ಮತ್ತು ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ.
ಪೊಲೀಸ್ ಕಮಿಷನರ್ ಆನಂದ ಶ್ರೀವಾಸ್ತವ ಮಾತನಾಡಿ, ಸೆಕ್ರೆಟರಿಯೇಟ್ ನಲ್ಲಿ ಕಡತಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡುವ ಕಾರ್ಯ ನಡೆಯುತ್ತಿದೆ. ಇದರ ಅಡಿಯಲ್ಲಿ, ಡಿಒಐಟಿಯ ಯುಐಟಿ ವಿಭಾಗದ ಫೈಲ್ ಅನ್ನು ಸಹ ಸ್ಕ್ಯಾನ್ ಮಾಡಬೇಕಾಗಿತ್ತು. ಏತನ್ಮಧ್ಯೆ, ಯುಐಟಿ ವಿಭಾಗದ ನೆಲಮಾಳಿಗೆಯಲ್ಲಿ ಇರಿಸಲಾದ ಎರಡು ಕ್ಯಾಬಿನೆಟ್ಗಳ ಕೀಗಳು ಹಲವು ದಿನಗಳಿಂದ ಪತ್ತೆಯಾಗಿಲ್ಲ. ಶುಕ್ರವಾರ ಈ ಅಲ್ಮೇರಾಗಳ ಬೀಗವನ್ನು ಹೊಸ ಕೀಗಳನ್ನು ತಯಾರಿಸಿ ತೆರೆದಾಗ ಇಷ್ಟು ದೊಡ್ಡ ಮೊತ್ತದ ಹಣ ಹಾಗೂ ಚಿನ್ನ ಪತ್ತೆಯಾಗಿದೆ ಎಂದು ತಿಳಿಸಿದರು.
ಡಿಒಐಟಿಯ ಹೆಚ್ಚುವರಿ ನಿರ್ದೇಶಕ ಮಹೇಶ ಗುಪ್ತಾ ಅವರು ಮೊದಲು ಮುಖ್ಯ ಕಾರ್ಯದರ್ಶಿ ಮತ್ತು ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ ಎಂದು ಆನಂದಶ್ರೀವಾಸ್ತವ ಹೇಳಿದ್ದಾರೆ.
ಪೊಲೀಸರು 7-8 ನೌಕರರನ್ನು ವಿಚಾರಣೆ ಮಾಡುತ್ತಿದ್ದು ಇದರೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನೂ ಶೋಧಿಸಲಾಗುತ್ತಿದೆ. ಯಾವ ನೌಕರನಿಗೆ ಪ್ರವೇಶವಿದೆ ಮತ್ತು ಅದರ ನಿರ್ವಹಣೆ ಮತ್ತು ಕೀಗಳನ್ನು ಇಟ್ಟುಕೊಳ್ಳುವ ಹೊಣೆಗಾರಿಕೆ ಯಾರದ್ದು ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಂಪೂರ್ಣ ವಿಷಯವನ್ನು ಬಹಿರಂಗಪಡಿಸುವುದಾಗಿ ಜೈಪುರ ಪೊಲೀಸ್ ಕಮಿಷನರ್ ಹೇಳಿದ್ದಾರೆ.