ಬೆಂಗಳೂರು :
ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಗಳಕ್ಕೆ ಮದ್ದೆರೆಯಲು ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಗಳವಾರ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ರೂಪಾ ಮೌದ್ಗಿಲ್ ಮತ್ತು ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಇಬ್ಬರಿಗೂ ಯಾವುದೇ ಸ್ಥಳ ನಿಯೋಜನೆ ಮಾಡದೇ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
ಕೆಲ ದಿನಗಳಿಂದ ನಡೆಯುತ್ತಿದ್ದ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ತಡೆ ಹಾಕಲು ರಾಜ್ಯ ಸರ್ಕಾರ ಮುಂದಾಗಿತ್ತು. ಇಬ್ಬರೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್ ಜಾರಿಯಾದ ಕೆಲವೇ ಗಂಟೆಗಳಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಈ ಇಬ್ಬರ ಜಗಳದಲ್ಲಿ ರೂಪಾ ಮೌದ್ಗಿಲ್ ಪತಿ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನೂ ಸಹ ವರ್ಗಾವಣೆ ಮಾಡಲಾಗಿದೆ. ಮನೀಶ್ ಮೌದ್ಗಿಲ್ ಅವರು ಸರ್ವೆ ಮತ್ತು ಲ್ಯಾಂಡ್ ರೆಕಾರ್ಡ್ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಸರ್ವೆ ಮತ್ತು ಲ್ಯಾಂಡ್ ರೆಕಾರ್ಡ್ ಇಲಾಖೆಗೆ ಅಲ್ಲಿಯೇ ಹೆಚ್ಚುವರಿ ನಿದೇಶಕರಾಗಿದ್ದ ಸಿ.ಎನ್.ಸುಧೀಂದ್ರ ಅವರನ್ನು ನೇಮಿಸಿದೆ.
ರೂಪಾ ಮೌದ್ಗಿಲ್ ವರ್ಗಾವಣೆಯಿಂದ ತೆರವಾದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಸ್ಥಾನಕ್ಕೆ ಡಿ. ಭಾರತಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ತೆರವಾದ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರ ಹುದ್ದೆಗೆ ಎಚ್. ಬಸವರಾಜೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ. ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ಅವರಿಗೆ ಇನ್ನೂ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ.