ಮಹಾನಗರ ಪಾಲಿಕೆಗೆ ಕಳ್ಳರ ಕಾಟ, ‘ರುದ್ರಪ್ರಶಾಂತ’ ಸಹಕಾರ…!!
ಬೆಳಗಾವಿ :ಟೈಟಲ್ ಟ್ಯಾಗ್ ಓದಿದವರಿಗೆ ಮಜುಗುರುವಾಗುವುದು ನಿಜ..!…..ಆದರೆ ಮಹಾನಗರ ಪಾಲಿಕೆಗೆ ತುಡುಗರ ಕಾಟ ಹೆಚ್ಚಿದ್ದು ಮಾತ್ರ ಸತ್ಯ…..ಕಕ್ಕಸದಲ್ಲಿ ಬೊಕ್ಕಸ ಹುಡುಕುವ ರಕ್ಕಸರನ್ನು ಕಟ್ಟಿಕೊಂಡು ‘ರುದ್ರಪ್ರಶಾಂತ’ವಾಗಿ ಸುಮ್ಮನಿದೆ ಮಹಾಪಾಲಿಕೆ.
ಬಹಳ ದಿನಗಳಿಂದ ಬೀಡುಬಿಟ್ಟು ಬಲಿತಿರುವ ಕಿರಾತಕರು ಯಾರು ಬೇಕಾದವರನ್ನು ನೀಗಿಸಿಕೊಳ್ಳುತ್ತೇನೆ ಎನ್ನುತ್ತಿರುವ ಇವರಿಂದ …ಸ್ವಾಮಿ ಶರಣಂ ಅಯ್ಯಪ್ಪನೇ… ಕಾಪಾಡಬೇಕು.
ವಿಷಯ ಏನೇಂದರೆ ಬೆಳಗಾವಿ ಮಹಾನಗರ ಜನತೆ ಕಕ್ಕಸ ಮಾಡಿ, ಸ್ನಾನ ಮಾಡಿ ಹರಿಬಿಟ್ಟ ಶೌಚದ ನೀರಿನಲ್ಲಿ ನಾಣ್ಯ ಹುಡುಕುತ್ತಿರುವ ಕಳ್ಳರ ಕಾಟವೇ ಇಂದಿನ ಮುಖ್ಯ ವಿಷ್ಯ.
ಮಹಾನಗರ ಪಾಲಿಕೆಗೆ ವರ್ಷಕ್ಕೆ ಕನಿಷ್ಠ 45ರಿಂದ 50 ಲಕ್ಷ ಬರಬೇಕಾದ ಆದಾಯ ಈಗ ಕಳ್ಳರ ಜೇಬು ಸೇರುತ್ತಿದೆ. ಮಹಾನಗರ ಪಾಲಿಕೆಯ ನಾಲ್ಕು ಸೆಪ್ಟಿಂಕ್ ಟ್ಯಾಂಕರ್(sucking machines) ಗಳಿಗೆ ಕೆಲಸ ಇಲ್ಲವಾಗಿದೆ. ಪ್ರತಿ ಬ್ರಾಸ್ ಗೆ ಕನಿಷ್ಠ ₹3 ಸಾವಿರ ದುಡಿಯುತ್ತ ವರ್ಷಕ್ಕೆ 50 ಲಕ್ಷ ಮಹಾನಗರ ಪಾಲಿಕೆಗೆ ಲಾಭ ತರುತ್ತಿದ್ದ ವಾಹನಗಳನ್ನು ಮೂಲೆಗೆ ತಳ್ಳಲಾಗಿದೆ.
ಇಲ್ಲಿಯ ಮಹಾರಾಜರ ರಥಸಾರಥಿಗಳು ಈಗ ಇಂತಹ ಬಗೆಯ ಖಾಸಗಿ(Private) ವಾಹನಗಳನ್ನು ಇಟ್ಟುಕೊಂಡು ತಮ್ಮ ಖಾಸಗಿ ವಾಹನಗಳ ಕರೆ ಸಂಖ್ಯೆ(calling number)ಕೊಟ್ಟು ಸ್ವ- ಆದಾಯ ಶುರು ಮಾಡಿಕೊಂಡಿದ್ದಾರೆ.
ಇದನ್ನು ಅರಿತರೂ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಆಗಲಿ, ಕಂದಾಯ ಅಧಿಕಾರಿ ಪ್ರಶಾಂತ ಇಬ್ಬರೂ ರುದ್ರಪ್ರಶಾಂತವಾಗಿರುವುದು ತೀವ್ರ ಭಾಸ ಮೂಡಿಸಿದೆ.
ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ಗಾಗಿ ಸಾರ್ವಜನಿಕರ ಕರೆಗಳು ಮಹಾನಗರ ಪಾಲಿಕೆಯ ಹೆಲ್ಪ್ ಲೈನ್ ಗೆ ಬರಬೇಕಿತ್ತು. ಆದ್ರೆ ದುರದೃಷ್ಟವಶಾತ್ ಮಹಾನಗರ ಪಾಲಿಕೆಯ ಅನ್ನ ಉಂಡು ಅಲ್ಲೇ ನೆರಳು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕಿರಾತಕರ ಒಡೆತನದ ಪ್ರೈವೇಟ್ ಸಕ್ಕಿಂಗ್ ಮಷಿನ್ ವಾಹನಗಳಿಗೆ ಕರೆ ಹೋಗುತ್ತಿರುವುದು ದುರಂತ.
ಮಾಜಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಡಗೌಡರ ಕಾಲದಲ್ಲಿ ಪ್ರೈವೇಟ್ ವಾಹನಗಳ ಕಳ್ಳಾಟ ಸುತಾರಾಂ ನಡೆಯುತ್ತಿರಲಿಲ್ಲ. ಪ್ರಸ್ತುತ ಆರೋಗ್ಯಾಧಿಕಾರಿ ಡಾ. ಸಂಜೀವ ಡುಮ್ಮಗೋಳ ಅವಧಿಯಲ್ಲಿ ಈ ವಾಹನಗಳು ಆರೋಗ್ಯ ವಿಭಾಗದ ಸುಪರ್ಧಿಗೆ ಇಲ್ಲವೇ ಇಲ್ಲ. ಲೋಕೋಪಯೋಗಿ ವಿಭಾಗಕ್ಕೆ ವರ್ಗಾಯಿಸಲಾಗಿದೆಯಂತೆ..!
ಮತ್ತೆ ಪಾಲಿಕೆ ಚೇಂಬರ್ ನಲ್ಲೇ ಹೊಯ್ಯುವರಯ್ಯ*: ಈ ಖಾಸಗಿ ವಾಹನಗಳು ಸಾರ್ವಜನಿಕ ಸೆಪ್ಟಿಂಕ್ ಟ್ಯಾಂಕ್ ನಿಂದ ಮಲಮೂತ್ರ ತುಂಬಿಕೊಂಡು ಮತ್ತೊಂದು ಪ್ರದೇಶದ ಮಹಾನಗರ ಪಾಲಿಕೆಯ ಸೆಪ್ಟಿಂಕ್ ಟ್ಯಾಂಕ್ ಚೇಂಬರ್ ನಲ್ಲಿ ಬಿಡುತ್ತಿದ್ದಾರೆ. ಇಂತಹ ಘೋರ ಅನರ್ಥ ನಡೆದಿದ್ದರೂ ಪಾಲಿಕೆ ಆಯುಕ್ತ ಮತ್ತು ಕೆಲಸಕ್ಕೆ ಬಾರದ ಇತರ ಅಧಿಕಾರಿಗಳು ಏನು ಅರಿಯದವರಂತೆ ಸಹಕಾರ ನೀಡುತ್ತಿರುವುದು ಗುಮಾನಿ ಬಂದಿದೆ. ಜನರೇಟರ್ ಮತ್ತು ವಾಹನಗಳ ಡಿಸೇಲ್ ಕದ್ದು ಮಾರುವ ದಂಧೆ & ಸೆಪ್ಟಿಂಕ್ ಟ್ಯಾಂಕ್ ಸಕ್ಕಿಂಗ್ ಮಷಿನ್ ಗಳ ಖಾಸಗಿ ದಂಧೆ ನಡೆಸಿರುವವರು ಮತ್ತು ಕಚೇರಿಯಲ್ಲಿ ಸಹಕಾರ ನೀಡುತ್ತ ‘ಗುಂಪುಸುಲಿಗೆ’ ನಡೆಸಿರುವ ಸಮಾನ ಮನಸ್ಕರ ಬಳಗದ ಜುಟ್ಟು ಆಯುಕ್ತ ರುದ್ರೇಶ ಘಾಳಿ ತತಕ್ಷಣ ಹಿಡಿದೆಳೆಯದಿದ್ದರೆ ಅನುಮಾನದ ಹುತ್ತ ಆಯುಕ್ತರ ಭುಜದಿಂದ ಮುಡಿಗೇರಲಿದೆ.
ಸಾರ್ವಜನಿಕರು ಎಚ್ಚೆತ್ತು ಮಹಾನಗರ ಪಾಲಿಕೆಯನ್ನು ‘ತುಡುಗರು’ ಮತ್ತು ‘ಗುಂಪುಸುಲಿಗೆ’ ಕೋರರಿಂದ ರಕ್ಷಿಸಿ ಲಾಭದತ್ತ ಕೊಂಡೊಯ್ಯಬೇಕೆಂದರೆ ನಗರದ ಉತ್ತರ-ದಕ್ಷಿಣ ಪಾಲಿಕೆಯ ಅಧಿಕೃತ ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ಸಹಾಯವಾಣಿ:
9481504229
(Sucking vehicle)
0831-2405337 ಕರೆ ಮಾಡಿ ಸೇವೆ ಪಡೆಯಬೇಕಿದೆ.