ದೆಹಲಿ :
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ರಣತಂತ್ರ ಹೆಣೆಯಲು ಮುಂದಾಗಿವೆ. ಈ ನಿಟ್ಟಿನಲ್ಲಿ ಅತಿರಥ ಮಹಾರಥ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಲು ಸಜ್ಜಾಗಿವೆ.
ಶುಕ್ರವಾರ, ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮಹತ್ವದ ಸಭೆಗೆ ಮೊದಲು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಗುರುವಾರ ವಿರೋಧ ಪಕ್ಷದ ಮೈತ್ರಿ ವಿರುದ್ಧ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. “ದಿಲ್ ಮಿಲೇ ನಾ ಮಿಲೇ, ಹಾಥ್ ಮಿಲಾತೆ ರಹಿಯೇ (ಹೃದಯ ಬೆಸೆಯುತ್ತಿದೆಯೋ ಇಲ್ಲವೋ ಆದರೆ ಕೈ ಕುಲುಕುತ್ತಿರಿ” ಎಂದು ಮಾಯಾವತಿ ಅವರು ನಿದಾ ಫಜ್ಲಿ ಅವರ ಮಾತನ್ನು ಉಲ್ಲೇಖಿಸಿ ಪ್ರತಿಪಕ್ಷಗಳ ಈ ಸಭೆ ಬಗ್ಗೆ ವಾಗ್ದಾಳಿ ಮಾಡಿದ್ದಾರೆ.
2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಮೈತ್ರಿಗೆ ಸಿದ್ಧತೆ ಮಾಡಿಕೊಳ್ಳುವ ಮುನ್ನವೇ ಈ ಪಕ್ಷಗಳು ತಮ್ಮ ಮನಸ್ಸು ಮತ್ತು ಉದ್ದೇಶವನ್ನು ತಿಳಿಸಿದ್ದರೆ ಉತ್ತಮವಾಗಿತ್ತು. ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳು ನಿರ್ಣಾಯಕವಾಗಿದ್ದರೂ, ಪಕ್ಷಗಳ ಧೋರಣೆಯಿಂದಾಗಿ ಅದು ಹಾಗೆ ಕಾಣುತ್ತಿಲ್ಲ. ವಿರೋಧ ಪಕ್ಷಗಳು, ಅವು ಗಂಭೀರವಾಗಿವೆಯೇ? ಸರಿಯಾದ ಆದ್ಯತೆಗಳಿಲ್ಲದೆ, ಏನಾದರೂ ಬದಲಾವಣೆಯಾಗುವುದೇ?” ಮಾಯಾವತಿ ಸುದೀರ್ಘ ಟ್ವಿಟ್ಟರ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಆದರೆ ಜನತಾ ದಳ (ಯುನೈಟೆಡ್), ಮಾಯಾವತಿ ಅವರ ಪಕ್ಷವನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ಸಮರ್ಥಿಸಿಕೊಂಡಿದೆ.
ಆರ್ಎಲ್ಡಿ ಅಧ್ಯಕ್ಷ ಜಯಂತ್ ಚೌಧರಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರಿಗೆ ಪತ್ರ ಬರೆದು ಪೂರ್ವ ನಿರ್ಧಾರಿತ ಕುಟುಂಬ ಕಾರ್ಯಕ್ರಮದ ಕಾರಣ ಪಾಟ್ನಾ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕರ ಬೃಹತ್ ಸಭೆಯು ನಿತೀಶಕುಮಾರ ಅವರು ಹಲವಾರು ವಿರೋಧ ಪಕ್ಷದ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಗಳ ನಂತರ ನಡೆಯುತ್ತಿದೆ ಮತ್ತು ಚುನಾವಣೆಗೆ ಮುಂಚಿತವಾಗಿ ಒಂದು ಪ್ರತಿಪಕ್ಷಗಳ ಸಂಯುಕ್ತ ಒಕ್ಕೂಟಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಪ್ರತಿಪಕ್ಷಗಳ ಒಗ್ಗಟ್ಟಿನ ಗುರಿಯತ್ತ ಇದು ಮೊದಲ ಸಭೆಯಾಗಿದೆ. ಇದರಲ್ಲಿ ರಾಹುಲ್ ಗಾಂಧಿ ಭಾಗವಹಿಸುವ ಸಾಧ್ಯತೆಯಿದೆ.
ಯಾರೆಲ್ಲ ಭಾಗವಹಿಸಲಿದ್ದಾರೆ..?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಸಂಸದ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೆನ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್ಸಿಪಿ ಮುಖ್ಯಸ್ಥ ಶರದ ಪವಾರ್ , ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದಾರೆ. 20 ಪಕ್ಷಗಳ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಿರ್ಣಾಯಕ ಸಭೆಗೆ ಮುಂಚಿತವಾಗಿ, ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾವು ಮಹಾಘಟಬಂಧನದಿಂದ ನಿರ್ಗಮಿಸಿದೆ ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ ಜೊತೆ ಕೈಜೋಡಿಸಿದೆ.