ಹುಬ್ಬಳ್ಳಿ: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ವಿಚಾರಕ್ಕೆ ಸಿಟ್ಟಿಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವೇದಿಕೆಯಲ್ಲೇ ಅಪಮಾನಕ್ಕೀಡಾದ ಧಾರವಾಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ನಾರಾಯಣ ಬರಮನಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದು ಈಗಾಗಲೇ ಈ ಕುರಿತು ಇಲಾಖೆಗೆ 2 ಪುಟಗಳ ರಾಜೀನಾಮೆ ಪತ್ರ ಕೂಡ ಬರೆದಿದ್ದಾರೆ.
ನಾರಾಯಣ ಬರಮನಿ ಅವರು ವಿಆರ್ಎಸ್ ಕೋರಿ ಬರೆದಿರುವ ಪತ್ರದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುವುದರಿಂದ ಅದನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಅವರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ. ಎನ್.ವಿ.ಬರಮನಿ ಅವರು ತಮ್ಮ ವಿಆರ್ಎಸ್ ಪತ್ರದಲ್ಲಿ ತಮಗಾದ ಅವಮಾನ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಸಮ್ಮುಖದಲ್ಲೇ ಅವರಿಗೆ ರಾಜೀನಾಮೆ ಪತ್ರ ಹಿಂಪಡೆಯುವಂತೆ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ಸಿಎಂ, ಗೃಹ ಸಚಿವರು ಈ ವಿಷಯವಾಗಿ ಬರಮನಿ ಅವರ ಜತೆ ಮಾತುಕತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾರಣಾಂತರಗಳಿಂದ ಸ್ವಯಂ ನಿವೃತ್ತಿ: ನಾರಾಯಣ ಬರಮನಿ
ಕೆಲ ಕಾರಣಾಂತರಗಳಿಂದ ಸ್ವಯಂ ನಿವೃತ್ತಿ ಪಡೆಯಲು ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕರೆದು ಈ ವಿಷಯವಾಗಿ ಮಾತನಾಡಿಸಿ ಸದ್ಯಕ್ಕೆ ಈ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಅದು ಪೆಂಡಿಂಗ್ ಇದೆ ಎಂದು ಧಾರವಾಡ ಜಿಲ್ಲಾ ಎಎಸ್ಪಿ ನಾರಾಯಣ ಬರಮನಿ ಹೇಳಿದ್ದಾರೆ.
ನಿವೃತ್ತಿಗೆ ಮುಂದಾಗಿದ್ದು ನೋವಿನ ಸಂಗತಿ: ಬಿಜೆಪಿ
ದುರಂಹಕಾರಿ ಸಿಎಂ ಸಿದ್ದರಾಮಯ್ಯರಿಂದ ಸಾರ್ವಜನಿಕವಾಗಿ ಅವಮಾನಕ್ಕೆ ಒಳಗಾಗಿದ್ದ ಧಾರವಾಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ!!. ದಕ್ಷತೆ, ಪ್ರಾಮಾಣಿಕತೆ, ಶ್ರದ್ಧೆಯಿಂದ ಕೆಲಸ ಮಾಡುವವರಿಗೆ ಸಾರ್ವಜನಿಕವಾಗಿ ಅವಮಾನಿಸದರೆ ಏನಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಬಿಜೆಪಿ ಟೀಕಿಸಿದೆ.
ಇನ್ನು ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ ಬಹಿರಂಗ ಸಭೆಯಲ್ಲಿ ಸಿಎಂ ಅವಹೇಳನ ಮಾಡಿದರೆಂಬ ಕಾರಣಕ್ಕೆ ನೊಂದು ಎಎಸ್ಪಿ ನಾರಾಯಣ ಬರಮನಿ, ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ , ಸಿಎಂ ಬಹಿರಂಗವಾಗಿಯೇ ಹೀಗೆ ನಡೆದುಕೊಂಡಿದ್ದಾರೆ. ಇನ್ನು ನಾಲ್ಕು ಗೋಡೆಗಳ ಮಧ್ಯೆ ಅಧಿಕಾರಿಗಳನ್ನು ಹೇಗೆ ನಡೆಸಿಕೊಳ್ಳಬಹುದು ? ಜನರಿಗಷ್ಟೇ ಅಲ್ಲ, ಅಧಿಕಾರಿಗಳಿಗೂ ಈ ಸರ್ಕಾರದ ಮೇಲಿನ ವಿಶ್ವಾಸ ಹೋಗಿದೆ.