ಬೆಂಗಳೂರು: ಹಿರಿಯ ಸಚಿವ ಕೆ.ಎನ್.ರಾಜಣ್ಣ ಅವರು ಸೋಮವಾರ (ಆ.11) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಮತಕಳ್ಳತನ ಆರೋಪದ ವಿಚಾರದಲ್ಲಿ ರಾಜಣ್ಣ ಅವರು ಪಕ್ಷದ ವಿರುದ್ಧದವೇ ಮಾತನಾಡಿದ್ದರು. “ಮತ ಕಳ್ಳತನ ನಡೆದಿರುವುದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೆ ಈಗ ಹೇಳುತ್ತಿರುವುದು ನಮಗೆ ನಾಚಿಕೆಯಾಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ದರಾ ಎಂದು ಮಧುಗಿರಿ ಶಾಸಕ ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.
ಈ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್ ಕಣ್ಣು ಕೆಂಪಗಾಗಿಸಿತ್ತು ಎನ್ನಲಾಗಿದೆ. ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ರಾಜಣ್ಣರಿಂದ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿತ್ತು ಎನ್ನಲಾಗಿದೆ.
ಸಹಕಾರ ಸಚಿವರಾಗಿದ್ದ ಕೆ.ಎನ್ ರಾಜಣ್ಣ ಅವರು ಕಳೆದ ಹಲವು ತಿಂಗಳಿನಿಂದ ಸಪ್ಟೆಂಬರ್ ಕ್ರಾಂತಿಯ ಬಗ್ಗೆ ಹೇಳಿಕೆ ನೀಡುತ್ತಿದ್ದರು. ಅಲ್ಲದೆ ಹನಿ ಟ್ರ್ಯಾಪ್ ವಿಚಾರದಲ್ಲಿಯೂ ಸರ್ಕಾರಕ್ಕೆ ಮುಜುಗರ ತಂದಿದ್ದರು.