ಬೆಂಗಳೂರು:
ಹಿಂದುಳಿದ ವರ್ಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವ ಕುರಿತು ರಚಿಸಲಾಗಿದ್ದು ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿಯು ನೀಡಿದ್ದ 5 ಶಿಫಾರಸುಗಳ ಪೈಕಿ ಮೂರು ಶಿಫಾರಸ್ಸಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಏಳು ವಿಷಯ ಪರಿಗಣಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕೆ ರಚಿಸಲಾಗಿದ್ದ ಭಕ್ತವತ್ಸಲ ಸಮಿತಿಯ 5 ಶಿಫಾರಸುಗಳ ಪೈಕಿ ಮೂರು ಶಿಫಾರಸ್ಸಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಚುನಾವಣೆ ನಿರ್ವಹಣೆ, ಆಡಳಿತ ಸುಧಾರಣಾ ಇಲಾಖಾ ವ್ಯಾಪ್ತಿಗೆ ತರುವ ಶಿಫಾರಸ್ಸನ್ನು ಕ್ಯಾಬಿನೆಟ್ ಒಪ್ಪಿದೆ. ಈ ಹಿಂದೆ ಪಂಚಾಯತ್ ರಾಜ್ ಇಲಾಖೆ ಜೊತೆಗೆ ಚುನಾವಣಾ ಆಯೋಗ ಸಮನ್ವಯ ಸಾಧಿಸುತ್ತಿತ್ತು. ಇದೀಗ ಆಡಳಿತ ಸುಧಾರಣಾ ಇಲಾಖೆ ಅಡಿಯಲ್ಲಿ ನಿರ್ವಹಣೆ ಮಾಡಲಾಗುತ್ತದೆ. ರಾಜ್ಯ ಮುಖ್ಯ ಚುನಾವಣಾ ಆಯೋಗ ಕೂಡ ಇನ್ನು ಮುಂದೆ ಆಡಳಿತ ಸುಧಾರಣಾ ಇಲಾಖೆ ಜೊತೆಗೆ ಬಗ್ಗೆ ಚರ್ಚೆ ನಡೆಸಲಿದೆ ಎಂದರು.
ಸುಪ್ರಿಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ 5 ಶಿಫಾರಸ್ಸುಗಳ ಪೈಕಿ ಮೂರು ಶಿಫಾರಸ್ಸಿಗೆ ಸಂಪುಟ ಒಪ್ಪಿದೆ ಎಂದು ತಿಳಿಸಿದರು.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಹಬ್ ಮತ್ತು ಸ್ಪೋಕ್ಸ್ ಮಾದರಿಯಲ್ಲಿ ಬ್ರೇನ್ ಹೆಲ್ತ್ ಇನಿಶಿಯೇಟಿವ್ ಪ್ರೊಗ್ರಾಂಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಬ್ರೇನ್ ಹೆಲ್ತ್ ಇನಿಶಿಯೇಟಿವ್ ಅಡಿಯಲ್ಲಿ ಮೆದುಳಿನ ಆರೋಗ್ಯ, ಆರೈಕೆ, ತಲೆನೋವು ಹಾಗೂ ಒತ್ತಡ ನಿರ್ವಹಣೆ ಸೇರಿ ಹಲವು ಕಾರ್ಯಕ್ರಮಗಳಿಗೆ ಬ್ರೇನ್ ಹೆಲ್ತ್ ಇನಿಶಿಯೇಟಿವ್ ಅನುವು ಮಾಡಿಕೊಡಲಿದೆ ಎಂದರು.