ಬೆಳಗಾವಿ :
ಪುರವಂತರಿಗೆ ಮಾಸಾಶನ ನೀಡಲು ಸರಕಾರಕ್ಕೆ ರಂಗಕರ್ಮಿ ಬಿ.ಎಸ್.ಗವಿಮಠ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರಂತೆ ನಮ್ಮ ಉತ್ತರ ಕರ್ನಾಟಕದ ಪುರವಂತರೂ ವಿಶೇಷ ಪ್ರತಿಭೆಯುಳ್ಳ ಕಲಾವಿದರು. ತಲೆ-ತಲಾಂತರಗಳಿಂದ ನಮ್ಮ ಹಿಂದೂ ಸಂಸ್ಕೃತಿ-ಪರಂಪರೆಗೆ ಸಾಕ್ಷಿಯಾದವರು. ಲಿಂಗಾಯತರು ವಿಶೇಷವಾಗಿ ಮದುವೆಗಳನ್ನು ನಡೆಸುವ ಮುಂಚೆ ಗುಗ್ಗಳ ಕಾರ್ಯಕ್ರಮವನ್ನು ತಪ್ಪದೆ ಆಯೋಜಿಸುತ್ತಾರೆ. ಅದೊಂದು ರೀತಿಯಲ್ಲಿ ಲಿಂಗಾಯತರು ಶಿವನಿಗೆ “ನಾನು ಅನ್ಯಾಯ ಮಾಡಲಾರೆ, ಅರ್ಮದಿಂದ ನಡೆದುಕೊಳ್ಳುವದಿಲ್ಲ” ಎಂಬ ಪ್ರಮಾಣ ಮಾಡಿದಂತೆ ಇರುತ್ತದೆ.
ರಾಘವಾಂಕನ ವೀರೇಶ ಚರಿತ್ರೆಯಲ್ಲಿ ಓದಿದಂತೆ ಪಾರ್ವತಿಯ ತಂದೆ ದಕ್ಷಬ್ರಹ್ಮನು ಹೂಡಿದ ಯಜ್ಞಕ್ಕೆ ಎಲ್ಲ ಋಷಿ-ಮಹರ್ಷಿಗಳಿಗೆ ಆಮಂತ್ರಣವಿರುತ್ತದೆ. ಆದರೆ ಶಿವನಿಗೆ ಆಮಂತ್ರಣ ಇರುವದಿಲ್ಲ. ಋಷಿಮುನಿಗಳು ಶಿವನಿಲ್ಲದ ಯಾಗ ಎಂಥಹದು ಎಂದು ಮೂದಲಿಸುತ್ತಾರೆ. ಆಗ ಶಿವನ ಹೆಂಡತಿ-ಪಾರ್ವತಿ ಯಾಗದ ಬೆಂಕಿಯಲ್ಲಿ ಹಾರಿಕೊಳ್ಳುತ್ತಾಳೆ. ಆಗ ಶಿವನು ಎಚ್ಚರಗೊಂಡು ಕೋಪಗೊಂಡಾಗ ಶಿವನ ಜಡೆಯಿಂದ ವೀರಭದ್ರ ಉದಯಿಸುತ್ತಾನೆ. ಆ ವೀರಭದ್ರನೇ ದಕ್ಷಬ್ರಹ್ಮನ ಸಂಹಾರ ಮಾಡುತ್ತಾನೆ. ಮುಂದೆ ಆ ವೀರಭದ್ರನು ಅಂಕಲಿ ಸಮೀಪದ ಯಡೂರು, ಚಂದರಗಿ ಸಮೀಪದ ಗೊಡಚಿ ಕ್ಷೇತ್ರದಲ್ಲಿ ಬಂದು ನೆಲೆಸುತ್ತಾನೆ.
ದಕ್ಷ- ಬ್ರಹ್ಮನ ತಲೆ ತೆಗೆದು ಕುರಿತಲೆ ಜೋಡಿಸುತ್ತಾರೆಂಬುದೂ ಬರುತ್ತದೆ. ವೀರಭದ್ರ ಖಡಕ್ ದೇವರು. ಅನ್ಯಾಯ-ಅಧರ್ಮ ಅವನಿರುವಲ್ಲಿ ನಡೆಯದು, ಈ ವೀರಭದ್ರನ ಪ್ರತಿನಿಧಿಗಳೇ ಪುರವಂತರು. ಶಿವನ ಮಾನಸಪುತ್ರರು. ಇವರು ವಿಶಿಷ್ಟವಾದ ವೇಷಭೂಷಣ ತೊಟ್ಟು, ಹಿಂದೆ-ಮುಂದೆ ಹೆಜ್ಜೆ ಇಕ್ಕುತ್ತ, ಚಕ್ರಾಕಾರವಾಗಿ ನರ್ತಿಸುತ್ತ, ಖಡೇ ಖಡೇ ರುದ್ರ ಎಂದು ಘೋಷಣೆ ಹಾಕುತ್ತ ಒಡಬುಗಳನ್ನು ಹೇಳುತ್ತಾರೆ. ಅವು ಬೆಡಗಿನ ವಚನಗಳೂ ಅಹುದು. ಅವುಗಳ ಗೂಢಾರ್ಥ ತಿಳಿಯುವದು ಕಷ್ಟ. ಈ ಪುರವಂತರು ಉತ್ತರ ಕರ್ನಾಟಕದಲ್ಲಿ ಶಸ್ತ್ರ ಚುಚ್ಚಿಕೊಳ್ಳುತ್ತಾರೆ, ಆದರೆ ಅವರಿಗೆ ಯಾವ ಗಾಯವಾಗದು, ರಕ್ತ ಸುರಿಯದು. ಮೈಸೂರು ಕಡೆಗೆ ಪುರವಂತರು ತೆಂಗುಗಳನ್ನು ಗಾಳಿಗೆ ತೂರಿ ಖಡ್ಗದಿಂದ ತುಂಡರಿಸುತ್ತಾರೆ. ಬಹುತೇಕರ ಮನೆ ದೇವರು ಶ್ರೀ ವೀರಭದ್ರ-ಈರಣ್ಣ-ವೀರಣ್ಣ. ಇಂಥ ವೀರಣ್ಣನ ಪರಂಪರೆಗೆ ಸಾಕ್ಷಿಯಾಗಿ ಬದುಕುತ್ತಿರುವ ಪುರವಂತರ ಆರ್ಥಿಕ ಸ್ಥಿತಿ ತುಂಬ ಶೋಚನೀಯವಾಗಿದೆ. ಎರಡು ಹೊತ್ತಿನ ಕೂಳಿಗೆ ಪರದಾಡುತ್ತಾರೆ. ಅವರ ವೇಷಭೂಷಣ ಎಣ್ಣೆಕಮಟವಾಗಿದ್ದರೂ ಕಳೆದ ಅನೇಕ ವರ್ಷಗಳಿಂದ ಹೊಸದನ್ನು ಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.
ಕಾರಣ ಕರ್ನಾಟಕ ಸರಕಾರ ಯಕ್ಷಗಾನ ಕಲಾವಿದರಿಗೆ ಮಾಸಾಶನ ನೀಡಲು ನಿರ್ಧರಿಸಿರುವಂತೆ ಪುರವಂತರಿಗೂ ಮಾಸಾಶನ ನೀಡಬೇಕು. ನಮ್ಮ ಭಾಗದ ಶಾಸಕರು-ಮಂತ್ರಿಗಳು ಇದಕ್ಕಾಗಿ ಆಗ್ರಹಿಸಬೇಕು. ಮುಜರಾಯಿ ಇಲಾಖೆಯ ಮಂತ್ರಿಗಳು ನಮ್ಮವರೇ ಆಗಿದ್ದಾರೆ. ಅವರಿಗೆ ಯಡೂರು ತುಂಬ ಸಮೀಪ. ಅವರಿಗೆ ಪುರವಂತರ ಮಾಹಿತಿ ಇದೆ. ಆದ್ದರಿಂದ ಅವರು ವಿಶೇಷ ಪ್ರಯತ್ನ ಮಾಡಿ ಪುರವಂತರಿಗೆ ಮಾಸಾಶನ ಕೊಡಿಸಲಿ ಎಂದು ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.