ಮೈಸೂರು:
ಖ್ಯಾತ ವಿಮರ್ಶಕ ಜಿ.ಎಚ್.ನಾಯಕ (88 ವರ್ಷ ವಯಸ್ಸು) ಶುಕ್ರವಾರ ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ ಮೀರಾ ನಾಯಕ, ಪುತ್ರಿ ಕೀರ್ತಿ ಹಾಗೂ ಮೊಮ್ಮಗಳು ಇದ್ದಾರೆ.
ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅವರ ಪೂರ್ಣ ಹೆಸರು ಗೋವಿಂದರಾಯ ಹಮ್ಮಣ್ಣ ನಾಯಕ. 1935ರ ಸೆ.18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಅವರು ಮೈಸೂರಿನಲ್ಲಿ ನೆಲೆಸಿದ್ದರು.
ಕೃತಿಗಳು
ಸಮಕಾಲೀನ (೧೯೭೩)
ಅನಿವಾರ್ಯ (೧೯೮೦)
ನಿರಪೇಕ್ಷೆ (೧೯೮೪)
ನಿಜದನಿ (೧೯೮೮)
ವಿನಯ ವಿಮರ್ಶೆ (೧೯೯೧)
ಸಕಾಲಿಕ (೧೯೯೫)
ಗುಣ ಗೌರವ (೨೦೦೨)
ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (೨೦೦೨)
ಕೃತಿ ಸಾಕ್ಷಿ (೨೦೦೬)
ಸ್ಥಿತಿ ಪ್ರಜ್ಞೆ (೨೦೦೭)
ಮತ್ತೆ ಮತ್ತೆ ಪಂಪ (೨೦೦೮)
ಸಾಹಿತ್ಯ ಸಮೀಕ್ಷೆ (೨೦೦೯)
ಉತ್ತರಾರ್ಧ (೨೦೧೧)
ಸಂಪಾದನೆ
ಕನ್ನಡ ಸಣ್ಣಕಥೆಗಳು
ಹೊಸಗನ್ನಡ ಕವಿತೆಗಳು
ಸಂವೇದನೆ (ಅಡಿಗರ ಗೌರವ ಗ್ರಂಥ)
ಶ್ರೀರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ
ಶತಮಾನದ ಕನ್ನಡ ಸಾಹಿತ್ಯ (ಸಂಪುಟ – ೧.೨)
ಆತ್ಮಕಥನ- ಬಾಳು
ಪ್ರಶಸ್ತಿಗಳು
ಉತ್ತರಾರ್ಧ ಕೃತಿಗೆ 2014 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ನಿರಪೇಕ್ಷ ವಿಮರ್ಶಾ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿ,
ನಿಜದನಿ ವಿಮರ್ಶಾ ಕೃತಿಗೆ ‘ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ’ ಲಭಿಸಿವೆ.
ಪಂಪ ಪ್ರಶಸ್ತಿ ಪುರಸ್ಕೃತರೂ ಆಗಿದ್ದರು. ವಯೋಸಹಜ ಕಾರಣಗಳಿಂದ ಅವರು ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಲೇಖಕ, ವಿಮರ್ಶಕ ಜಿ.ಹೆಚ್. ನಾಯಕ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ
ಬೆಂಗಳೂರು:
ಖ್ಯಾತ ಲೇಖಕರು ಮತ್ತು ವಿಮರ್ಶಕರಾದ ಜಿ.ಹೆಚ್ ನಾಯಕ್ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ಕನ್ನಡದ ಲೇಖಕರು, ಸಾಹಿತ್ಯ ವಿಮರ್ಶೆ, ವಿಶ್ಲೇಷಣೆಗೆ ಹೆಸರುವಾಸಿಯಾಗಿದ್ದ ನಾಯಕ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಅವರೊಬ್ಬ ನಿಷ್ಠುರ ವಿಮರ್ಶಕರು, ಪ್ರಗತಿಪರ ಚಿಂತಕರಾಗಿದ್ದವರು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿಅಪಾರ ಸೇವೆ ಸಲ್ಲಿಸಿದ್ದಾರೆ.
ಸಮಕಾಲೀನ ಅನೇಕ ವಿಮರ್ಶಾ ಕೃತಿಗಳು, ಸಾಹಿತ್ಯ ಕೃತಿಗಳನ್ನು ಸಂಪಾದಿಸಿದ ನಾಯಕ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸಾಹಿತ್ಯ ವಿಮರ್ಶೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಆಪ್ತರಿಗೆ ಭರಿಸುವ ಶಕ್ತಿಯನ್ನು ಕರುಣಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಗಳಲ್ಲಿ ತಿಳಿಸಿದ್ದಾರೆ.