ಬೆಳಗಾವಿ :ಸಪ್ತರ್ಷಿಗಳ ತ್ಯಾಗದ ಫಲವಾಗಿ ಕೆಎಲ್ ಇ ಸಂಸ್ಥೆ ಇಂದು ಅದ್ವಿತೀಯವಾದ ಪ್ರಗತಿ ಸಾಧಿಸಿ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಬಣ್ಣಿಸಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಎಲ್ಇ ಸಂಸ್ಥೆಯ ಸಿಬ್ಬಂದಿ ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಅವರು ಶನಿವಾರ ಮಾತನಾಡಿದರು.
ಒಂದು ಸಂಸ್ಥೆ ಮೇಲೆ ಏರುತ್ತದೆ ಎನ್ನುತ್ತಿರುವಾಗ ಅದನ್ನು ಕೆಳಕ್ಕೆ ತಳ್ಳುವವರೇ ಹೆಚ್ಚಿರುತ್ತಾರೆ. ಅದು ನಮ್ಮ ಸಮಾಜಕ್ಕೆ ಅಂಟಿದ ಶಾಪವಿರಬಹುದು. ಆದರೆ ಕೆಎಲ್ ಇ ಸಂಸ್ಥೆ ಹುಟ್ಟು ಹಾಕಿದವರ ತ್ಯಾಗ ಫಲದ ಪರಿಣಾಮವಾಗಿ ಇಂದು ಯಾವುದೇ ಅಡೆ-ತಡೆ ಇಲ್ಲದೆ ಉತ್ತುಂಗದಲ್ಲಿ ಸಾಗುತ್ತಿರುವುದು ನಿಜಕ್ಕೂ ಅಭಿನಂದನೆಯ ಈ ಬಗ್ಗೆ ಹೆಮ್ಮೆ ಎನಿಸುತ್ತದೆ
ಕೆಎಲ್ ಇ ಸಂಸ್ಥೆಯಲ್ಲಿ ಇಂದು ಲಕ್ಷಾಂತರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದು ಸಂಸ್ಥೆಯ ಏಳಿಗೆಗೆ ಸಾಕ್ಷಿಯಾಗಿದೆ. ಕೆಎಲ್ಇ ಸಂಸ್ಥೆಯನ್ನು ಹುಟ್ಟು ಹಾಕಿದ ಸಪ್ತರ್ಷಿಗಳು ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ವಹಿಸಿದ ಶ್ರಮ ಅಷ್ಟಿಷ್ಟಲ್ಲ, ಭಿಕ್ಷೆ ಬೇಡಿಯೂ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರು ತಮ್ಮ ತ್ಯಾಗದ ಫಲವಾಗಿ ಸಂಸ್ಥೆಯನ್ನು ಕಟ್ಟಿದ್ದಾರೆ. ಅವರಲ್ಲಿ ಕೆಲವರು ಇಂಗ್ಲೆಂಡ್ ನಲ್ಲಿ ಓದಿದವರು. ಇನ್ನು ಕೆಲವರು ಉನ್ನತ ವ್ಯಾಸಂಗವನ್ನು ಪಡೆದವರಾಗಿದ್ದಾರೆ. ಅವರೆಲ್ಲರೂ ಮನಸ್ಸು ಮಾಡಿದ್ದರೆ ಅವರೇ ಸ್ವತಃ ಉನ್ನತ ಉದ್ಯೋಗಗಳಿಗೆ ಹೋಗಬಹುದಾಗಿತ್ತು. ಆದರೆ ಅವರು ಹಾಗೆ ಮಾಡದೆ ಕೆಎಲ್ ಇ ಸಂಸ್ಥೆಯನ್ನು ಕಟ್ಟಿ ಇಂದು ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ನೆರವಾಗಿದ್ದಾರೆ ಎಂದು ಅವರು ಬಣ್ಣಿಸಿದರು. ಕೆಎಲ್ ಇ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಕೆಎಲ್ ಇ ಸಂಸ್ಥೆ ಬೆಳೆದು ಬಂದ ಇತಿಹಾಸವನ್ನು ಓದಬೇಕು. ಅತ್ಯಂತ ಕಷ್ಟದಲ್ಲಿ ಬೆಳೆದು ಬಂದ ಈ ಸಂಸ್ಥೆಯ ಇತಿಹಾಸವನ್ನು ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಓದಿ ಮನಗಾಣಬೇಕು ಎಂದು ಅವರು ಮನವಿ ಮಾಡಿದರು.
ನಾನು ಈ ಹೆಮ್ಮೆಯ ಸಂಸ್ಥೆಯ ಕಾರ್ಯಾಧ್ಯಕ್ಷನಾಗಲು ಅನೇಕರು ಸಹಕರಿಸಿದ್ದಾರೆ. ಶಿವಾನಂದ ಕೌಜಲಗಿ, ಪ್ರಕಾಶ ಹುಕ್ಕೇರಿ ಸೇರಿದಂತೆ ಅನೇಕರು ನನ್ನ ಜೊತೆಗಿದ್ದು ಸಲಹೆ, ಮಾರ್ಗದರ್ಶನ ನೀಡುವ ಕೆಲಸ ಮಾಡಿದ್ದಾರೆ. ಅವರೆಲ್ಲ ನೀಡಿರುವ ಸಹಕಾರವನ್ನು ಎಂದಿಗೂ ಮರೆಯಲಾರೆ. ಅದೇ ರೀತಿ ನನ್ನ ಧರ್ಮಪತ್ನಿ ಆಶಾ ಕೋರೆ ಅವರು ಸಹ ಈ ಸಂಸ್ಥೆಯ ಏಳಿಗೆಗೆ ನನ್ನ ಜೊತೆಗಿದ್ದು ಸದಾ ಸಲಹೆ, ಸೂಚನೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಅವರು ನೆನಪಿಸಿದರು.
ಬೆಳಗಾವಿ ಕೆಎಲ್ಇ ಸಂಸ್ಥೆ ಏಷ್ಯಾ ಅದರಲ್ಲೂ ಭಾರತದಲ್ಲಿ ಅದ್ವಿತೀಯವಾಗಿ ಪ್ರಗತಿ ಸಾಧಿಸಿದೆ. ಇದಕ್ಕೆ ನೇರ ಕಾರಣರು ಡಾ. ಪ್ರಭಾಕರ ಕೋರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಬಣ್ಣಿಸಿದರು.
ಕಳೆದ 40 ವರ್ಷಗಳಿಂದ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಪ್ರಭಾಕರ ಕೋರೆಯವರು ಸಂಸ್ಥೆಯನ್ನು ಮುನ್ನಡೆಸಿರುವ ಪರಿ ಎಂಥವರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ಇಂದು ಜಗತ್ತಿನಲ್ಲಿ ಅತ್ಯಂತ ಮೌಲಿಕ ಹಾಗೂ ಗುಣಮಟ್ಟದ ಸೇವೆ ನೀಡುತ್ತಿರುವುದು ಕನ್ನಡ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಕೊಂಡಾಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯ ಮಾನ್ಯರು ಡಾ.ಪ್ರಭಾಕರ ಕೋರೆಯವರ ಅದ್ವಿತೀಯ ಸಾಧನೆಯನ್ನು ಬಣ್ಣಿಸಿ ಆತ್ಮೀಯವಾಗಿ ಅಭಿನಂದಿಸಿದರು.
ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಮ ಗುರುಬಸವರಾಜ,ಈಗಾಗಲೇ ನಾವು 58 ಅಂಗ ಸಂಸ್ಥೆಗಳನ್ನು ಹೊಂದಿದ್ದೇವೆ. ನಾವು ಕೆಎಲ್ಇ ಸಂಸ್ಥೆಯನ್ನು ಮಾದರಿಯನ್ನಾಗಿಟ್ಟುಕೊಂಡು ಇನ್ನೂ ಹೆಚ್ಚಿನ ಸಂಸ್ಥೆಗಳನ್ನು ಹುಟ್ಟುಹಾಕಿ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಕಲ ವ್ಯವಸ್ಥೆಯನ್ನು ಮಾಡುತ್ತೇವೆ. ನಮಗೆಲ್ಲ ಡಾ. ಪ್ರಭಾಕರ ಕೋರೆ ಅವರು ಮಾದರಿ. ಲಿಂಗಾಯತ ಸಂಸ್ಥೆಗಳನ್ನು ಹೇಗೆ ಬೆಳೆಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶಶೀಲ್ ನಮೋಶಿ ಅವರು ಮಾತನಾಡಿ, ಒಂದೇ ಬಾರಿಗೆ ಹೈದರಾಬಾದ ಶಿಕ್ಷಣ ಸಂಸ್ಥೆ, ಕೆಎಲ್ಇ ಮತ್ತು ಶಾಮನೂರ ಶಿವಶಂಕರಪ್ಪ ಅವರ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಎಸ್ ನಿಜಲಿಂಗಪ್ಪ ಅವರು ಅನುಮತಿ ನೀಡಿದರು. ಕೆಎಲ್ಇ ಸಂಸ್ಥೆ ಸಾಕಷ್ಟು ಬೆಳೆದಿದೆ. ನಾವು ಹಿಂದೆ ಉಳಿದಿದ್ದೇವೆ. ನಾವು ಕೂಡ ಇದೇ ರೀತಿ ಬೆಳೆಸಲು ಸಹಾಯ ಸಹಕಾರ ನೀಡಬೇಕೆಂದು ಕೋರಿದರು.
ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಮಹಾಂತೇಶ ಕವಟಗಿಮಠ, ಕೆಎಲ್ಇ ಯುಎಸ್ಎಂ ನಿರ್ದೇಶಕರಾದ ಡಾ.ಎಚ್.ಬಿ.ರಾಜಶೇಖರ, ಬಿವಿಬಿ ಉಪಕುಲಪತಿ ಡಾ.ಅಶೋಕ ಶೆಟ್ಟರ ಅವರು ಅಭಿನಂದನಾ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಕೆಎಲ್ಇ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗೌರವ ಅತಿಥಿಗಳು ಡಾ.ಪ್ರಭಾಕರ ಕೋರೆ ಹಾಗೂ ಆಶಾ ಕೋರೆಯವರನ್ನು ಸತ್ಕರಿಸಿ ಅಭಿನಂದಿಸಿದರು. ಡಾ.ಪ್ರಭಾಕರ ಕೋರೆಯವರ 40 ವರ್ಷಗಳ ಪಯಣವನ್ನು ಹೊತ್ತ ‘ರತ್ನರಾಜ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಡಾ.ವಿ.ಎಸ್. ಸಾಧುನವರ, ಜಯಾನಂದ ಮುನವಳ್ಳಿ, ವಾಯ್.ಎಸ್.ಪಾಟೀಲ, ಶಂಕರಣ್ಣ ಮುನವಳ್ಳಿ, ಅನಿಲ ಪಟ್ಟೇದ, ಬಾಬಣ್ಣ ಮೆಟಗುಡ್, ಪ್ರವೀಣ ಬಾಗೇವಾಡಿ, ಅಮಿತ ಕೋರೆ, ಎಂ.ಸಿ.ಕೊಳ್ಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕೆಎಲ್ಇ ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಕೆಎಲ್ಇ ಆಡಳಿತ ಮಂಡಳಿಯ ಸದಸ್ಯರಾದ ಡಾ. ವಿ ಎಸ್ ಸಾಧುನವರ ಅವರು ವಂದಿಸಿದರು.