ಬೆಳಗಾವಿ :
ನಾವು ಅಳಿದು ಹೋದರೂ ನಾವು ಮಾಡಿದ ಕೆಲಸ ಕಾರ್ಯಗಳು ಉಳಿಯುತ್ತವೆ. ತಮ್ಮ ವಿಶಿಷ್ಟ ಅನುಭವಗಳನ್ನು ಲೇಖಕ ಪಿ.ಬಿ.ಸ್ವಾಮಿಯವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಮಂದಿನ ಪೀಳಿಗೆಗೆ ಇಲ್ಲಿರುವ ಅನುಭವಗಳು ದೀಪಸ್ಥಂಬವಾಗಿ ನಿಂತಿವೆಯಾದರೂ ನನಗಿನ್ನು ತೃಪ್ತಿಯಿಲ್ಲ. ವೈವಿಧ್ಯಮಯ ಜೀವನವನ್ನು ಹೊಂದಿರುವ ಈ ಲೇಖಕರಿಂದ ಆತ್ಮಚರಿತ್ರೆ ಹೊರಬಂದಾಗಲೇ ನನಗೆ ತೃಪ್ತಿ ಎಂದು ಹಿರಿಯ ಕವಿ, ನಿವೃತ್ತ ನ್ಯಾಯಾಧೀಶ ಡಾ. ಜಿನದತ್ತ ದೇಸಾಯಿ ಹೇಳಿದರು.
ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನವರು ಗುರುವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪಿ. ಬಿ. ಸ್ವಾಮಿಯವರು ರಚಿಸಿದ ಮನದಾಳದ ಮಹನೀಯರು ಮತ್ತು ಘಟನೆಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕೃತಿ ಪರಿಚಯ ಮಾಡಿದ ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಮಾತನಾಡಿ, ಪಿ.ಬಿ.ಸ್ವಾಮಿಯವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪಾರವಾದದ್ದು. ಗಡಿನಾಡಿಗೆ ಸಂಬಂಧಪಟ್ಟ, ಕನ್ನಡ – ಮರಾಠಿ ಬಾಂಧವ್ಯಕ್ಕೆ ಸಂಬಂಧ ಪಟ್ಟ ಲೇಖನಗಳನ್ನಿಲ್ಲಿ ಬರೆದಿದ್ದಾರೆ. ಇದೊಂದು ಸಂಗ್ರಾಹ್ಯಯೋಗ್ಯವಾದ ಕೃತಿಯೆಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಮಾತನಾಡಿ, ಇತ್ತೀಚೆಗೆ ಹತ್ತು ಹದಿನೈದು ಪುಸ್ತಕಗಳನ್ನು ಒಮ್ಮೆಲೆ ಬಿಡುಗಡೆ ಮಾಡುವ ಪದ್ದತಿ ಆರಂಭವಾಗಿದೆ. ಆದರೆ ಎಷ್ಟು ಪುಸ್ತಕ ಬಿಡುಗಡೆ ಮಾಡಿದೆವೆನ್ನುವುದಕ್ಕಿಂತ ಗಟ್ಟಿಕಾಳಿನ ಒಂದು ಪುಸ್ತಕವನ್ನು ಬರೆದರೂ ಸಾಕು. ಸ್ವಾಮಿಯವರು ಮೌಲ್ಯಯುತವಾದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರನ್ನು ಅಭಿನಂದಿಸೋಣ ಎಂದು ಹೇಳಿದರು.
ಲೇಖಕ ಪಿ. ಬಿ. ಸ್ವಾಮಿಯವರು ಮಾತನಾಡಿ, ಈ ಕೃತಿಯಲ್ಲಿ ಡಾ. ವಿ. ಕೆ. ಗೋಕಾಕ, ದ. ರಾ. ಬೇಂದ್ರೆ, ಡಾ. ಜಿನದತ್ತ ದೇಸಾಯಿ, ಡಾ. ಪಂಚಾಕ್ಷರಿ ಹಿರೇಮಠ, ಎಲ್. ಎಸ್. ಶಾಸ್ತ್ರಿ ಅವರ ಕುರಿತಾದ ಲೇಖನಗಳು, ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ, ಪಂಚಾಯತ ರಾಜ್ ವ್ಯವಸ್ಥೆ, ನನ್ನ ಚಿಕ್ಕಂದಿನ ಶಾಲಾ ದಿನಗಳ ಕುರಿತು ಹೀಗೆ ಹಲವಾರು ಲೇಖನಗಳನ್ನು ಬರೆದಿರುವ ಹಿನ್ನಲೆ ಕುರಿತು ಹೇಳಿ ಕೃತಿ ಹೊರಬರಲು ಸಹಕರಿಸಿದವರನ್ನು ನೆನಪಿಸಿಕೊಂಡರು.
‘ಅಂಬಿಕಾತನಯದತ್ತ’ ರಾಷ್ಟೀಯ ಪ್ರಶಸ್ತಿಗೆ ಭಾಜನರಾಗಿರುವ ಡಾ. ಜಿನದತ್ತ ದೇಸಾಯಿ ಹಾಗೂ ಲೇಖಕ ಪಿ. ಬಿ. ಸ್ವಾಮಿಯವರನ್ನು ಶಾಲು ಹೊದಿಸಿ ಫಲಪುಷ್ಟ ನೀಡಿ ಸನ್ಮಾನಿಸಲಾಯಿತು.
ಸುಪ್ರಿಯಾ ದೇಶಪಾಂಡೆ ಪ್ರಾರ್ಥಿಸಿದರು. ದೀಪಿಕಾ ಚಾಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಶೋಕ ಮಳಗಲಿ ನಿರೂಪಿಸಿದರು. ಎಂ. ಬಿ. ಹೊಸಳ್ಳಿ ವಂದಿಸಿದರು.